ದೋಸ್ತ್​, ದೋಸ್ತ್​ ನಾ ರಹಾ! ಭಾರತ-ಅಮೆರಿಕದ್ದು ಸಹಕಾರದ ಸಂಬಂಧ

Untitled design (2)
Published on

‘ಅತ್ಯಂತ ಕ್ರೂರ, ಕರಾಳ ಚೀನಾಗಾಗಿ, ನಾವು ಭಾರತ ಮತ್ತು ರಷ್ಯಾವನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಜತೆಗೂಡಿ ಅವರು ಬಹುಕಾಲ ಸಮೃದ್ಧಿಯಿಂದಿರಲಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುತ್’ನಲ್ಲಿ ಬರೆದುಕೊಂಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಚೀನಾದ ಸಖ್ಯ ಮಾಡಿ ಭಾರತ ಮತ್ತು ರಷ್ಯಾ ನಮ್ಮಿಂದ ದೂರವಾದವು. ಇದರಿಂದ, ಅಮೆರಿಕವು ಭಾರತವನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ. ಇದು ಟ್ರಂಪ್ ಪಶ್ಚಾತ್ತಾಪದ ಮಾತುಗಳೆ? ಭಾರತವೆಂಬ ಹಳೆಯ ಸ್ನೇಹಿತ ದೂರವಾಗುತ್ತಿರುವ ನೋವೇ ಅಥವಾ ಹೊಸ ಜಾಗತಿಕ ಶಕ್ತಿಯ ವಿಕಾಸವನ್ನು ಕಂಡು ಅಸೂಯೆಯೇ ಎಂಬುದು ಸ್ಪಷ್ಟವಾಗಲು ಕೆಲ ದಿನಗಳು ಬೇಕು. ಆದರೆ, ಭಾರತ ಮತ್ತು ಅಮೆರಿಕದ್ದು ಹಿಂದಿನಿಂದಲೂ ಉತ್ತಮ ದ್ವಿಪಕ್ಷೀಯ ಸಂಬಂಧ. ಇದಕ್ಕೆ ಇತಿಹಾಸದ ಹಾದಿಯೇ ಸಾಕ್ಷಿಯಾಗಿದೆ. ಟ್ರಂಪ್ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಇದನ್ನು ಹಾಳುಗೆಡವಿದ್ದು ಹೇಗೆ, ಏಕೆ? ಎಂಬುದರ ವಿವರ ಇಲ್ಲಿದೆ.

ಚೀನಾದ ಟಯಾನ್​ಜಿನ್ ನಗರದಲ್ಲಿ ಆಗಸ್ಟ್ 31ರಿಂದ ಸೆಪ್ಟೆಂಬರ್ 1ರವರೆಗೆ ನಡೆದ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ (ಎಸ್​ಸಿಒ) ವಾರ್ಷಿಕ ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲ್ನೋಟಕ್ಕೆ ನಿರ್ಲಕ್ಷಿಸಿದಂತೆ ವರ್ತಿಸಿದರೂ, ಅಲ್ಲಿನ ಬೆಳವಣಿಗೆಗಳು ಅವರನ್ನು ಪ್ರಭಾವಿಸಿವೆ ಎಂಬುದಕ್ಕೆ ಟ್ರಂಪ್ ಅವರ ಈಗಿನ ಮಾತುಗಳೇ ಸಾಕ್ಷಿ. ಎಸ್​ಸಿಒ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಪರಸ್ಪರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ವೇಳೆ ರಾಜತಾಂತ್ರಿಕ ಸಂಬಂಧ, ಪ್ರಾದೇಶಿಕ ಸಹಕಾರ, ಅಮೆರಿಕ ಸುಂಕ ಸಮರದಿಂದಾಗಿ ವಿಶ್ವ ವ್ಯಾಪಾರದ ಮೇಲೆ ಉಂಟಾಗಿರುವ ಪರಿಣಾಮ, ಜಾಗತಿಕ ಬೆಳವಣಿಗೆಗಳ ಕುರಿತು ರ್ಚಚಿಸಿದ್ದರು. ಜಾಗತಿಕ ಮಾಧ್ಯಮಗಳು ಈ ಶೃಂಗಸಭೆಯನ್ನು ವಿಶ್ಲೇಷಿಸುತ್ತ ಅಮೆರಿಕದ ಹಠಮಾರಿ ನೀತಿಯಿಂದಾಗಿ ಚೀನಾ, ಭಾರತ, ರಷ್ಯಾದ ಸ್ನೇಹ ಬಲಗೊಂಡಿದೆ ಎಂದಿದ್ದವು.

ಕೊನೆಗೂ, ಟ್ರಂಪ್ ಚೀನಾವನ್ನು ದೂಷಿಸುತ್ತ ಭಾರತ, ರಷ್ಯಾವನ್ನು ಅಮೆರಿಕ ಕಳೆದುಕೊಳ್ಳುತ್ತಿರುವ ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆ. ಸುಂಕನೀತಿಯ ಕುರಿತು ಅಮೆರಿಕದ ಬೆದರಿಕೆ ನೀತಿಗೆ ಬಗ್ಗದೆ ಭಾರತ ಪರ್ಯಾಯ ಹೆಜ್ಜೆಗಳನ್ನು ಇರಿಸಿದ್ದು ಟ್ರಂಪ್ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದ ಹಳೆಯ ಮತ್ತು ಆಪ್ತಸ್ನೇಹಿತರಾಗಿದ್ದ ಭಾರತ-ಅಮೆರಿಕ ನಡುವಿನ ಬಾಂಧವ್ಯಕ್ಕೆ ಪೆಟ್ಟುಬಿದ್ದಿದೆ. ‘ಎರಡೂ ದೇಶಗಳ ನಡುವಿನ ಸಂಬಂಧ ಈಗ ತುಂಬ ಹಿಂದಕ್ಕೆ ಹೋಗಿದೆ’ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಭಾರತ-ಅಮೆರಿಕ ನಡುವಿನ ಸ್ನೇಹ ಮತ್ತೆ ಮರುಸ್ಥಾಪಿತವಾಗಬೇಕು. ಇದರಿಂದ ಎರಡೂ ರಾಷ್ಟ್ರಗಳಿಗೆ ಹಿತ ಎಂದೂ ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸ್ನೇಹದಲ್ಲಿ ಬಿರುಕು

ಭಾರತ-ಚೀನಾ ಸಂಬಂಧ ಸ್ನೇಹ, ವಿವಾದ ಎರಡನ್ನೂ ಹೊಂದಿದೆ. ಚೀನಾದೊಂದಿಗೆ ವಾಣಿಜ್ಯ ಸಂಬಂಧ ಇದ್ದರೂ, ಗಡಿವಿವಾದದಿಂದಾಗಿ ಆಗಾಗ ಪರಿಸ್ಥಿತಿ ಉದ್ವಿಗ್ನವಾಗುವುದುಂಟು. ರಷ್ಯಾದೊಂದಿಗೆ ಭಾರತದ್ದು ಗಟ್ಟಿ ಸ್ನೇಹ. ಅದರಂತೆಯೇ ಅಮೆರಿಕದ ಜತೆಗೂ ಮುಂಚೆಯಿಂದಲೂ ಉತ್ತಮ ದ್ವಿಪಕ್ಷೀಯ ಸಂಬಂಧ. ಕಾಲದ ಓಟದಲ್ಲಿ ಈ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಎತ್ತರಕ್ಕೆ ಹೋಯಿತು. ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರವಾದ ಅಮೆರಿಕ ಮತ್ತು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ನಡುವೆ ಸಹಕಾರದ ಹಾದಿ ದೀರ್ಘಕಾಲದಿಂದಲೂ ಇದೆ. ರಿಪಬ್ಲಿಕನ್, ಡೆಮಾಕ್ರಟಿಕ್ ಈ ಎರಡೂ ಪಕ್ಷಗಳ ಅಧಿಕಾರಾವಧಿಯಲ್ಲೂ ಈ ಸ್ನೇಹಕ್ಕೆ ತೊಂದರೆ ಆಗಿರಲಿಲ್ಲ. ಅಷ್ಟೇಕೆ, ಟ್ರಂಪ್ ಮೊದಲ ಅವಧಿಯಲ್ಲೂ (2017-2021) ಬಾಂಧವ್ಯ ಗಟ್ಟಿಗೊಂಡಿತ್ತು.

ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ಸ್ನೇಹ ಜಾಗತಿಕವಾಗಿ ಗಮನಸೆಳೆಯಿತು. 2025ರ ಜನವರಿಯಲ್ಲಿ ಟ್ರಂಪ್ ಎರಡನೇ ಬಾರಿ ಅಧ್ಯಕ್ಷರಾಗುತ್ತಿದ್ದಂತೆ ಸ್ವಲ್ಪ ದಿನ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ, ರಷ್ಯಾ-ಯೂಕ್ರೇನ್ ಯುದ್ಧವನ್ನು ನಿಲ್ಲಿಸಿ ನೊಬೆಲ್ ಪ್ರಶಸ್ತಿ ಪಡೆದುಬಿಡಬೇಕೆಂಬ ಟ್ರಂಪ್ ಆಸೆಯೇ ಭಾರತದ ಜತೆಗಿನ ಸ್ನೇಹದಲ್ಲಿ ಬಿರುಕು ಸೃಷ್ಟಿಸಿತು. ಅಲ್ಲದೆ, ‘ಭಾರತ-ಪಾಕಿಸ್ತಾನ ನಡುವಿನ ಸಮರವನ್ನು (ಆಪರೇಷನ್ ಸಿಂಧೂರ) ನಿಲ್ಲಿಸಲು ಯಾವುದೇ ಮೂರನೇ ರಾಷ್ಟ್ರ ಮಧ್ಯಪ್ರವೇಶಿಸಿಲ್ಲ’ ಎಂದು ಸರ್ಕಾರ ಸಂಸತ್ತಿನಲ್ಲಿಯೇ ಸ್ಪಷ್ಟಪಡಿಸಿದ್ದು, ಟ್ರಂಪ್ ಅಹಂಕಾರಕ್ಕೆ ಪೆಟ್ಟು ನೀಡಿತು. ‘ಸಮರವನ್ನು ನಿಲ್ಲಿಸಿದ್ದು ನಾನೇ. ಇಲ್ಲದಿದ್ದಲ್ಲಿ ಅವು ಅಣ್ವಸ್ತ್ರಗಳನ್ನು ಬಳಸುವ ಅಪಾಯವಿತ್ತು’ ಎಂದು ಟ್ರಂಪ್ 10ಕ್ಕೂ ಹೆಚ್ಚು ಬಾರಿ ವಿವಿಧ ಸಂದರ್ಭಗಳಲ್ಲಿ ಹೇಳಿದ್ದರು. ‘ಭಾರತದ ಹಿತಾಸಕ್ತಿಗಾಗಿ ರಷ್ಯಾದಿಂದ ಕಚ್ಚಾ ತೈಲ ಖರೀದಿ ಮುಂದುವರಿಸುತ್ತೇವೆ’ ಎಂದು ವಿದೇಶಾಂಗ ಸಚಿವ ಜೈಶಂಕರ್ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದೇ ಶ್ವೇತಭವನದಲ್ಲಿ ಅತೃಪ್ತಿ ಮನೆಮಾಡಿತು.

ಬದ್ಧತೆಯ ಮಾತು...

ಪ್ರಜಾಪ್ರಭುತ್ವ, ಸ್ವಾತಂತ್ರ್ಯ ವೈವಿಧ್ಯತೆ ಮತ್ತು ಧೈರ್ಯಶೀಲತೆಗೆ ಬದ್ಧವಾಗಿರುವ ಭಾರತ-ಅಮೆರಿಕ, ಮೌಲ್ಯಗಳು ಮತ್ತು ಪರಸ್ಪರ ಹಿತಾಸಕ್ತಿಗಳ ಪರಿಮಿತಿಗೊಳಪಟ್ಟಿವೆ. ಜಂಟಿ ಸಹಭಾಗಿತ್ವದ ಮೂಲಕ ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಭದ್ರತೆ ಮತ್ತು ಶಾಂತಿ ರೂಪಿಸುವಲ್ಲಿ ನೆರವಾಗಲು ಸಾಧ್ಯವಿದೆ. ನ್ಯಾಯ ಮತ್ತು ಸಮಾನತೆ ಉಭಯ ದೇಶಗಳ ನಾಗರಿಕರ ಸಮಾನ ಬಯಕೆಯಾಗಿದ್ದು, ಅಮೆರಿಕ ಮತ್ತು ಭಾರತದ ನಡುವಿನ ಒಪ್ಪಂದಗಳು ಈ ಬಯಕೆಯಲ್ಲಿ ಆಳವಾಗಿ ಬೇರೂರಿವೆ. 1893ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವದ ಸರ್ವಧರ್ಮ ಮಹಾಸಭೆಯಲ್ಲಿ ಹಿಂದೂಧರ್ಮವನ್ನು ಒಂದು ವಿಶ್ವಧರ್ಮವಾಗಿ ಸಾದರಪಡಿಸಿದ ಸ್ವಾಮಿ ವಿವೇಕಾನಂದರು ಮಾಡಿದ್ದೂ ಇದನ್ನೇ.

-2014ರ ಸೆ. 30ರಂದು ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಮೋದಿ-ಒಬಾಮ ಜಂಟಿ ಲೇಖನದ ಆಯ್ದ ಭಾಗ

ಆ ದಿನಗಳು

ಟ್ರಂಪ್​ರ ಮೊದಲ ಅವಧಿಯಲ್ಲಿ 2019ರ ಸೆಪ್ಟೆಂಬರ್​ನಲ್ಲಿ ‘ಹೌಡಿ ಮೋದಿ’ ರ‍್ಯಾಲಿ ಹ್ಯೂಸ್ಟನ್ ನಗರದಲ್ಲಿ ಆಯೋಜನೆಗೊಂಡಾಗ ಅಲ್ಲಿ 50 ಸಾವಿರಕ್ಕಿಂತಲೂ ಹೆಚ್ಚಿನ ಜನಸಂದಣಿ ಸೇರಿತ್ತು. ನಂತರ 2020ರ ಫೆಬ್ರವರಿಯಲ್ಲಿ ಗುಜರಾತ್​ನ ಅಹ್ಮದಾಬಾದ್​ನಲ್ಲಿ ‘ನಮಸ್ತೇ ಟ್ರಂಪ್’ ಕಾರ್ಯಕ್ರಮ ಆಯೋಜನೆಗೊಂಡಾಗ ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಜನಸಾಗರ ನೆರೆದಿತ್ತು!

ಹಿನ್ನಡೆ

ರಕ್ಷಣೆ, ವ್ಯಾಪಾರ ವಹಿವಾಟು, ವಿಜ್ಞಾನ-ತಂತ್ರಜ್ಞಾನ, ಆರ್ಥಿಕತೆ ಸೇರಿದಂತೆ ಹಲವು ರಂಗಗಳಲ್ಲಿ ಭಾರತ-ಅಮೆರಿಕ ಸಹಕಾರದ ನೀತಿ ಅಬಾಧಿತವಾಗಿ ಮುಂದುವರಿದಿತ್ತು. ಆದರೆ, ಟ್ರಂಪ್ ನೀತಿಗಳು ಇದೆಲ್ಲದರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ.

ಬಾಂಧವ್ಯದ ಹಾದಿ

ಭಾರತ ಮತ್ತು ಅಮೆರಿಕದ ಬಾಂಧವ್ಯ ಎಷ್ಟು ಗಟ್ಟಿಯಾಗಿತ್ತು ಎಂದರೆ ಭಾರತದ ಹಲವು ಪ್ರಧಾನಿಗಳು ಅಮೆರಿಕದ ಸಂಸತ್ತನ್ನು (ಕಾಂಗ್ರೆಸ್) ಉದ್ದೇಶಿಸಿ ಮಾತನಾಡಿದರು. ಈ ಬೆಳವಣಿಗೆಯ ನಂತರ ಪ್ರತಿಬಾರಿಯೂ ಸಹಕಾರ ಹೆಚ್ಚಿತ್ತು. ಅಮೆರಿಕ ಸಂಸತ್ತಿನಲ್ಲಿ ನಮ್ಮ ಪ್ರಧಾನಿಗಳು ಆಡಿದ ಮಾತುಗಳು ಇಲ್ಲಿವೆ...

ಅಮೆರಿಕದ ಬುದ್ಧಿಶಕ್ತಿ ಮತ್ತು ಹೃದಯವೈಶಾಲ್ಯದ ಅನ್ವೇಷಣೆಯ ಜತೆಗೆ ಭಾರತದ ಬುದ್ಧಿಶಕ್ತಿ ಹಾಗೂ ಮನಸ್ಸನ್ನು ನಿಮಗೆ ಪರಿಚಯಿಸುವ ಉದ್ದೇಶದಿಂದ ನಾನಿಲ್ಲಿಗೆ ಬಂದಿದ್ದೇನೆ. ಎರಡೂ ರಾಷ್ಟ್ರಗಳು ಸಹಭಾಗಿತ್ವ ವೃದ್ಧಿಸಿಕೊಳ್ಳುತ್ತವೆ ಎಂಬ ಭರವಸೆ ನನಗಿದೆ. |ಜವಾಹರಲಾಲ್ ನೆಹರು, 1949ರ ಅಕ್ಟೋಬರ್ 13 ಭಾರತವನ್ನು ಬಲಿಷ್ಠ, ಸ್ವಾವಲಂಬಿ ಹಾಗೂ ಮಾನವರ ಸೇವೆಯಲ್ಲಿ ಜಗತ್ತಿನ ಅಗ್ರಗಣ್ಯ ರಾಷ್ಟ್ರವನ್ನಾಗಿಸುವ ಕನಸಿದೆ. ಸಮರ್ಪಣಾ ಭಾವ, ಕಠಿಣ ಪರಿಶ್ರಮ ಹಾಗೂ ನಮ್ಮ ಜನರ ದೃಢ ಸಂಕಲ್ಪದಿಂದ ಆ ಕನಸನ್ನು ನನಸು ಮಾಡಿಕೊಳ್ಳಲು ನಾನು ಬದ್ಧನಾಗಿದ್ದಾನೆ. ಹೀಗಾಗಿ ಈ ನಿಟ್ಟಿನಲ್ಲಿ ನಮಗೆ ಸಿಗುವ ಎಲ್ಲ ನೆರವನ್ನೂ ನಾನು ಸ್ವಾಗತಿಸುತ್ತೇನೆ. | ರಾಜೀವ್ ಗಾಂಧಿ, 1985ರ ಜೂನ್ 13 ಅಮೆರಿಕ - ಭಾರತ ಇತಿಹಾಸದ ಉದ್ದಕ್ಕೂ ಮಹತ್ವದ ಒಪ್ಪಂದಗಳಿಗೆ ಸಾಕ್ಷಿಯಾಗಿವೆ. ಇಂಡೋ-ಅಮೆರಿಕ ಸಂಬಂಧ ಇಂದು ಹೊಸ ಯುಗದ ಹೊಸ್ತಿಲಿನಲ್ಲಿದೆ. ಜಾಗತಿಕ ಏಳಿಗೆ ಹಾಗೂ ಶಾಂತಿಗೆ ಭಾರತ ಕೊಡುಗೆ ನೀಡಲು ಬಯಸುತ್ತಿದ್ದು, ಈ ನಿಟ್ಟಿನಲ್ಲಿ ಅಮೆರಿಕ ಹಾಗೂ ಅದರ ಜನರ ಸಹಕಾರವನ್ನು ನಾವು ಎದುರು ನೋಡುತ್ತಿದ್ದೇವೆ. | ಪಿ.ವಿ. ನರಸಿಂಹ ರಾವ್, 1994ರ ಮೇ 18 ನಮ್ಮ ಹಿತಾಸಕ್ತಿ ಸುಭದ್ರವಾಗಿರಲು ಪ್ರಜಾಪ್ರಭುತ್ವ, ಸಮೃದ್ಧ, ಸಹಿಷ್ಣು, ಬಹುತ್ವ ಹಾಗೂ ಸದೃಢ ಏಷ್ಯಾವನ್ನು ಬಯಸಿದ್ದೇ ಆದರೆ ಈ ಹಿಂದಿನ ಕೆಲವೊಂದು ಕಲ್ಪನೆಗಳನ್ನು ಮರುಪರಿಶೀಲನೆಗೆ ಒಳಪಡಿಸಬೇಕಾದ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ಏಷ್ಯಾದ ಆರ್ಥಿಕ ಹಾಗೂ ಸಾಂಸ್ಕೃತಿಕ ವಲಯಗಳಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ನಿಲ್ಲಲಿದೆ. |ಅಟಲ್ ಬಿಹಾರಿ ವಾಜಪೇಯಿ, 2000ರ ಸೆಪ್ಟೆಂಬರ್ 14 ಅಮೆರಿಕ ಮತ್ತು ಭಾರತ ಸೇರಿ ಎಲ್ಲ ಬಗೆಯ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಸನ್ನದ್ಧವಾಗಬೇಕಿದೆ. ಈ ಕ್ಷೇತ್ರದ ಹೋರಾಟದಲ್ಲಿ ನಮ್ಮ ‘ನಿರ್ದಿಷ್ಟ ಆಯ್ಕೆಗಳಿಲ್ಲ’. ಭಯೋತ್ಪಾದನೆ ಎಲ್ಲೆಲ್ಲಿ ಇದೆಯೋ ಅಲ್ಲಿ ಹೋರಾಡಲು ಬದ್ಧರಾಗಿದ್ದೇವೆ. ಏಕೆಂದರೆ, ಎಲ್ಲೆಲ್ಲಿ ಪ್ರಜಾಪ್ರಭುತ್ವ ಇದೆಯೋ ಅಲ್ಲೆಲ್ಲ ಭಯೋತ್ಪಾದನೆಯ ಆತಂಕ ಎದುರಾಗಿದೆ. | ಡಾ.ಮನಮೋಹನ್ ಸಿಂಗ್, 2005ರ ಜುಲೈ 19 ಭಾರತ ಮತ್ತು ಅಮೆರಿಕದ ಸಮಾಜಗಳು ಹಾಗೂ ಸಂಸ್ಥೆಗಳಿಗೆ ಜನತಾಂತ್ರಿಕ ಮೌಲ್ಯಗಳೇ ಅಡಿಪಾಯ. ಈ ವೈವಿಧ್ಯತೆ ಬಗ್ಗೆ ಎರಡೂ ದೇಶಗಳಿಗೆ ಅಪಾರ ಹೆಮ್ಮೆಯಿದೆ. ಇಂದು ಭಾರತ ಮತ್ತು ಅಮೆರಿಕ ಸಾಗರದ ಆಳದಿಂದ ಆಗಸದ ಎತ್ತರಕ್ಕೆ, ಪ್ರಾಚೀನ ಸಂಸ್ಕೃತಿಯಿಂದ ಕೃತಕ ಬುದ್ಧಿಮತ್ತೆವರೆಗೆ ಭುಜಕ್ಕೆ ಭುಜ ಕೊಟ್ಟು ನಡೆಯುತ್ತಿವೆ. | ನರೇಂದ್ರ ಮೋದಿ, 2023ರ ಜೂನ್ 22

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net