ಸಾಂಸ್ಕೃತಿಕ ನೀತಿಗೆ ಅಸಡ್ಡೆ: ಸರ್ಕಾರಕ್ಕೆ ಅಧಿಕಾರಿಗಳೇ ಅಡ್ಡಗಾಲು; 6 ವರ್ಷವಾದ್ರೂ ಜಾರಿ ಇಲ್ಲ

Kannada & Culture
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು 
ರಾಜ್ಯದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆಸಲು, ಕಲಾವಿದರನ್ನು ಪ್ರೋತ್ಸಾಹಿಸಲು ರೂಪಿಸಿದ್ದ ಸಮಗ್ರ ಸಾಂಸ್ಕೃತಿಕ ನೀತಿಯ ಅನುಷ್ಠಾನಕ್ಕೆ ಅಧಿಕಾರಿಗಳೇ ಅಡ್ಡಿಯಾಗಿದ್ದಾರೆ. ಅದರಿಂದಾಗಿ ಸರ್ಕಾರದ ಆದೇಶ ಕೊಳೆಯುವಂತಾಗಿದೆ. ರಾಜ್ಯ ಸರ್ಕಾರ 2017ರಲ್ಲಿಯೇ ಹೊರಡಿಸಿರುವ ಸಾಂಸ್ಕೃತಿಕ ನೀತಿ ಜಾರಿಯ ಆದೇಶ ಆರು ವರ್ಷ ಕಳೆದರೂ ಅನುಷ್ಠಾನಕ್ಕೆ ಬಂದಿಲ್ಲ. ಕರ್ನಾಟಕ ನಾಮಕರಣದ ಸುವಣೋತ್ಸವ ಆಚರಿಸಿಕೊಳ್ಳುತ್ತಿದ್ದರೂ ರಾಜ್ಯಕ್ಕೊಂದು ಸಾಂಸ್ಕೃತಿಕ ನೀತಿ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ.

ರಾಜ್ಯಕ್ಕೆ ಪ್ರತ್ಯೇಕ ಸಾಂಸ್ಕೃತಿಕ ನೀತಿಯ ಬೇಡಿಕೆಗೆ 2013ರಲ್ಲಿ ಸ್ಪಂದಿಸಿದ ಸರ್ಕಾರ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿತ್ತು. ಸಮಿತಿ ಒಂದು ವರ್ಷದೊಳಗೆ ವರದಿಯನ್ನು ನೀಡಿತ್ತು. ವರದಿಯ ಜಾರಿಗೆ ಅನೇಕ ಸಚಿವರು ಆಗ ವಿರೋಧ ಮಾಡಿದ್ದರು. ಸಾಂಸ್ಕೃತಿಕ ಕ್ಷೇತ್ರದ ಮೇಲೆ ತಮ್ಮ ಹಿಡಿತವೇ ಕೈ ತಪು್ಪತ್ತದೆ, ತಮಗಿರುವ ಕೆಲ ಅಧಿಕಾರಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಸಚಿವರಲ್ಲಿದ್ದ ಆತಂಕಕ್ಕೆ ಕಾರಣವಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿದ್ದರು. ಬರಗೂರು ಸಮಿತಿ ನೀಡಿದ್ದ 44 ಶಿಫಾರಸುಗಳ ಪೈಕಿ 27ನ್ನು ಒಪ್ಪಬಹುದೆಂದು ಉಪಸಮಿತಿ ವರದಿ ನೀಡಿತು. ಅದರಂತೆ ಆದೇಶವೂ ಹೊರಬಿತ್ತು.

ಮುಂದಿನ ವಾರದಲ್ಲಿ ಚರ್ಚೆ: ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮುಂದಿನ ವಾರದಲ್ಲಿ ಸಾಂಸ್ಕೃತಿಕ ನೀತಿ ತಯಾರಿಸಿಕೊಟ್ಟ ಸಮಿತಿ ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಲಿದ್ದಾರೆ. ಆ ನಂತರ ವರದಿ ಜಾರಿ ಕುರಿತು ಅಂತಿಮ ನಿರ್ಧಾರ ಹೊರಬೀಳಲಿದೆ.

ಸರ್ಕಾರ ಒಪ್ಪಿದ್ದ ಅಂಶಗಳು

* ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಬಲೀಕರಣ, ನಾಲ್ಕು ಪ್ರಾದೇಶಿಕ ಕೇಂದ್ರಗಳ ಮೂಲಕ ಆಡಳಿತ ವಿಕೇಂದ್ರೀಕರಣ

* ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆ ಬಲವರ್ಧನೆ. ರಾಜ್ಯದಲ್ಲಿರುವ 800 ಸಂರಕ್ಷಿತ ಹಾಗೂ 20 ಸಾವಿರ ಅಘೋಷಿತ ಸ್ಮಾರಕಗಳ ಸಂರಕ್ಷಣೆ

* ಪ್ರಶಸ್ತಿಗಳ ವಿತರಣೆಗೆ ಕಾಲಬದ್ಧತೆ, ಏಕರೂಪತೆ, ಆಯಾ ವರ್ಷವೇ ಪ್ರದಾನ

* ಸಾಹಿತಿ, ಕಲಾವಿದರ ಮಾಶಾಸನ 2,000 ರೂ. ವಯೋಮಿತಿ 58 ವರ್ಷ, ವಿಶಿಷ್ಟ ಸಂದರ್ಭದಲ್ಲಿ 50 ವರ್ಷ

* ಅಕಾಡೆಮಿ, ಪ್ರಾಧಿಕಾರಗಳ ಸಬಲೀಕರಣ. ಅವಧಿ ಮುಗಿದ ನಂತರ ಹೊಸ ನೇಮಕದ ತನಕ ಮುಂದುವರಿಕೆ. ಒಮ್ಮೆ ನೇಮಕವಾದವರೂ ಮತ್ತೆ ನೇಮಕವಾಗಬಾರದು. ಹೊಸಬರಿಗೆ ಅವಕಾಶ

* ಅಕಾಡೆಮಿಗಳ ವಿಭಾಗೀಕರಣ. ಸಂಗೀತ ಮತ್ತು ನೃತ್ಯ ಪ್ರತ್ಯೇಕ ಮಾಡುವುದು. ಪ್ರತ್ಯೇಕ ಬಯಲಾಟ ಅಕಾಡೆಮಿಯ ಸ್ಥಾಪನೆ.

* ಸಾಂಸ್ಕೃತಿಕ ಸಂಸ್ಥೆಗಳಿಗೆ ಧನ ಸಹಾಯ ನೀಡಲು ಆಯ್ಕೆಗೆ ತಜ್ಞರ ಸಮಿತಿಯ ರಚನೆ

* ಸ್ಕಾಲರ್​ಶಿಫ್ ಮತ್ತು ಫೆಲೋಶಿಫ್​ಗಳ ಮೂಲಕ ಸಂಶೋಧನೆ ಮತ್ತು ಅಧ್ಯಯನಕ್ಕೆ ಒತ್ತು

* ಶಾಸ್ತ್ರೀಯ ಭಾಷೆ ಅಧ್ಯಯನ

* ಅನ್ವಯಿಕ ತಂತ್ರಾಂಶಗಳ ಮೂಲಕ ಆಧುನಿಕ ತಂತ್ರಜ್ಞಾನ ಬಳಕೆ

* ರಂಗಮಂದಿರಗಳ ನಿರ್ವಣ, ಏಕರೂಪದ ನಿರ್ವಹಣೆ. ಕೈಗೆಟಕುವ ದರ ನಿಗದಿ

* ಕರಾವಳಿ ಮತ್ತು ಬೆಂಗಳೂರಿಗೆ ಪ್ರತ್ಯೇಕ ರಂಗಾಯಣ

* ಕಾಲೇಜು ರಂಗೋತ್ಸವಗಳಿಗೆ ಪ್ರೋತ್ಸಾಹ

* ಉತ್ಸವಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ

* ಜಾನಪದ ರೆಪರ್ಟರಿ ಸ್ಥಾಪನೆ

* ಪ್ರವಾಸಿ ಸ್ಥಳಗಳಲ್ಲಿ ಸಾಂಸ್ಕೃತಿಕ ಉತ್ಸವಗಳ ಆಯೋಜನೆ

* ಕಲಾಕೃತಿಗಳ ಮಾರಾಟಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ವ್ಯವಸ್ಥೆ ಹಾಗೂ ಗ್ಯಾಲರಿಗಳ ಸ್ಥಾಪನೆ

* ಪ್ರತಿ ಜಿಲ್ಲೆಯಲ್ಲಿ ಕರ್ನಾಟಕ ಕಲಾಗ್ರಾಮ

* ಬುಡಕಟ್ಟು ವಿಶ್ವವಿದ್ಯಾಲಯ

* ಸೂಫಿ ಸಂಸ್ಕೃತಿ ಮತ್ತು ತತ್ವಪದ ಅದ್ಯಯನ ಕೇಂದ್ರ

* ಯುವಜನ ಸಂಸ್ಕೃಥಿ ಶಿಬಿರಗಳ ಆಯೋಜನೆ

* ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆ

* ಪ್ರತಿಷ್ಠಿತ ಟ್ರಸ್ಟ್​ಗಳ ಅವಧಿ

* ಸಂಕಷ್ಟದಲ್ಲಿರುವ ಸಾಹಿತಿ, ಕಲಾವಿದರ ನೆರವಿಗೆ ಆಪತ್​ನಿಧಿ ಸ್ಥಾಪನೆ

* ಅನುದಾನ ಪಡೆಯುವ ಸಂಸ್ಥೆಗಳ ಸಾಮಾಜಿಕ ತಪಾಸಣೆ

ಇದೇ ತಿಂಗಳಲ್ಲಿ ಜಾರಿ: ಸುವರ್ಣ ಕರ್ನಾಟಕ ವರ್ಷಕ್ಕೆ ಚಾಲನೆ ನೀಡಿರುವುದರಿಂದ ಇದೇ ತಿಂಗಳಿನಲ್ಲಿಯೇ ಸಾಂಸ್ಕೃತಿಕ ನೀತಿಯನ್ನು ಜಾರಿಗೆ ತರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಅದರಿಂದಾಗಿಯೇ ಸರ್ಕಾರದ ಮಟ್ಟದಲ್ಲಿ ತರಾತುರಿಯೂ ಕಾಣಿಸುತ್ತಿದೆ.

  • ತಪ್ಪಿದ ಹೊಸತನದ ಅವಕಾಶ
  • ಅಧಿಕಾರ ಕೈತಪ್ಪುವ ಆತಂಕದಲ್ಲಿ ಅಧಿಕಾರಿ ವೃಂದ
  • ಇದೇ ತಿಂಗಳಲ್ಲಿ ಜಾರಿಗೆ ಸರ್ಕಾರದ ಚಿಂತನೆ

ಉಪಸಮಿತಿ ಒಪ್ಪದ ಶಿಫಾರಸುಗಳು

  • ಅಕಾಡೆಮಿಗಳ ಆಯ್ಕೆಗೆ ಶೋಧನಾ ಸಮಿತಿ ರಚನೆ
  • ಅಕಾಡೆಮಿಗಳಿಗೆ ಆರ್ಥಿಕ ಸ್ವಾಯತ್ತೆ
  • ಇಲಾಖೆ ಸಿಬ್ಬಂದಿಗೆ ಸಾಂಸ್ಕೃತಿಕ ಶಿಬಿರ
  • ಸಾಹಿತಿ, ಕಲಾವಿದರ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಸೆಲ್
  • ಜಾನಪದದ ವ್ಯಾಪ್ತಿಗೆ ಪ್ರಾಚೀನ ಸಮರ ಕಲೆ
  • ವೃತ್ತಿ ಶಿಕ್ಷಣದಲ್ಲಿ ಸಾಂಸ್ಕೃತಿಕ ಮೀಸಲಾತಿ
  • ಸ್ಥಳೀಯ ಸಿನಿಮಾ ಸಂಸ್ಕೃತಿ
  • ಪ್ರತಿ ಪ್ರೌಢಶಾಲೆಗೆ ಸಾಂಸ್ಕೃತಿಕ ಶಿಕ್ಷಕರ ನೇಮಕ
  • ಕಾರ್ಯಕ್ರಮಗಳಿಗೆ ರಾಜಕಾರಣಿಗಳ ಆಹ್ವಾನದ ಶಿಷ್ಟಾಚಾರ ಕೈಬಿಡುವುದು

ಸಾಂಸ್ಕೃತಿಕ ನೀತಿಯ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಬರಗೂರು ಜತೆಗೂ ಚರ್ಚೆ ನಡೆಸಲಾಗುತ್ತದೆ. ಆರು ವರ್ಷದ ಅವಧಿಯಲ್ಲಿ ಏಕೆ ಜಾರಿಗೆ ಬರಲಿಲ್ಲವೆಂಬುದನ್ನು ಈಗ ಮಾತನಾಡಿ ಉಪಯೋಗವಿಲ್ಲ. ಮುಂದೆ ತಪ್ಪಾಗದಂತೆ ಎಚ್ಚರಿಕೆ ವಹಿಸುತ್ತೇವೆ. | ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಾಂಸ್ಕೃತಿಕ ನೀತಿ ಜಾರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗೆ ಪತ್ರ ಬರೆದು ಹಾಗೂ ಭೇಟಿ ಮಾಡಿ ಒತ್ತಾಯ ಮಾಡಿದ್ದೆ. ಹಿಂದೆ ನಮ್ಮ ಸರ್ಕಾರವೇ ಮಾಡಿರುವ ಆದೇಶವಾಗಿದೆ. ಆದ್ದರಿಂದ ಜಾರಿಗೊಳಿಸುತ್ತೇವೆ ಎಂಬ ಮಾತನ್ನು ಹೇಳಿದ್ದರು. ನೀತಿಯನ್ನು ಆದ್ಯತೆಯ ಮೇಲೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸುತ್ತೇನೆ. | ಪ್ರೊ. ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

ಎಷ್ಟು ವೆಚ್ಚ?: ಆರು ವರ್ಷಗಳ ಹಿಂದೆ ವರದಿ ಸಲ್ಲಿಕೆಯಾದಾಗ ವಾರ್ಷಿಕ ವೆಚ್ಚ 36.68 ಕೋಟಿ ರೂ. ಹಾಗೂ ಒಂದು ಬಾರಿಗೆ 23 ಕೋಟಿ ರೂ. ಸೇರಿ 59.68 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಒಂದು ಬಾರಿ ವೆಚ್ಚದಲ್ಲಿ 10 ಕೋಟಿ ರೂ.ಗಳ ಆಪತ್​ಧನವೂ ಸೇರಿತ್ತು. ಆದರೆ, ಈಗ ವೆಚ್ಚ ಹೆಚ್ಚಾಗುವ ಸಾಧ್ಯತೆಗಳಿವೆ.

ಸಮಿತಿ ರಚನೆ

  • ಸಮಗ್ರ ಸಾಂಸ್ಕೃತಿಕ ನೀತಿ ರಚಿಸಲು ಪ್ರೊ. ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ 2013ರ ಆಗಸ್ಟ್ 8 ರಂದು ಸಮಿತಿ ರಚನೆ
  • ಸಮಿತಿಯಿಂದ 2014ರ ಜೂ.25 ರಂದು 44 ಶಿಫಾರಸುಗಳ ವರದಿ ಸಲ್ಲಿಕೆ
  • ಎಚ್.ಕೆ. ಪಾಟೀಲ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ರಚನೆ. ಸಮಿತಿ 2017ರ ಮೇ 5 ರಂದು 27 ಅಂಶಗಳನ್ನು ಒಪ್ಪಲು ಸಂಪುಟಕ್ಕೆ ಶಿಫಾರಸು
  • 2017ರ ಅಕ್ಟೋಬರ್ 10 ರಂದು ಸರ್ಕಾರದ ಆದೇಶ ಪ್ರಕಟ

ಆದೇಶ ಎಲ್ಲಿ?

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ತಮ್ಮ ಅಧಿಕಾರಗಳಿಗೆ ಕತ್ತರಿ ಬೀಳುತ್ತದೆ ಎಂಬ ಉದ್ದೇಶಕ್ಕೆ ಈ ಆದೇಶವನ್ನೇ ಜಾರಿಗೆ ಕೊಡುತ್ತಿಲ್ಲವೆಂಬ ಆತಂಕ ಸಾಂಸ್ಕೃತಿಕ ಕ್ಷೇತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಾಂಸ್ಕೃತಿಕ ನೀತಿ ಜಾರಿಗೆ ಬಂದಿದ್ದರೆ ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರದಲ್ಲಿ ಒಂದಷ್ಟು ಬದಲಾವಣೆಯನ್ನು ಕಾಣಬಹುದಿತ್ತು ಎಂಬ ಅಭಿಪ್ರಾಯವೂ ಇದೆ. ಈ ವಿಚಾರ ಇದೀಗ ಸರ್ಕಾರದ ಗಮನವನ್ನು ಸೆಳೆದಿರುವ ಕಾರಣ ಮೊದಲಿಗೆ ಸಚಿವ ಸಂಪುಟ ಉಪಸಮಿತಿ ನೀಡಿರುವ 27 ಅಂಶಗಳನ್ನು ಜಾರಿಗೆ ಕೊಡಬಹುದೆ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಒಮ್ಮೆ ಬರಗೂರು ಜತೆ ಚರ್ಚೆ ನಡೆಸಿದ್ದಾರೆ. ಸಂಪುಟ ಉಪಸಮಿತಿ ಕೈ ಬಿಟ್ಟಿರುವ ಉಳಿದ 17 ಶಿಫಾರಸುಗಳ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರ ಚರ್ಚೆ ಮಾಡಲಿದೆ ಎಂದು ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net