

ವಿಶ್ವಸಂಸ್ಥೆ: ವಿಶ್ವಸಂಸ್ಥೆ ತನ್ನ 75ನೇ ವರ್ಷಾಚರಣೆ ಸಂದರ್ಭದಲ್ಲಿ ಭಾರತದ ಪ್ರತಿನಿಧಿ ಫಸ್ಟ್ ಸೆಕ್ರಟರಿ ವಿದಿಶಾ ಮೈತ್ರಾ ಅವರು ರೈಟ್ ಆಫ್ ರಿಪ್ಲೈ ಅವಕಾಶ ಬಳಸಿಕೊಂಡು ಪಾಕಿಸ್ಥಾನಕ್ಕೆ ನೀಡಿರುವ ಉತ್ತರ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.
ಪಾಕಿಸ್ತಾನ ಜಾಗತಿಕವಾಗಿ ಉಗ್ರರ, ಭಯೋತ್ಪಾದನೆಯ ಕೇಂದ್ರ ಸ್ಥಾನವಾಗಿ ಗುರುತಿಸಿಕೊಂಡಿದೆ. ಸ್ವತಃ ಅಲ್ಲಿನ ಸರ್ಕಾರವೇ ಇದನ್ನು ಘೋಷಿಸಿಕೊಂಡಿದೆ. ಉಗ್ರರಿಗೆ ತರಬೇತಿ ನೀಡುತ್ತಿರುವುದು, ಅವರನ್ನು ಹುತಾತ್ಮರೆಂದು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಲೇ ಬಂದಿದೆ. ಅಲ್ಲಿನ ಅಲ್ಪಸಂಖ್ಯಾತ ಸಮುದಾಯದವರಿಗೆ ನಿರಂತರ ಕಿರಕುಳ ನೀಡುವುದು, ಮತಾಂತರ ಮಾಡುವುದು ನಡೆದೇ ಇದೆ.
ಭಾರತದ ವಿರುದ್ಧದ ಅದರ ಆರೋಪಗಳು ನಿರಾಧಾರ. ಜಮ್ಮು-ಕಾಶ್ಮೀರದ ವಿಚಾರ ಭಾರತದ ಆಂತರಿಕ ವಿಷಯವಾಗಿದ್ದು, ಅದರಲ್ಲಿ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಅದರ ಆರೋಪವನ್ನು ತಿರಸ್ಕರಿಸುತ್ತೇವೆ. ವಿಶ್ವಸಂಸ್ಥೆಯಲ್ಲಿ ಅಪೂರ್ಣಗೊಂಡಿರುವ ಕಾರ್ಯಸೂಚಿ ಏನಾದರೂ ಇದ್ದರೆ ಅದು ಭಯೋತ್ಪಾದನೆ ನಿಗ್ರಹ ಕಾರ್ಯದ್ದಾಗಿದೆ. ಪಾಕಿಸ್ತಾನ ಜಾಗತಿಕವಾಗಿ ಭಯೋತ್ಪಾದನೆಯ ಕೇಂದ್ರಬಿಂದುವಾಗಿದ್ದು, ವಿಶ್ವಸಂಸ್ಥೆಯ ವೇದಿಕೆಯನ್ನು ದುರ್ಬಳಕೆ ಮಾಡಲು ಅವಕಾಶ ನೀಡಬಾರದು ಎಂದು ವಿದಿಶಾ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)