ಶಾರುಖ್‌ ಖಾನ್ ಪುತ್ರ ಆರ್ಯನ್‌ನನ್ನು 14 ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಕೋರ್ಟ್

Sharukh
Published on

ಮುಂಬಯಿ: ಕ್ರೂಸ್‌ನಲ್ಲಿ ನಡೆಯುತ್ತಿದ್ದ ಪಾರ್ಟಿಯೊಂದರಲ್ಲಿ ಮಾದಕ ವಸ್ತುಗಳೊಂದಿಗೆ ಸಿಕ್ಕಿಬಿದ್ದಿರುವ ಆರ್ಯನ್‌ ಖಾನ್ ಮತ್ತು ಇತರ 7 ಆರೋಪಿಗಳಿಗೆ ನ್ಯಾಯಾಧೀಶರು ಇಂದು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಮೂರು ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ನಾರ್ಕೋಟಿಕ್ಸ್ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಪೊಲೀಸರು, ಬಾಲಿವುಡ್ ನಟ ಶಾರುಖ್‌ ಖಾನ್ ಅವರ ಪುತ್ರ ಆರ್ಯನ್ ಮತ್ತು ಇತರ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿದರು. ಇನ್ನಷ್ಟು ವಿಚಾರಣೆ ಅವಶ್ಯಕತೆ ಇರುವುದರಿಂದ ಪೊಲೀಸ್ ಕಸ್ಟಡಿಯನ್ನು ಅ. 11ರವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್.ಎಂ. ನಾರ್ಲೀಕರ್ ಅವರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರು.

ಆರೋಪಿಗಳೆಲ್ಲರೂ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಶುಕ್ರವಾರ ನಡೆಯಲಿದೆ. ಮುಂಬಯಿ ಕರಾವಳಿಯಿಂದ ಗೋವಾಕ್ಕೆ ತೆರಳುತ್ತಿದ್ದ ಕ್ರೂಸ್ ಹಡಗಿನಿಂದ ಆರ್ಯನ್‌ಖಾನ್, ಅರ್ಬಾಜ್ ಮರ್ಚಂಟ್, ಮುನ್‌ಮುನ್ ಧಮೇಚಾ ಮುಂತಾದವರನ್ನು ಪೊಲೀಸರು ಅ. 3ರಂದು ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net