

ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿಗೆ ಒಳಗಾಗಿದ್ದ ಮೊದಲ ವ್ಯಕ್ತಿಗೆ ಈಗ ಮತ್ತೊಮ್ಮೆ ಸೋಂಕು ದೃಢಪಟ್ಟಿದೆ. ಕೇರಳದ ತ್ರಿಶೂರ್ನಲ್ಲಿ ನೆಲೆಸಿರುವ ಈ 20 ವರ್ಷದ ಯುವತಿಗೆ ಜುಲೈ 13ರಂದು ಸೋಂಕು ದೃಢಪಟ್ಟಿದ್ದು, ಇದೀಗ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
2020ರ ಜನವರಿಯಲ್ಲಿ ಕೇರಳದಲ್ಲಿ ಪತ್ತೆಯಾಗಿದ್ದ ಕೋವಿಡ್ ಸೋಂಕಿತೆ ಭಾರತದ ಪ್ರಪ್ರಥಮ ಕೋವಿಡ್-19 ಸೋಂಕಿತೆ. ಈಕೆ ಚೀನಾದ ವುಹಾನ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೇರಳಕ್ಕೆ ಬರುತ್ತಿದ್ದಂತೆ ಪರೀಕ್ಷೆಗೆ ಒಳಗಾಗಿದ್ದು, ಆಗ ಕೋವಿಡ್ ಸೋಂಕಿರುವುದು ದೃಢಪಟ್ಟಿತ್ತು.
ಇದೀಗ ಆಕೆ ಮತ್ತೊಮ್ಮೆ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು, ಸೋಂಕಿರುವುದು ಇಂದು ದೃಢಪಟ್ಟಿದೆ. ಈಕೆಯಲ್ಲಿ ರೋಗಲಕ್ಷಣಗಳು ಕಂಡುಬರದಿದ್ದರೂ ಸದ್ಯಕ್ಕೆ ಮನೆಯಲ್ಲೇ ಐಸೋಲೇಷನ್ಗೆ ಒಳಗಾಗಿದ್ದಾರೆ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ. ಅಂದಹಾಗೆ ಈಕೆ ಇನ್ನೂ ಮೊದಲ ಡೋಸ್ ಲಸಿಕೆ ಕೂಡ ಹಾಕಿಸಿಕೊಂಡಿಲ್ಲ ಎಂಬ ಮಾಹಿತಿಯೂ ಬಹಿರಂಗಗೊಂಡಿದೆ. (ಏಜೆನ್ಸೀಸ್)