

ಬೆಂಗಳೂರು: ಅರುಣಾಕುಮಾರಿ ವಿಚಾರವಾಗಿ ಹಾಗೂ ಮೈಸೂರಿನ ಹೋಟೆಲ್ನಲ್ಲಿ ನಡೆದಿದೆ ಎನ್ನಲಾದ ಹಲ್ಲೆಗೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ನಡುವೆ ಉಂಟಾಗಿರುವ ಕಿತ್ತಾಟ ಇದೀಗ ಮತ್ತೊಂದು ಹಂತಕ್ಕೆ ಹೋಗಿದ್ದು, ಈ ವಿಚಾರದಲ್ಲೀಗ ದರ್ಶನ್ ಪತ್ನಿಯ ವಿಷಯವೂ ಪ್ರಸ್ತಾಪಗೊಂಡಿದೆ.
ನಿನ್ನೆ ಇಂದ್ರಜಿತ್ ಅವರು ವಕೀಲರೊಂದಿಗೆ ನಡೆಸಿದ ಸುದ್ದಿಗೋಷ್ಠಿಗೆ ಸಂಬಂಧಿಸಿದಂತೆ ದರ್ಶನ್ ಎತ್ತಿದ್ದ ಪ್ರಶ್ನೆಗೆ ಇಂದು ಇಂದ್ರಜಿತ್ ಮರುಪ್ರಶ್ನೆ ಎಸೆದಿದ್ದಾರೆ. ದರ್ಶನ್ ಡಿಸ್ಟರ್ಬ್ ಆಗಿದ್ದಾರೆ, ಅದಕ್ಕೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಹಾಗೆಲ್ಲ ಮಾತನಾಡುವುದು ಸರಿಯಲ್ಲ, ನೀವು ಎಂಥವರು ಎಂಬುದು ನಿಮ್ಮ ಭಾಷೆಯಲ್ಲೇ ತಿಳಿಯುತ್ತದೆ ಎಂದು ದರ್ಶನ್ ಹೇಳಿದ್ದ ಒಂದು ಆಕ್ಷೇಪಾರ್ಹ ಪದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಇಂದ್ರಜಿತ್, ದರ್ಶನ್ಗೆ ಸರಿಯಾಗಿ ಕನ್ನಡವೇ ಬರುವುದಿಲ್ಲ. ನಾನು ಹೇಳಿದ್ದನ್ನು ಅವರು ಅಪಾರ್ಥ ಮಾಡಿಕೊಂಡಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ.
ಮೊದಲು ಅವರು ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಮೈಸೂರಿನಲ್ಲಿ ಹೋಟೆಲ್ ಸಪ್ಲೈಯರ್ಗೆ ಹೊಡೆದಿದ್ದು ಹೌದೋ ಅಲ್ಲವೋ, ಒಬ್ಬ ಸಾಮಾನ್ಯ ಹುಡುಗನಿಗೆ ಹೊಡೆದಿದ್ದು ಎಷ್ಟು ಸರಿ, ಅರುಣಾಕುಮಾರಿಯನ್ನು ನಿಮ್ಮ ಮನೆಗೆ ಕರೆಸಿಕೊಂಡಿದ್ದೀರಾ? ಎಂಬೆಲ್ಲ ಪ್ರಶ್ನೆಗಳಿಗೆ ದರ್ಶನ್ ಉತ್ತರಿಸಬೇಕು ಎಂದು ಇಂದ್ರಜಿತ್ ಸವಾಲೆಸೆದಿದ್ದಾರೆ.
ನಿನ್ನೆ ವಕೀಲರನ್ನು ಯಾಕೆ ಕರೆಸಿಕೊಂಡಿದ್ದು ಎಂಬ ದರ್ಶನ್ ಪ್ರಶ್ನೆಗೂ ಇಂದ್ರಜಿತ್ ಪ್ರತಿಕ್ರಿಯಿಸಿದ್ದು, ನೀವು ನಿಮ್ಮ ಧರ್ಮಪತ್ನಿ ವಿಚಾರದಲ್ಲಿ ಯಾಕೆ ವಕೀಲರನ್ನು ಕರೆಸಿಕೊಂಡಿದ್ರಿ ಎಂದು ಮರುಪ್ರಶ್ನಿಸಿದ್ದಾರೆ. ನನ್ನ ಮೂಲಗಳು ತಿಳಿಸಿರುವ ಮಾಹಿತಿಗಳನ್ನು ನಾನು ಈಗಾಗಲೇ ಪೊಲೀಸರ ಬಳಿ ಹಂಚಿಕೊಂಡಿದ್ದೇನೆ ಎಂದಿರುವ ಇಂದ್ರಜಿತ್, ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡುವ ಸವಾಲನ್ನೂ ದರ್ಶನ್ಗೆ ಒಡ್ಡಿದ್ದಾರೆ.