'ಡ್ರಗ್ಸ್​ ಜಾಲ ಬಯಲಿಗೆಳೆಯಲು ಇಂದ್ರಜಿತ್​ ಲಂಕೇಶ್​ಗೆ ರಕ್ಷಣೆ ನೀಡ್ತೇವೆ'

indrajit lankesh
Published on

ಚಿಕ್ಕಮಗಳೂರು: 'ಬೆಂಗಳೂರಿನ ಡ್ರಗ್ಸ್​ ಜಾಲ ಬಯಲಿಗೆಳೆಯಲು ಸಹಕರಿಸುವುದಾದರೆ ಚಲನಚಿತ್ರ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಅವರಿಗೆ ಪೊಲೀಸ್​ ಇಲಾಖೆ ಎಲ್ಲ ರೀತಿಯ ರಕ್ಷಣೆ ನೀಡಲಿದೆ' ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

'ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ನನಗೆ ಸರ್ಕಾರ ಸೂಕ್ತ ರಕ್ಷಣೆ ಕೊಟ್ಟರೆ ಇನ್ನಷ್ಟು ಸತ್ಯಗಳನ್ನು ಹೇಳುತ್ತೇನೆ' ಎಂದು ಇಂದ್ರಜಿತ್​ ಲಂಕೇಶ್​ ಹೇಳಿದ್ದರು. ಇದು ಇಡೀ ರಾಜ್ಯದಲ್ಲೇ ಭಾರೀ ಸಂಚಲನ ಮೂಡಿಸಿದ್ದು, ಚಂದನವನದತ್ತ ಎಲ್ಲರ ಕಣ್ಣು ದಿಟ್ಟಿಸಿದೆ. ಈ ಸಂದರ್ಭದಲ್ಲಿ ಇಂದ್ರಜಿತ್​ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸಿ.ಟಿ. ರವಿ, 'ಈ ವಿಚಾರದಲ್ಲಿ ಅವರಿಗೆ ಯಾರ ಬಗ್ಗೆಯೂ ಭಯ ಬೇಡ. ಪೊಲೀಸ್​ ಇಲಾಖೆ ಅವರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಿದ್ದು ಅವರು ಮುಕ್ತವಾಗಿ ಹೇಳಬೇಕು' ಎಂದರು. ಇದನ್ನೂ ಓದಿರಿ ಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್​ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ

'ಡ್ರಗ್ಸ್​ ಪ್ರಕರಣದಲ್ಲಿ ಆಗಾಗ ಸಹನಟರು ಸಿಕ್ಕಿಬೀಳುತ್ತಿದ್ದರು. ಈಗ ನಾಯಕ ನಟರ ಹೆಸರೇ ಕೇಳಿಬರುತ್ತಿದೆ. ಇದೊಂದು ವ್ಯವಸ್ಥಿತವಾದ ಅಂತಾರಾಷ್ಟ್ರೀಯ ಮತ್ತು ಅಂತಾರಾಜ್ಯ ಜಾಲವಾಗಿದೆ. ಇದನ್ನು ಬಗ್ಗುಬಡಿದು ಇನ್ನಷ್ಟು ಜನ ಬಲಿಯಾಗುವುದನ್ನು ತಪ್ಪಿಸಲು ಇಂದ್ರಜಿತ್​ ಲಂಕೇಶ್​ ಅವರ ಸಹಕಾರ ಅಗತ್ಯವಿದೆ. ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಯುತ್ತಿದ್ದು, ವ್ಯಸನಕ್ಕೆ ಒಳಗಾದವರು ಯಾರು? ವ್ಯಾಪಾರಿಗಳು ಯಾರು? ಎನ್ನುವುದು ತನಿಖೆ ಬಳಿಕ ತಿಳಿಯಲಿದೆ' ಎಂದು ಸಿ.ಟಿ. ರವಿ ಹೇಳಿದರು.

ರಾಜ್ಯದಲ್ಲಿನ ಡ್ರಗ್ಸ್​ ಮಾಫಿಯಾ ಕುರಿತು ಮಾತನಾಡಿರುವ ಗೃಹ ಸಚಿವ ಬಸವರಾಜು ಬೊಮ್ಮಾಯಿ, ಡ್ರಗ್ಸ್​ ಪೆಡ್ಲರ್​ಗಳ ವಿರುದ್ಧ ಸಮರ ಸಾರಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಡ್ರಗ್ಸ್ ಮಾಫಿಯಾವನ್ನು ಕಿತ್ತೊಗೆಯಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net