ದೇಶದ ಶ್ರೀಮಂತರಲ್ಲಿ ಅಂಬಾನಿ ನಂ.1, ಅದಾನಿ ನಂ.2

Ambani
Published on

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಕೇಶ್ ಅಂಬಾನಿ (64) ಸತತ 14ನೇ ವರ್ಷವೂ ಫೋರ್ಬ್ಸ್ ಭಾರತದ 100 ಅತಿಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅಂಬಾನಿ ಸಂಪತ್ತು ಕಳೆದ ವರ್ಷ 88.7 ಶತಕೋಟಿ ಡಾಲರ್ ಇತ್ತು. ಈ ವರ್ಷ ಅದು 92.7 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಟಾಪ್ ಐದರ ಪಟ್ಟಿಯಲ್ಲಿ ಅದಾನಿ ಪೋರ್ಟ್ಸ್ ಮತ್ತು ಎಸ್ ಇಝೆಡ್ ನ ಮುಖ್ಯಸ್ಥ ಗೌತಮ್ ಅದಾನಿ (74.8 ಶತಕೋಟಿ ಡಾಲರ್), ಎಚ್ ಸಿಎಲ್ ಟೆಕ್ನಾಲಜಿಯ ಶಿವ್ ನಾಡಾರ್ (31 ಶತಕೋಟಿ ಡಾಲರ್), ಅವೆನ್ಯೂ ಸೂಪರ್ ವಾರ್ಟ್ಸ್ ನ ರಾಧಾಕೃಷ್ಣನ್ ದಮಾನಿ (29.4 ಶತಕೋಟಿ ಡಾಲರ್), ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಪೂನಾವಾಲ್ (19ಶತಕೋಟಿ ಡಾಲರ್) ಸ್ಥಾನ ಪಡೆದುಕೊಂಡಿದ್ದಾರೆ.

ಈ ವರ್ಷದ ಪಟ್ಟಿಯಲ್ಲಿ ಅಶೋಕ್ ಲೈಲಾಂಡ್ ಮಾಲೀಕರಾದ ಹಿಂದುಜಾ ಬ್ರದರ್ಸ್ ಅನ್ನು ಪೂನಾವಾಲಾ ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ್ದಾರೆ. ಈ ವರ್ಷ ಹಿಂದುಜಾ ಬ್ರದರ್ಸ್ ಸಂಪತ್ತು 14 ಶತಕೋಟಿ ಡಾಲರ್ ಆಗಿದ್ದು, 15ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಟಾಪ್ 10ರ ಪಟ್ಟಿಗೆ ಸಾವಿತ್ರಿ ಜಿಂದಾಲ್ (18 ಶತಕೋಟಿ ಡಾಲರ್) ಅವರು ಮರು ಪ್ರವೇಶ ಪಡೆದಿದ್ದಾರೆ. ಕುಮಾರ ಮಂಗಲಂ ಬಿರ್ಲಾ ಅವರು ಕಳೆದ ವರ್ಷ 14ನೇ ಸ್ಥಾನದಲ್ಲಿದ್ದವರು ಈ ವರ್ಷ 10ನೇ ಸ್ಥಾನಕ್ಕೆ ಏರಿದ್ದಾರೆ. ಕಳೆದ ವರ್ಷ 9ನೇ ಸ್ಥಾನದಲ್ಲಿದ್ದ ಗೋದ್ರೆಜ್ ಕುಟುಂಬ ಈ ವರ್ಷ 11ನೇ ಸ್ಥಾನ(15.2 ಶತಕೋಟಿ ಡಾಲರ್)ಕ್ಕೆ ಕುಸಿದಿದೆ. ಆದಾಗ್ಯೂ ಈ ಕುಟುಂಬದ ಸಂಪತ್ತು 4.2 ಶತಕೋಟಿ ಡಾಲರ್ ಏರಿಕೆಯಾಗಿದೆ. ನಾಲ್ಕು ಫಾರ್ವ ಕಂಪನಿಯ ಮಾಲೀಕರ ಸಂಪತ್ತು ಈ ವರ್ಷ ಬಹಳ ಏರಿಕೆ ಕಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net