ಡ್ರಗ್ಸ್ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​; ರವಿ ಬೆಳಗೆರೆ v/s ಇಂದ್ರಜಿತ್​ ಲಂಕೇಶ್​

ravi belagere- indrajit lankesh
Published on

ಬೆಂಗಳೂರು: ಡ್ರಗ್ಸ್​ ಮಾಫಿಯಾದಲ್ಲಿ ಕನ್ನಡ ಸಿನಿಮಾದ ಹಲವು ನಟ-ನಟಿ ಮತ್ತು ನಿರ್ದೇಶಕರು ಭಾಗಿಯಾಗಿರುವ ಬಗ್ಗೆ ಇಂದು ಸಿಸಿಬಿ ಕಚೇರಿಗೆ ಮಾಹಿತಿ ನೀಡಿ ಹೊರಬರುತ್ತಿದ್ದಂತೆ ಇಂದ್ರಜಿತ್​ ಲಂಕೇಶ್ ಅವರು ಹಿರಿಯ ಪತ್ರಕರ್ತ ರವಿ ಬೆಳಗೆರೆ ವಿರುದ್ಧ ಕಿಡಿಕಾರಿದ್ದಾರೆ.

'ಸಹೋದ್ಯೋಗಿಯನ್ನೇ ಕೊಲ್ಲಲು ಸುಫಾರಿ ಕೊಟ್ಟ ವ್ಯಕ್ತಿಯಿಂದ ಸಮಾಜಕ್ಕೆ ಏನು ಸಂದೇಶ ಕೊಡ್ತೀರಿ? ಸಮಾಜಕ್ಕೆ ಸಂದೇಶ ಕೊಡುವವರನ್ನು ಮಾಧ್ಯಮದವರು ಮಾತನಾಡಿಸಬೇಕೆ ಹೊರತು ಅವರನ್ನಲ್ಲ' ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿರಿ ಡ್ರಗ್ಸ್​ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ನ 15 ನಟ-ನಟಿಯರು, ಸಿಸಿಬಿಗೆ ಮಾಹಿತಿಕೊಟ್ಟ ಇಂದ್ರಜಿತ್​ ಲಂಕೇಶ್​

ಅಲ್ಲದೆ ಈ ಹಿಂದೆ 'ಕೇಶ'ದ ವಿಚಾರವಾಗಿ ರವಿ ಬೆಳಗೆರೆ ಮಾತನಾಡಿದ್ದರು. ಈ ಬಗ್ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಇಂದ್ರಜಿತ್​ ಲಂಕೇಶ್​, 'ಆ ಪತ್ರಕರ್ತನಿಗೆ ಸ್ವಂತಿಕೆಯೇ ಇಲ್ಲ. ಲಂಕೇಶ್​ ಒಬ್ಬ ಪ್ರಖ್ಯಾತ ಸಾಹಿತಿ. ಅವರ ಬಗ್ಗೆ ''ಲಂಕೇಶ್- ಕೇಶ ಅಷ್ಟೇ. ಕೇಶ ಅಂದ್ರ ಕೂದಲು'' ಅಂದ್ರು. ಅವರಿಗೆ ಒಂದು ಸಾಲನ್ನೂ ಸ್ವಂತಿಕೆಯಿಂದ ಹೇಳೋಕೆ ಬರಲ್ಲ. ಇದನ್ನು ನೋಡಿದ್ರೆ ನಗು ಬರುತ್ತೆ' ಎಂದು ಟೀಕಿಸಿದರು.

ಇಂದ್ರಜಿತ್​ ಹೇಳಿಕೆ ಕುರಿತು ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯಿಸಿದ ರವಿ ಬೆಳಗರೆ, 'ಅವನೊಬ್ಬ ಅವಿವೇಕಿ, ನಾನು ದಿನಕ್ಕೆ 60 ಪುಟ ಬರೆಯಬಲ್ಲೆ. ಅವನಿಗೆ ಒಂದು ತಾಸಿಗೆ ಒಂದು ಪುಟ ಬರೆಯಲೂ ಆಗಲ್ಲ. ಬೇಕಿದ್ದರೆ ಚಾಲೆಂಜ್​ ಮಾಡಲಿ' ಎಂದು ಸವಾಲು ಎಸೆದರು. 'ಇಂದ್ರಜಿತ್​ ಹೆಂಡ್ತಿ ಸಂಪಾದನೆಯಲ್ಲಿ ಬದುಕುತ್ತಿದ್ದಾನೆ. ಆತನ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?' ಎಂದು ಪ್ರಶ್ನಿಸಿದರು.

'ಲಂಕೇಶ್​ ಬಗ್ಗೆ ಅಪಾರ ಗೌರವಿದೆ. ಗೌರಿ ಲಂಕೇಶ್​ ಬಗ್ಗೆಯೂ ಕೂಡ' ಎಂದ ರವಿ ಬೆಳಗೆರೆ, 'ಇಂದ್ರಜಿತ್​ ಲಂಕೇಶ್​ ಒಬ್ಬ ಅವಿವೇಕಿ. ನಾನು ಏನು ಎಂದು ನನ್ನ ಓದುಗರಿಗೆ ಗೊತ್ತಿದೆ. ಲಕ್ಷಾಂತರ ಜನರು ನನ್ನ ಬರಹವನ್ನು ಪ್ರೀತಿಯಿಂದ ಓದುತ್ತಿದ್ದಾರೆ. ನಾನು ಏನು ಎಂದು ಅವನಿಂದ ಹೇಳಿಸಿಕೊಳ್ಳಬೇಕಿಲ್ಲ' ಎಂದರು. 'ಅಲ್ಲದೆ ಡ್ರಗ್ಸ್​ ಮಾಫಿಯಾದಲ್ಲಿ ಸ್ಯಾಂಡಲ್​ವುಡ್​ ನಟ-ನಟಿಯರು ಭಾಗಿಯಾಗಿರುವ ಬಗ್ಗೆ ಗೊತ್ತಿದ್ದರೆ ಬಹಿರಂಗವಾಗಿಯೇ ಹೇಳಲಿ. ಸತ್ಯ ಹೇಳೋಕೆ ಪೊಲೀಸರ ರಕ್ಷಣೆ ಯಾಕೆ ಬೇಕು. ಯಾರು ಏನು ಮಾಡ್ತಾರೆ?' ಎಂದು ಪ್ರಶ್ನಿಸಿದರು.

ಸ್ಯಾಂಡಲ್​ವುಡ್​ನ ಹಲವು ನಟ-ನಟಿಯರು ಹಾಗೂ ನಿರ್ದೇಶಕರು ಡ್ರಗ್ಸ್​ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದಿದ್ದ ಇಂದ್ರಜಿತ್​ ಲಂಕೇಶ್​, ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ? ಎಂದು ಪ್ರಶ್ನಿಸಿದ್ದರು. ಬಳಿಕ ಸತ್ತವರ ಬಗ್ಗೆ ಈಗ ಮಾತೋಡು ಸರಿಯಲ್ಲ ಎಂದು ಆ ಮಾತನ್ನು ವಾಪಸ್​ ಪಡೆದಿದ್ದರು. ಈ ಕುರಿತು ಇಂದ್ರಜಿತ್​ ಲಂಕೇಶ್​ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರವಿ ಬೆಳಗೆರೆ, 'ಚಿರಂಜೀವಿ ಸರ್ಜಾ ಅವರ ಹೆಸರಿಗೆ ಕಳಂಕ ಬರುವಂತೆ ನಡೆದುಕೊಂಡದ್ದು ಅಕ್ಷಮ್ಯ ಅಪರಾಧ' ಎಂದು ಜರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net