

ನವದೆಹಲಿ: ಆದಿತ್ಯ-ಎಲ್1 ನೌಕೆ ಬಾಹ್ಯಾಕಾಶದಿಂದ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಸೆರೆಹಿಡಿದಿದೆ. ಈ ಚಿತ್ರವನ್ನು ಇಸ್ರೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಆದಿತ್ಯ-ಎಲ್ 1, ಇಂದು ಭೂಮಿಯ ಚಿತ್ರಗಳನ್ನು ಕಳುಹಿಸಿದ್ದು, ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಮೀ ದೂರದಲ್ಲಿರುವ ತನ್ನ ಗಮ್ಯಸ್ಥಾನವಾದ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಗೆ ಹೋಗುತ್ತಿರುವಾಗ ಚಂದ್ರ ಮತ್ತು ಭೂಮಿಯ ಚಿತ್ರಗಳನ್ನು ಕ್ಲಿಕ್ಕಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವಿಟರ್‌ನಲ್ಲಿ ಆದಿತ್ಯ-ಎಲ್ 1 ಕ್ಲಿಕ್ ಮಾಡಿದ ಸೆಲ್ಫಿಯೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಆದಿತ್ಯಾ ಎಲ್ 1 ಬಾಹ್ಯಾಕಾಶ ನೌಕೆಯನ್ನು ಹೊತ್ತಿದ್ದ ಪಿಎಸ್ ಎಲ್ ವಿ ಸಿ 57 ನೌಕೆ ಸೆಪ್ಟೆಂಬರ್ 2 ರಂದು ಯಶಸ್ವಿಯಾಗಿ ನಭಕ್ಕೆ ಹಾರಿ ನೌಕೆಯನ್ನು ಕಕ್ಷೆಯಲ್ಲಿ ಬಿಟ್ಟಿತ್ತು. ಬಳಿಕ ಆದಿತ್ಯಾ ಎಲ್ 1 ನೌಕೆಯು ತನ್ನ ಗಮ್ಯ ಸ್ಥಾನದತ್ತ ಪ್ರಯಾಣ ಮುಂದುವರೆಸಿದೆ. ಬಾಹ್ಯಾಕಾಶ ನೌಕೆಯು ಈಗಾಗಲೇ ಎರಡು ಭೂಮಿಗೆ ಸುತ್ತುವರಿದ ಕಕ್ಷೆಯ ಕುಶಲತೆಯನ್ನು ಪೂರ್ಣಗೊಳಿಸಿದೆ ಮತ್ತು ಲ್ಯಾಗ್ರೇಂಜ್ ಪಾಯಿಂಟ್ L1 ಕಡೆಗೆ ವರ್ಗಾವಣೆ ಕಕ್ಷೆಯಲ್ಲಿ ಇರಿಸುವ ಮೊದಲು ಇನ್ನೆರಡು ಸುತ್ತನ್ನು ನಿರ್ವಹಿಸುತ್ತದೆ.