ಭಾರತ-ಫ್ರಾನ್ಸ್ ಮಹತ್ವದ ರಕ್ಷಣಾ ಒಪ್ಪಂದ

France India
Published on

ನವದೆಹಲಿ: ಮುಂದಿನ ತಲೆಮಾರಿನ (ನೆಕ್ಸ್ಟ್ ಜನರೇಷನ್) ಸಮರ ವಿಮಾನದ ಇಂಜಿನ್​ಗಳನ್ನು ಅಭಿವೃದ್ಧಿಪಡಿಸಲು ಫ್ರಾನ್ಸ್​ನೊಂದಿಗೆ 61,000 ಕೋಟಿ ರೂಪಾಯಿಗಳ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲು ಭಾರತ ನಿರ್ಧರಿಸಿದೆ. ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಸದೃಢಗೊಳಿಸುವುದು ಹಾಗೂ ದೀರ್ಘಾವಧಿಯಿಂದ ನಡೆದು ಬಂದಿರುವ ವಿದೇಶಿ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಇದರ ಗುರಿಯಾಗಿದೆ.ಅಡ್ವಾನ್ಸ್ಡ್​ ಮೀಡಿಯಂ ಕಾಂಬ್ಯಾಟ್ ಏರ್​ಕ್ರಾಫ್ಟ್ (ಎಎಂಸಿಎ)ನಂಥ ಭವಿಷ್ಯದ ಯುದ್ಧ ವಿಮಾನಗಳಿಗೆ ಶಕ್ತಿಯೊದಗಿಸುವ ಹೊಸ 120ಕಿಲೋನ್ಯೂಟನ್ (ಕೆಎನ್) ಇಂಜಿನ್​ಗಳ ವಿನ್ಯಾಸ ಮತ್ತು ನಿಮಾಣಕ್ಕೆ ಈ ಯೋಜನೆ ಗಮನ ಕೇಂದ್ರೀಕರಿಸಲಿದೆ. ಭಾರತದ ಎಲ್ಲ ಹಾಲಿ ಫೈಟರ್ ಜೆಟ್​ಗಳ ಇಂಜಿನ್​ಗಳು ವಿದೇಶಿ ನಿರ್ವಿುತವಾಗಿದ್ದು ದೀರ್ಘಾವಧಿ ನಿರ್ವಹಣೆ ವೆಚ್ಚ ಸಹಿತ ಅಪಾರ ಆರ್ಥಿಕ ಹೊರೆಯಾಗುತ್ತಿದೆ.

ರಕ್ಷಣಾ ಸಚಿವಾಲಯ ಅಸ್ತು

ಫ್ರೆಂಚ್ ಕಂಪನಿ ಸಫ್ರಾನ್ ಮತ್ತು ಅಮೆರಿಕದ ರೋಲ್ಸ್ ರಾಯ್ಸ್​ ಪ್ರಸ್ತಾಪನೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ರಕ್ಷಣಾ ಇಲಾಖೆ, ಫ್ರಾನ್ಸ್ ಜತೆ ಕೈಜೋಡಿಸಲು ಶಿಫಾರಸು ಮಾಡಿದೆ. ತಂತ್ರಜ್ಞಾನ ವರ್ಗಾವಣೆ ಮತ್ತು ಕ್ಲಪ್ತ ಸಮಯದಲ್ಲಿ ನೀಡುವಿಕೆ ಕುರಿತ ಸಫ್ರಾನ್ ಪ್ರಸ್ತಾಪನೆಗಳು ಭಾರತದ ಹಿತಾಸಕ್ತಿಗೆ ಪೂರಕವಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಪ್ರಸ್ತಾಪವನ್ನು ದೃಢವಾಗಿ ಬೆಂಬಲಿಸಿದ್ದಾರೆ ಎನ್ನಲಾಗಿದೆ. ಸಿಂಗ್, ನಿರ್ದಿಷ್ಟವಾಗಿ ಇಂಜಿನ್ ಉತ್ಪಾದನೆ ಸಹಿತ ರಕ್ಷಣಾ ಕ್ಷೇತ್ರದಲ್ಲಿ ದೇಶೀಯ ಸಾಮರ್ಥ್ಯ ವೃದ್ಧಿಯ ಕಟ್ಟಾ ಪ್ರತಿಪಾದಕರಾಗಿದ್ದಾರೆ.

ವಿಫಲ ಕಾವೇರಿ ಯೋಜನೆ

ಇಂಥ ಇಂಜಿನ್​ಗಳನ್ನು ಅಭಿವೃದ್ಧಿ ಪಡಿಸುವುದು ಸುಲಭದ ಕೆಲಸವಲ್ಲ. ಕೆಲವು ದೇಶಗಳು ಮಾತ್ರವೇ ಈ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿವೆ. ಭಾರತ ಹಿಂದೆ ‘ಕಾವೇರಿ’ ಯೋಜನೆಯಡಿ ತನ್ನದೇ ಸ್ವಂತ ಫೈಟರ್ ಜೆಟ್ ಇಂಜಿನ್​ಗಳನ್ನು ನಿರ್ವಿುಸಲು ನಡೆಸಿದ ಪ್ರಯತ್ನ ಕೈಗೂಡಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net