

ಬೆಂಗಳೂರು: ಕರೊನಾ ಲಾಕ್ಡೌನ್ನಿಂದಾಗಿ ಉದ್ಯೋಗ ಕಳೆದುಕೊಂಡವರು, ಅರ್ಹರಿಗೆ ಶೋಧಿಸುತ್ತಿರುವ ಉದ್ಯೋಗದಾತರ ಸಮಸ್ಯೆಗೆ ಏಕಕಾಲಕ್ಕೆ ಪರಿಹಾರ ರೂಪದಲ್ಲಿ ಅಂತರ್ಜಾಲ ತಾಣದ ವೇದಿಕೆ ತಲೆ ಎತ್ತಲಿದೆ. ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವರ್ಚುವಲ್ ಉದ್ಯೋಗ ಮೇಳ ಜು.10ರಂದು ನಡೆಯಲಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಭರದಿಂದ ಸಿದ್ಧತೆ ನಡೆಸಿದೆ.
ಕೌಶಲ ಕರ್ನಾಟಕ ಅಭಿವೃದ್ಧಿ ನಿಗಮದಿಂದ ಈಗಾಗಲೆ ಕೌಶಲ ಸಂಪರ್ಕ (ಸ್ಕಿಲ್ ಕರ್ನಾಟಕ) ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿದ್ದು, ಉದ್ಯೋಗದಾತರು ಹಾಗೂ ಉದ್ಯೋಗಿಗಳನ್ನು ಬೆಸೆದ ವೇದಿಕೆ ಎಂಬ ಮೆಚ್ಚುಗೆ ಗಳಿಸಿದೆ. ಇದರಿಂದ ಸ್ಪೂರ್ತಿ ಪಡೆದ ಸರ್ಕಾರ ಇದೀಗ ವರ್ಚುವಲ್ ಉದ್ಯೋಗ ಮೇಳ ಸಂಘಟಿಸಲು ಮುಂದಾಗಿದೆ.
ಹೆಸರೇ ಹೇಳುವಂತೆ ಇದು ನೇರ ಸಂದರ್ಶನವಲ್ಲ, ಅಂತರ್ಜಾಲ ಹಾಗೂ ಹೊಸ ತಂತ್ರಜ್ಞಾನ ಬಳಸಿಕೊಂಡು ಏರ್ಪಡಿಸಿರುವ ವರ್ಚುವಲ್ ಮೇಳ. ಈ ಪ್ರಯೋಗವನ್ನು ಫಲಪ್ರದಗೊಳಿಸಲೆಂದು ಪ್ರತಿಷ್ಠಿತ ಕಂಪನಿ ಗಳನ್ನು ಕರೆತರಲು ಸರ್ಕಾರ ಕಾರ್ಯತಂತ್ರ ಹೆಣೆದಿದೆ. ಆ ಮೂಲಕ ವಿವಿಧ ಕೌಶಲವಿರುವ ಅಭ್ಯರ್ಥಿಗಳು, ಲಾಕ್ಡೌನ್ನಿಂದಾಗಿ ಉದ್ಯೋಗ ಕಳೆದುಕೊಂಡವರಿಗೆ ಅವಕಾಶ ಸೃಷ್ಟಿಸುವ ಆಶಾಭಾವನೆ ಹೊಂದಿದೆ.
ಜು.8ರ ಗಡುವು: ಮೇಳದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಉದ್ಯೋಗದಾತರು ಹಾಗೂ ಅಭ್ಯರ್ಥಿಗಳು ಹೆಸರನ್ನು ಕೌಶಲ ಕರ್ನಾಟಕದಲ್ಲಿ ನೋಂದಾಯಿಸುವುದಕ್ಕೆ ಜು.8 ಕೊನೆಯ ದಿನವಾಗಿದೆ. ನೋಂದಾಯಿಸಿದ ಪ್ರತಿಯೊಬ್ಬರಿಗೂ ಉಚಿತವಾಗಿ ಮೇಲ್ ಮೂಲಕ ಪ್ರತ್ಯೇಕ ಲಾಗಿನ್ ಸೃಜಿಸಲಾಗುತ್ತದೆ.
ಉದ್ಯೋಗದಾತರು ನೋಂದಣಿ ಜತೆಗೆ ಹುದ್ದೆಗಳ ಮಾಹಿತಿ ಒದಗಿಸಬೇಕು. ಸಲ್ಲಿಕೆಯಾದ ಅರ್ಜಿ ಹಾಗೂ ಅಭ್ಯರ್ಥಿಗಳ ಕಿರು ಪಟ್ಟಿಯನ್ನು ತಮ್ಮ ಲಾಗಿನ್ನಲ್ಲಿ ವೀಕ್ಷಿಸಬಹುದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳೊಂದಿಗೆ ವರ್ಚುವಲ್ ಸಂದರ್ಶನ ನಡೆಸಬಹುದಾಗಿದೆ.
ಅಭ್ಯರ್ಥಿಗಳು ಹೆಸರು ನೋಂದಾಯಿಸಿದ ನಂತರ ತಮಗಾಗಿ ನೀಡಿರುವ ಲಾಗಿನ್ ಮೂಲಕ ಹುದ್ದೆಗಳನ್ನು ವೀಕ್ಷಿಸಿ ಅರ್ಹತೆಗೆ ತಕ್ಕ ಉದ್ಯೋಗಕ್ಕಾಗಿ ಅರ್ಜಿ ಹಾಕಬೇಕು. ಜತೆಗೆ ಲಾಗಿನ್ನಲ್ಲಿ ಒದಗಿಸುವ ತಾಜಾ ಮಾಹಿತಿಯನ್ನು ಪರಿಶೀಲಿಸಬೇಕು. ಆಯ್ಕೆಯಾದ ಕಿರುಪಟ್ಟಿಯಲ್ಲಿ ಹೆಸರಿದ್ದರೆ ಜು.10ರ ವರ್ಚುವಲ್ ಸಂದರ್ಶನಕ್ಕೆ ಅವಕಾಶ ಲಭಿಸುತ್ತದೆ.
ಉದ್ಯೋಗದಾತರು ಹಾಗೂ ಆಕಾಂಕ್ಷಿಗಳ ಪರಸ್ಪರ ಸಂವಹನ ಅರ್ಥಪೂರ್ಣಗೊಳಿಸಲು ಕೆಎಸ್ ಡಿಸಿ (ಕೌಶಲ ಕರ್ನಾಟಕ ಅಭಿವೃದ್ಧಿ ನಿಗಮ) ಉದ್ದೇಶಿಸಿದೆ. ಪ್ರತಿಯೊಂದು ಉದ್ಯೋಗದಾತ ಕಂಪನಿ/ ಸಂಸ್ಥೆಗೆ ಪ್ರತ್ಯೇಕ ವರ್ಚುವಲ್ ಕೊಠಡಿಯನ್ನು ಕೌಶಲ ಕರ್ನಾಟಕ ವೇದಿಕೆ ವ್ಯವಸ್ಥೆ ಮಾಡಲಿದೆ. ಇದರಿಂದಾಗಿ ಉದ್ಯೋಗದಾತರು ನೀತಿಯನುಸಾರ ಮುಖಾಮುಖಿ ಸಂದರ್ಶನದ ರೀತಿಯಲ್ಲಿ ವರ್ಚುವಲ್ ಸಂದರ್ಶನ ನಡೆಸಲು ಅವಕಾಶವಾಗಲಿದೆ. ಅಲ್ಲದೆ, ಅರ್ಹರಿಗೆ ಹುದ್ದೆಯ ಆಹ್ವಾನ ನೀಡಬಹುದು. ಇಲ್ಲವೆ, ಅಭ್ಯರ್ಥಿಗಳ ಜತೆಗೆ ಸಮೂಹ ಸಂದರ್ಶನದ ಮೂಲಕ ಕಿರುಪಟ್ಟಿ ಸಿದ್ಧಪಡಿಸಲು ಸಾಧ್ಯವಿದ್ದು, ಆಯ್ಕೆಯಾದ ಉದ್ಯೋಗಾಕಾಂಕ್ಷಿಗಳ ಮತ್ತೊಂದು ಸುತ್ತಿನ ಸಂದರ್ಶನವನ್ನೂ ಅದೇ ದಿನ ನಡೆಸಬಹುದಾಗಿದೆ.
ಆವಿಷ್ಕರಿಸಿದ ತಂತ್ರಜ್ಞಾನ ಬಳಕೆಯತ್ತ ಉತ್ಸುಕ: ಕರೊನಾ ಸೋಂಕು ನಿಯಂತ್ರಣ, ಲಾಕ್ಡೌನ್ ನಿರ್ವಹಣೆಯಲ್ಲಿ ಲಭ್ಯ ತಂತ್ರಜ್ಞಾನ ಬಳಸಿಕೊಂಡು ಕೇಂದ್ರ ಸರ್ಕಾರದಿಂದ ಭೇಷ್ ಎಂದು ರಾಜ್ಯ ಸರ್ಕಾರ ಬೆನ್ನು ತಟ್ಟಿಸಿಕೊಂಡಿದೆ. ಇದರಿಂದ ಉತ್ತೇಜಿತವಾಗಿ ಆವಿಷ್ಕರಿಸಿದ ತಂತ್ರಜ್ಞಾನ ಬಳಕೆಯತ್ತ ಉತ್ಸುಕವಾಗಿದ್ದು, ನಿರುದ್ಯೋಗ ಹಾಗೂ ಉದ್ಯೋಗ ವಂಚಿತರ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಒತ್ತು ನೀಡಿದೆ. ಕೌಶಲ ಕರ್ನಾಟಕ ಅಭಿವೃದ್ಧಿ ನಿಗಮದ ಮುಖಾಂತರ ವಿನೂತನ ವರ್ಚುವಲ್ ಉದ್ಯೋಗ ಮೇಳ ನಡೆಸಲು ತೀರ್ವನಿಸಿದ್ದು, ಹೆಸರಾಂತ ಕಂಪನಿಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.