

ರಾಯ್‌ಪುರ: ಕಳೆದ ಒಂದು ತಿಂಗಳಿನಿಂದ ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಸರಣಿಯಾಗಿ ಸ್ವೀಕರಿಸುತ್ತಿರುವ ಇಂಡಿಗೋ ವಿಮಾನ ಸಂಸ್ಥೆಗೆ ಇಂದು ಸಹ ಕಿಡಿಗೇಡಿಗಳ ಬೆದರಿಕೆ ಕರೆ ಬಂದಿದ್ದು, ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಸ್ಫೋಟಿಸುವುದಾಗಿ ಬೆದರಿಕೆ ಕೇಳಿಬಂದ ಬೆನ್ನಲ್ಲೇ ವಿಮಾನ ರಾಯ್‌ಪುರ ಏರ್ಪೋರ್ಟ್ನಲ್ಲಿ ತುರ್ತು ಭೂಸ್ಪರ್ಶ ಮಾಡಿತು. ಇದು ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಸಿದ್ದು, ವಿಮಾನಯಾನ ಬೇಡವೇ ಬೇಡ ಎನ್ನುವಂತೆ ಮಾಡಿದೆ.
ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ನೀಡಿದ ಮಾಹಿತಿ ಪ್ರಕಾರ, ವಿಮಾನಯಾನ ಸಂಸ್ಥೆಗೆ ಬೆದರಿಕೆ ಬಂದ ಬೆನ್ನಲ್ಲೇ ನಾಗ್‌ಪುರದಿಂದ ಕೋಲ್ಕತ್ತಾಗೆ ವಿಮಾನ ಹಾರಾಟವನ್ನು ತಿರುಗಿಸಲಾಯಿತು. ಇಂಡಿಗೋ ವಿಮಾನದಲ್ಲಿದ್ದ ಎಲ್ಲಾ 187 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ತಕ್ಷಣವೇ ಅಲ್ಲಿಂದ ಸ್ಥಳಾಂತರಿಸಲಾಯಿತು ಮತ್ತು ರಾಯ್‌ಪುರ ವಿಮಾನ ನಿಲ್ದಾಣದ ವಿಶ್ರಾಂತಿ ಕೋಣೆಗೆ ಸ್ಥಳಾಂತರಿಸಲಾಯಿತು ಎಂದಿದ್ದಾರೆ.
ಬೆದರಿಕೆಗೆ ಸಂಬಂಧಿಸಿದಂತೆ ಓರ್ವ ಪ್ರಯಾಣಿಕನನ್ನು ಸದ್ಯ ಬಂಧಿಸಲಾಗಿದೆ. ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಎಚ್ಚರಿಕೆ ನೀಡಿ ಬೆದರಿಕೆ ಸಂದೇಶ ರವಾನಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆತನನ್ನು ಮನ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಸಂತೋಷ್ ಸಿಂಗ್ ತಿಳಿಸಿದ್ದಾರೆ.
"ನಾಗ್ಪುರದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ಫ್ಲೈಟ್ 6E812 ನಲ್ಲಿ ಬಾಂಬ್ ಇರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು. ಪ್ರಾಥಮಿಕ ವಿಚಾರಣೆಯಲ್ಲಿ, ಪ್ರಯಾಣಿಕರಲ್ಲಿ ಒಬ್ಬರಾದ ನಿಮೇಶ್ ಮಂಡಲ್ ಸಂದೇಶದ ಮೂಲಕ ಈ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನಾವು ವಿಮಾನವನ್ನು ಸಿಐಎಸ್‌ಎಫ್ ತಂಡದೊಂದಿಗೆ ಸಂಪೂರ್ಣವಾಗಿ ಪರಿಶೀಲಿಸಿದ್ದೇವೆ. ಅಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಇದು ಹುಸಿ ಬೆದರಿಕೆ ಎಂದು ಹೆಚ್ಚುವರಿ ಎಸ್‌ಪಿ ಕೀರ್ತನ್ ರಾಥೋಡ್ ಹೇಳಿದ್ದಾರೆ,(ಏಜೆನ್ಸೀಸ್).