Russian Oil | ಟ್ರಂಪ್ ರಷ್ಯಾ ತೈಲ ಹೇಳಿಕೆಗೆ ಭಾರತ ಫಸ್ಟ್​ ರಿಯಾಕ್ಷನ್​: ವಿದೇಶಾಂಗ ಸಚಿವಾಲಯ ಹೇಳಿದ್ದೇನು..?

Narendra Modi
Published on

ನವದೆಹಲಿ: ಭಾರತ ಮತ್ತೊಮ್ಮೆ ರಷ್ಯಾದ ಕಚ್ಚಾ ತೈಲ(Russian Oil) ಖರೀದಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ನಮ್ಮ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಸ್ಥಿರ ಆದ್ಯತೆಯಾಗಿದೆ ಎಂದು ಭಾರತ ಗುರುವಾರ (ಅಕ್ಟೋಬರ್​,16) ಹೇಳಿದೆ.

ಈ ಮೂಲಕ ಭಾರತ ಶೀಘ್ರದಲ್ಲೇ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡ ನಂತರ ಈ ಬೆಳವಣಿಗೆ ನಡೆದಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, ಭಾರತದ ಆಮದು ನೀತಿಗಳು ದೇಶದ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಮಾರ್ಗದರ್ಶಿಸಲ್ಪಡುತ್ತವೆ. ಅಲ್ಲದೆ, ಸ್ಥಿರ ಇಂಧನ ಬೆಲೆಗಳು ಮತ್ತು ಸುರಕ್ಷಿತ ಪೂರೈಕೆಗಳನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಇಂಧನ ನೀತಿಯ ಅವಳಿ ಗುರಿಗಳಾಗಿವೆ ಎಂದು ಜೈಸ್ವಾಲ್ ತಿಳಿಸಿದ್ದಾರೆ. ಇದರಲ್ಲಿ ನಮ್ಮ ಇಂಧನ ಮೂಲವನ್ನು ವಿಶಾಲ ಆಧಾರದ ಮೇಲೆ ಪಡೆಯುವುದು ಮತ್ತು ಮಾರುಕಟ್ಟೆ ಪರಿಸ್ಥಿತಿಗಳನ್ನು ಪೂರೈಸಲು ಸೂಕ್ತವಾದಂತೆ ವೈವಿಧ್ಯಗೊಳಿಸುವುದು ಸೇರಿದೆ ಎಂದು ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ.

ಮುಂದುವರೆದು ಮಾತನಾಡಿರುವ ಜೈಸ್ವಾಲ್​​​, ಟ್ರಂಪ್​ ಆಡಳಿತವು ಭಾರತದೊಂದಿಗೆ ಇಂಧನ ಸಹಕಾರವನ್ನು ಗಾಢವಾಗಿಸಲು ಆಸಕ್ತಿ ತೋರಿಸಿದೆ. ಈ ಕುರಿತು ಉಭಯ ದೇಶಗಳ ನಡುವೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.

ಅಮೆರಿಕಕ್ಕೆ ಸಂಬಂಧಿಸಿದಂತೆ, ನಾವು ಹಲವು ವರ್ಷಗಳಿಂದ ನಮ್ಮ ಇಂಧನ ಸಂಗ್ರಹಣೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ. ಕಳೆದ ದಶಕದಲ್ಲಿ ಇದು ಸ್ಥಿರವಾಗಿ ಪ್ರಗತಿ ಸಾಧಿಸಿದೆ ಎಂದು ಜೈಸ್ವಾಲ್​ ತಿಳಿಸಿದ್ದಾರೆ.

ಭಾರತದ ರಷ್ಯಾದ ತೈಲ ಆಮದು ಕುರಿತು ಟ್ರಂಪ್ ಹೇಳಿಕೆ

ಭಾರತದ ಪ್ರಧಾನಿಯಿಂದ ರಷ್ಯಾದ ತೈಲ ಖರೀದಿಯ ಬಗ್ಗೆ ಭರವಸೆ ದೊರೆತ ನಂತರ, ಭಾರತ ಶೀಘ್ರದಲ್ಲೇ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂದು ಟ್ರಂಪ್​ ಹೇಳಿದ್ದರು. ಅಲ್ಲದೆ, ಬುಧವಾರ ವಾಷಿಂಗ್ಟನ್‌ನ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿದರೆ ಉಕ್ರೇನ್ ಯುದ್ಧವನ್ನು ನಿಲ್ಲಿಸುವುದು ಸುಲಭವಾಗುತ್ತದೆ ಎಂದಿದ್ದಾರೆ.

ಅಲ್ಲದೆ, ಚೀನಾವು ರಷ್ಯಾದ ತೈಲ ಖರೀದಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ. ಭಾರತ ತೈಲ ಖರೀದಿಸುತ್ತಿರುವುದು ನನಗೆ ಸಂತೋಷವಾಗಿರಲಿಲ್ಲ. ಮೋದಿ ಇಂದು ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ನನಗೆ ಭರವಸೆ ನೀಡಿದರು. ಇದು ಒಂದು ದೊಡ್ಡ ಹೆಜ್ಜೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ಭಾರತ ಮತ್ತು ಚೀನಾ ರಷ್ಯಾದ ತೈಲದ ಪ್ರಮುಖ ಖರೀದಿದಾರರಾಗಿದ್ದಾರೆ. ಇದಕ್ಕಾಗಿ ಪಶ್ಚಿಮ ದೇಶಗಳು ಭಾರತವನ್ನು ಟೀಕಿಸಿವೆ, ಆದರೆ ಭಾರತ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net