ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವವರು ಇವರೇ ನೋಡಿ…

vijaykumar
Published on

ಬೆಂಗಳೂರು: ದೇಶದಲ್ಲಿ ವಿಶೇಷವಾಗಿ ಐಟಿ ವಲಯದಲ್ಲಿ ತಿಂಗಳಿಗೆ ಲಕ್ಷ ಅಥವಾ ಕೋಟಿ ಗಳಿಸುವ ಉದ್ಯೋಗಿಗಳೂ ಇದ್ದಾರೆ. ಇವರ ಸಾಲಿಗೆ ಸಿ ವಿಜಯಕುಮಾರ್ ಕೂಡ ಸೇರುತ್ತಾರೆ. ಭಾರತದಲ್ಲಿ ಐಟಿ ಸಂಸ್ಥೆಗಳ ಉನ್ನತ ಅಧಿಕಾರಿಗಳಲ್ಲಿ ಒಬ್ಬರಾದ ಇವರು ಪ್ರಸ್ತುತ HCLTech ನ CEO ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ವಿಜಯಕುಮಾರ್ 2022ರಿಂದ ಭಾರತದಲ್ಲಿ ಐಟಿ ಸಂಸ್ಥೆಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉನ್ನತ ಕಾರ್ಯನಿರ್ವಾಹಕರಾದರು. HCL ಸಂಸ್ಥಾಪಕ ಶಿವ ನಾಡರ್ ಈ ಸೀನಿಯರ್ ಪೋಸ್ಟ್​​​​ನಿಂದ ಕೆಳಗಿಳಿಯಲು ನಿರ್ಧರಿಸಿದ ನಂತರ ಜುಲೈ 20, 2022 ರಂದು ವಿಜಯಕುಮಾರ್ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಹೆಸರಿಸಲಾಯಿತು.

ಎಚ್‌ಸಿಎಲ್‌ನ ವಾರ್ಷಿಕ ವರದಿಯ ಪ್ರಕಾರ, ವಿಜಯಕುಮಾರ್‌ಗೆ ಕಳೆದ ಹಣಕಾಸು ವರ್ಷದಲ್ಲಿ ಮೂಲ ವೇತನವಾಗಿ USD 2 ಮಿಲಿಯನ್, ವೇರಿಯಬಲ್ ಪೇನಲ್ಲಿ USD 2 ಮಿಲಿಯನ್ ಮತ್ತು ಇತರ ಪ್ರಯೋಜನಗಳ ಜೊತೆಗೆ USD 0.02 ಮಿಲಿಯನ್ ಪಾವತಿಸಲಾಗಿದೆ. ಹೆಚ್ಚು ಕಡಿಮೆ USD 4.13 ಮಿಲಿಯನ್ ಸಂಬಳ ಪಡೆದಿದ್ದಾರೆ.

ವಿಜಯಕುಮಾರ್ 1994 ರಲ್ಲಿ HCL ಗೆ ಸೇರಿದರು. ಸಿಇಒ ಆಗುವ ಮುನ್ನ ವಿಜಯಕುಮಾರ್ ಎಚ್‌ಸಿಎಲ್‌ನಲ್ಲಿ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ಪ್ರಸ್ತುತ ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್​​ನ ಮಂಡಳಿಯ ಸದಸ್ಯರೂ ಆಗಿದ್ದಾರೆ.

ವಿಜಯಕುಮಾರ್ ತಮಿಳುನಾಡಿನಲ್ಲಿ ಜನಿಸಿದರು. ಆದರೆ ಪ್ರಸ್ತುತ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದಾರೆ. ವಿಜಯಕುಮಾರ್ ಅವರು ಊಟಿಯ ಲವ್‌ಡೇಲ್‌ನಲ್ಲಿರುವ ಲಾರೆನ್ಸ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ತಮಿಳುನಾಡಿನ ಪಿಎಸ್​ಜಿ ಕಾಲೇಜ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದಾರೆ (1986 ರಿಂದ 1990). ಬ್ಯುಸಿನೆಸ್ ಟುಡೇ ಮೂಲಕ ಐಟಿ/ಐಟಿಇಎಸ್ ಇಂಡಸ್ಟ್ರಿಯಲ್ಲಿ 2020 ರ ವರ್ಷದ ಅತ್ಯುತ್ತಮ ಸಿಇಒ ಎಂದು ವಿಜಯಕುಮಾರ್ ಅವರನ್ನು ಹೆಸರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net