

ನವದೆಹಲಿ: ರಷ್ಯಾದ ಕಚ್ಚಾ ತೈಲದಿಂದ ತಯಾರಿಸಿದ ಇಂಧನಗಳ ಆಮದಿಗೆ ನಿರ್ಬಂಧ ಹೇರಲು ಮುಂದಾಗಿರುವುದರಿಂದ ಭಾರತದ 15 ಬಿಲಿಯನ್ ಡಾಲರ್ ಮೌಲ್ಯದ ಇಂಧನ ರಫ್ತಿಗೆ ತೊಂದರೆಯಾಗಬಹುದು ಎಂದು ಆರ್ಥಿಕ ಸಂಶೋಧನಾ ಸಂಸ್ಥೆ (ಜಿಟಿಆರ್ಐ) ಎಚ್ಚರಿಸಿದೆ. ಭಾರತ, ಟರ್ಕಿ, ಯುಎಇಯಂತಹ ದೇಶಗಳು ರಷ್ಯಾದ ಕಚ್ಚಾ ತೈಲವನ್ನು ಸಂಸ್ಕರಿಸಿ ಡೀಸೆಲ್, ಪೆಟ್ರೋಲ್ ಮತ್ತು ಜೆಟ್ ಇಂಧನವಾಗಿ ಪರಿವರ್ತಿಸಿ ಯುರೋಪ್ಗೆ ರಫ್ತು ಮಾಡುತ್ತಿವೆ. ಈ ದೇಶಗಳಿಗೆ, 27 ರಾಷ್ಟ್ರಗಳನ್ನು ಒಳಗೊಂಡ ಐರೋಪ್ಯ ಒಕ್ಕೂಟದ ನಿರ್ಧಾರದಿಂದ ತೊಂದರೆ ಆಗಲಿದೆ ಎಂದು ಜಿಟಿಆರ್ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ತಿಳಿಸಿದ್ದಾರೆ.
2023-24ರಲ್ಲಿ ಇಯುಗೆ ಭಾರತ 19.2 ಶತಕೋಟಿ ಡಾಲರ್ ಮೌಲ್ಯದ ಇಂಧನ ಉತ್ಪನ್ನಗಳನ್ನು ರಫ್ತು ಮಾಡಿತ್ತು. 2024-25ರಲ್ಲಿ ಇದು ಶೇ. 27.1ರಷ್ಟು ಕಡಿಮೆಯಾಗಿ 15 ಶತಕೋಟಿ ಡಾಲರ್ಗೆ ಇಳಿದಿದೆ. 2024-25ರಲ್ಲಿ ರಷ್ಯಾದಿಂದ ಭಾರತ 50.3 ಶತಕೋಟಿ ಡಾಲರ್ ಮೌಲ್ಯದ ಕಚ್ಚಾ ತೈಲ ಆಮದು ಮಾಡಿಕೊಂಡಿದ್ದು, ಇದು ಒಟ್ಟು 143.1 ಶತಕೋಟಿ ಡಾಲರ್ನ ಕಚ್ಚಾ ತೈಲ ಆಮದಿನ ಮೂರನೇ ಒಂದು ಭಾಗವಾಗಿದೆ.