ಪೂರ್ವಿಕರ ಸಾಧನಾಸೋಪಾನಪಗಳನ್ನು ಬಿಡಿಸಿಟ್ಟ ಭಾರತೀಯ ಶಿಲಾಪ್ರಪಂಚದ ಪಿತಾಮಹ ವಾಕಣಕರ್

sudina 1
Published on

ಭಾರತೀಯತ್ವದ ಕಂಪನ್ನು ಹೊಸಕಲು ನಡೆಯುತ್ತಿದ್ದ ನೂರಾರು ಪ್ರಯತ್ನಗಳ ನಡುವೆಯೇ, ಕತ್ತಲೆಯ ಜಗತ್ತಿಗೆ ಜ್ಞಾನಜ್ಯೋತಿಯ ಬೆಳಕಿತ್ತ ಶ್ರೀಮಂತ ಭಾರತೀಯ ಸಾಂಸ್ಕೃತಿಕ ಪರಂಪರೆಯ ವಿಶ್ವವ್ಯಾಪ್ತತೆಯ ಮಹಾನತೆಯನ್ನೂ, ಅಶ್ಮಕಾಷ್ಠಗಳು ಸಾರಿದ ಮಾನವೇತಿಹಾಸದ ಕಥೆಯನ್ನೂ, ಶತಮಾನಗಳ ಕಾಲ ಮರೆಗೆ ಸರಿದಿದ್ದ ಪೂರ್ವಿಕರ ಸಾಧನಾಸೋಪಾನಪಗಳನ್ನೂ ಎಳೆಎಳೆಯಾಗಿ ತೆರೆದಿಟ್ಟ ಧೀಮಂತ ಡಾ. ವಿಷ್ಣು ಶ್ರೀಧರ ವಾಕಣಕರ್. ಭಾರತೀಯ ಶಿಲಾಪ್ರಪಂಚದ ಪಿತಾಮಹರಾಗಿ, ವಿಶ್ವಪರಂಪರೆಯ ತಾಣ ಭೀಮ್ೇಟಕಾ ಗುಹೆಗಳನ್ನು ಪರಿಚಯಿಸಿ, ವೇದಜನನಿ ಸರಸ್ವತಿಯ ಅಸ್ತಿತ್ವಾಸ್ಮಿತೆಗಳನ್ನು ಇದಮಿತ್ಥಂ ಎಂದು ಸಾಧಿಸಿದ ಮಹಾಮಹಿಮ ವಾಕಣಕರರು ಮಧ್ಯಪ್ರದೇಶದ ಸಿದ್ಧನಾಥ-ಸೀತಾಬಾಯಿ ದಂಪತಿ ಪುತ್ರನಾಗಿ 1919ರ ಮೇ 4ರಂದು ಜನಿಸಿದರು. ಬಾಲ್ಯದ ಶಿಕ್ಷಣದ ಜೊತೆಜೊತೆಗೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೊಳಗಾಗಿ ಜೀವನದ ಗುರಿಯನ್ನು ಕಂಡುಕೊಂಡ ವಾಕಣಕರರು ಆಪ್ತವಲಯದಲ್ಲಿ ಹರಿಭಾವೂ ಆಗಿಯೇ ಖ್ಯಾತರಾದರು.

ಚಿತ್ರಕಲೆ ಮತ್ತು ಶಿಲ್ಪಕಲೆಯ ಆಸಕ್ತಿಯು ರಾಷ್ಟ್ರೀಯತೆಯ ಬೆಳಕಿನಲ್ಲಿ ಮತ್ತಷ್ಟು ಪ್ರಖರವಾಯಿತು. ಪರಿವಾರಪ್ರೀತಿಯೊಂದಿಗೆ ಸಂಘಸಂಸ್ಕಾರವೂ ದೊರೆತ ಕಾರಣ ಹುಡುಗಾಟದ ವಯಸ್ಸಿಗೇ ಹುಡುಕಾಟಕ್ಕೆ ಪ್ರೇರಣೆ ದೊರೆತು ಕಾಡುಗುಡ್ಡಗಳೇ ಬದುಕಿನ ಭಾಗವಾದವು. ಹಳೇ ನಾಣ್ಯಗಳು, ಗ್ರಂಥಗಳು, ಶಿಲಾತುಂಡುಗಳು, ಮೂರ್ತಿಗಳು ಸಾಮಾನ್ಯರಿಗೆ ವಸ್ತುಗಳಾಗಿ ಕಂಡರೆ ವಾಕಣಕರರಿಗೆ ಅದು ಅದಮ್ಯ-ಅಜೇಯ ಇತಿಹಾಸವಾಗಿ ಗೋಚರಿಸಿತು. ಪ್ರವಾಸದ ಪ್ರತಿಕ್ಷಣದಲ್ಲಿಯೂ ಸಂಶೋಧನೆಯ ದೃಷ್ಟಿಯನ್ನೇ ಹೊಂದಿದ್ದ ವಿಶಿಷ್ಟವ್ಯಕ್ತಿಯಾಗಿಯೇ ಬೆಳೆದ ವಾಕಣಕರ್ ಫ್ರಾನ್ಸ್, ಜರ್ಮನಿ, ಗ್ರೀಸ್, ಈಜಿಪ್ತ್, ಇಂಗ್ಲೆಂಡ್, ಅಮೆರಿಕ ಮೊದಲಾದ ದೇಶಗಳಲ್ಲಿ ಸಂಚರಿಸಿ ಅಪರಿಮಿತ ಜ್ಞಾನವನ್ನು ಸಂಪಾದಿಸಿ ಶಿಲಾಶಾಸನಬ್ರಹ್ಮನಾಗಿ ರೂಪುಗೊಂಡರು. ನಾಲ್ಕುಸಾವಿರ ಗುಹೆಗಳನ್ನು ಸ್ವಯಂ ಶೋಧಿಸಿರುವುದಲ್ಲದೆ ಏಳು ಸಹಸ್ರ ರೇಖಾಚಿತ್ರಗಳನ್ನು ಬಿಡಿಸಿದ ಇವರು, ಇನ್ನೂರಕ್ಕೂ ಮಿಕ್ಕಿದ ಶಾಸನಗಳ ಅಧ್ಯಯನವನ್ನೂ ನಡೆಸಿದರು.

ಭಾರತೀಯ ಮನೋಧರ್ಮದ ದೃಷ್ಟಿಯಿಂದ ಸರಸ್ವತೀ ನದಿ ಕುರಿತಾದ ಸಂಶೋಧನೆ ಅತ್ಯಂತ ಮಹತ್ತ್ವದ್ದು. ಸರಸ್ವತಿಯು ಕೇವಲ ನೀರಾಗಿ ಹರಿಯದೆ ಸಮಗ್ರ ಭಾರತೀಯ ಸಂಸ್ಕೃತಿಯ ಮಾನಬಿಂದುವಾಗಿ, ವೈದಿಕ ಪರಂಪರೆಯ ಕೊಂಡಿಯಾಗಿ, ಅವಿಚ್ಛಿನ್ನ-ಅಸ್ಖಲಿತ ಸನಾತನಧರ್ಮದ ಮೂಲಸ್ರೋತವಾಗಿರುವುದು ನಿರಕ್ಷರಕುಕ್ಷಿಗೂ ತಿಳಿದ ವಿಚಾರ. ಪ್ರಕೃತಿಯ ಆರಾಧನೆಯನ್ನು ನಿತ್ಯಜೀವನದ ಅವಿಭಾಜ್ಯ ಅಂಗವಾಗಿಸಿದ ನಮ್ಮ ಪೂರ್ವಿಕರಿಗೆ ಸರಸ್ವತಿಯ ಅಸ್ತಿತ್ವದ ಅರಿವಿತ್ತು. ವಿದೇಶೀ ಬೌದ್ಧಿಕ ಆಕ್ರಮಣದ ಕಾರಣದಿಂದಾಗಿ ಯಾರೋ ಹೇಳಿದ್ದನ್ನೇ ಉರು ಹೊಡೆಯುವ ನಮ್ಮವರ ಮನೋಸ್ಥಿತಿಗೆ ನೊಂದ ವಾಕಣಕರ್ ನಡೆಸಿದ ಸರಸ್ವತೀ ಶೋಧ ವಿಶಿಷ್ಟವೂ, ಯುಗಯುಗಗಳವರೆಗೆ ನೆನಪಿಡುವ ಚಾರಿತ್ರಿಕ ಘಟ್ಟವೂ ಹೌದು. ಸಾವಿರಕ್ಕೂ ಮಿಕ್ಕಿದ ನಗರಗಳ ಅಧಿಕೃತ ಮಾಹಿತಿ, ಸಾವಿರಾರು ವರ್ಷಗಳ ಜನಜೀವನದ ಮೇಲೆ ಬೆಳಕು ಚೆಲ್ಲಿದ ಈ ಕಾರ್ಯವು ಬ್ರಿಟಿಷರ ವಾದಕ್ಕೆ ತಿಲಾಂಜಲಿ ಸಮರ್ಪಿಸಿತು. ಶಕ್ತಿಶಾಲಿ ಸಾಮ್ರಾಜ್ಯವನ್ನು ಕಂಡ ನರ್ಮದಾ ಕಣಿವೆಯ ಸಂಶೋಧನೆಯೂ ಭಾರತದ ಯಶೋಗಾನವನ್ನು ವಿಶ್ವಕ್ಕೆ ಪರಿಚಯಿಸಿತು.

ವಾಕಣಕರರ ಜೀವನದ ಅತ್ಯಪರೂಪದ ಸಾಧನೆಯೇ ಭೀಮ್ೇಟಕಾ ಗುಹೆಗಳ ಅನಾವರಣ. ಶಿಲಾಯುಗದ ಮಾನವನ ಗುಣಗಳನ್ನೂ, ಜೀವನಶೈಲಿಯನ್ನೂ, ಜಗತ್ತಿನ ಬೇರೆಲ್ಲೂ ಇಲ್ಲದ ಚಿತ್ರನಿಧಿಯಿರುವ ಗುಹಾಪಂಕ್ತಿಯನ್ನು ಪತ್ತೆಮಾಡಿದ ಅದ್ವಿತಿಯ ಸಂಶೋಧಕ ಹರಿಭಾವುಜೀ ವಿಕ್ರಮದ ಹಿಂದಿರುವ ಶ್ರಮ ಅವರ್ಣನೀಯ. ಊಟ-ತಿಂಡಿ-ನಿದ್ದೆ-ದಿವಾನಿಶಿಗಳ ಪರಿವೆಯಿಲ್ಲದೆ, ಕಾಡುಪ್ರಾಣಿಗಳ ಅಸಂಖ್ಯ ಉಪಟಳಗಳ ನಡುವೆ ಭಾರತದ ಶಿಲಾಚಿತ್ರಸಿರಿವಂತಿಕೆಯನ್ನು ವಿಶ್ವವೇದಿಕೆ ಮೇಲೆ ತೆರೆದಿಟ್ಟರು. ಪ್ರತಿಯೊಂದು ವಸ್ತುವನ್ನೂ ಕೂಲಂಕಷವಾಗಿ ಗಮನಿಸಿ ವಿವಿಧ ಯುಗಗಳ ಕೇಂದ್ರವಾಗಿರುವ, ಲಕ್ಷವರ್ಷಗಳ ಇತಿಹಾಸವನ್ನು ಹೊಂದಿರುವ ಭೀಮಬೇಟಕಾ ಉತ್ಖನನ ಕಾರ್ಯವಂತೂ ವಿಶ್ವಮಾನ್ಯತೆಯನ್ನೇ ತಂದಿತ್ತಿತು. ಭಾರತದಲ್ಲಿ ಈವರೆಗೆ ಪತ್ತೆಯಾದ ಒಟ್ಟು ಶಿಲಾಸ್ಥಾನಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಸಂಶೋಧಿಸಿದ ಕೀರ್ತಿ ಹರಿಭಾವು ಅವರಿಗೆ ಸಲ್ಲುತ್ತದೆ. ಈಶಾನ್ಯ ಭಾರತದಲ್ಲೂ ಸಂಶೋಧನೆಯನ್ನು ನಡೆಸಿದ ವಾಕಣಕರರು ಹಿಂದೂಸಂಸ್ಕೃತಿಯ ವಿರಾಡ್ರೂಪವನ್ನೇ ಬಿಚ್ಚಿಟ್ಟರು. ಪುರಾಣದ ಒಂದೊಂದು ಪದಗಳಿಗೂ ತಮ್ಮದೇ ಆದ ಜಾನಪದೀಯ ಅರ್ಥವ್ಯಾಪ್ತಿಯನ್ನು ನೀಡುತ್ತ ಅಲ್ಲಿನ ಜನರನ್ನು ಮರುಳು ಮಾಡಿ ಮತಾಂತರಿಸುತ್ತಿದ್ದ ಮಿಶನರಿಗಳಿಗಂತೂ ಹರಿಭಾವುಜೀ ಕೆಲಸಗಳು ತಡೆಗೋಡೆಯೇ ಆಯಿತು. ವನವಾಸಿಗಳ ಜೀವನವಿಧಾನವನ್ನೂ, ವಿಶಿಷ್ಟಸಂಸ್ಕೃತಿಯನ್ನೂ ಭಾರತೀಯ ಸಮಾಜಕ್ಕೆ ಪರಿಚಯಿಸಿದ ವಾಕಣಕರರು ಈಶಾನ್ಯ ಭಾರತದ ಆತ್ಮಶೋಧಕರೆಂದರೆ ಅತಿಶಯೋಕ್ತಿಯಲ್ಲ.

ಸಾಮಾನ್ಯವಾಗಿ ಕಲಾವಿದರು ಒಂದೇ ವೇದಿಕೆಯಲ್ಲಿ ಜೊತೆಯಾಗುವುದು ಬಹಳ ಅಪರೂಪ. ಪ್ರಸಿದ್ಧಿಯ ಪರಾಕಾಷ್ಠೆಯಲ್ಲಿ ರಾಷ್ಟ್ರಧರ್ಮವನ್ನು ಮರೆಯಬಾರದೆಂಬ ಸದುದ್ದೇಶದೊಂದಿಗೆ ವಾಕಣಕರರು ಕಲಾವಿದರ ಸಂಘಟನೆಯ ಅಗತ್ಯವನ್ನು ಮನಗಂಡರು. ‘ಸಾ ಕಲಾ ಯಾ ವಿಮುಕ್ತಯೇ’ ಎಂಬ ಧ್ಯೇಯಾದರ್ಶ ಹಾಗೂ ಪ್ರಗತಿಪಥದ ಉದಾರ ದೃಷ್ಟಿಕೋನದೊಂದಿಗೆ ಕಲಾವಿದರ ಸಂಗಮ-ಸಂಪರ್ಕ-ಸಹವಾಸದ ಕನಸಿನೊಂದಿಗೆ ‘ಸಂಸ್ಕಾರ ಭಾರತಿ’ಯನ್ನು ಲೋಕಾರ್ಪಣೆಗೈದರು. ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಯ ಉದ್ದೇಶಗಳನ್ನು ನಾಡಿನ ಉದ್ದಗಲಕ್ಕೂ ತಲುಪಿಸಿದ ಪರಿಣಾಮವಾಗಿ ಸಂಸ್ಕಾರ ಭಾರತಿ ಇಂದು ರಾಷ್ಟ್ರವ್ಯಾಪಿಯಾಗಿ ಬೆಳೆದಿದೆ.

ಕಲಾಪ್ರದರ್ಶನದ ಜೊತೆಗೆ ರಾಷ್ಟ್ರೋತ್ಥಾನವೂ ಕಲಾವಿದರ ಕರ್ತವ್ಯವಾಗಬೇಕೆಂಬ ಅದಮ್ಯ ಆಸೆ ವಾಕಣಕರರದಾಗಿತ್ತು. ಇಂದು ಹೆಮ್ಮರವಾಗಿ ಬೆಳೆದಿರುವ ಸಂಸ್ಕಾರ ಭಾರತಿ ವಾಕಣಕರರ ಜನ್ಮಶತಮಾನೋತ್ಸವ ನಿಮಿತ್ತ ದೇಶದಾದ್ಯಂತ ನಡೆಸಿರುವ ಸ್ತುತ್ಯರ್ಹ ಕಾರ್ಯವು ಡಾ. ವಿಷ್ಣು ಶ್ರೀಧರ ವಾಕಣಕರರಿಗೆ ಸಲ್ಲಿಸಿದ ಅನುಪಮ ಗೌರವವಾಗಿದೆ. ಪ್ರಚಾರ, ಪ್ರಸಿದ್ಧಿಗಳ ವಿರುದ್ಧ ದಿಕ್ಕಿನಲ್ಲಿ ಸಾಗಿದ ಆ ಮಹಾತ್ಮನಿಗೆ ಪದ್ಮಶ್ರೀ ಪ್ರಶಸ್ತಿ ಅರಸಿಬಂದು ತನ್ನ ಗೌರವವನ್ನು ನೂರ್ಮಡಿಗೊಳಿಸಿತು. ಭಗವತ್ಪ್ರೇರಣೆಯಂತೆ ಭಾರತದ ವೈಭವವನ್ನು ವಿಶ್ವಕ್ಕೆ ಪರಿಚಯಿಸಿದ ಮಹಾಮಹಿಮ ವಾಕಣಕರರ ಬದುಕು ನಮಗೆ ಹೊಸಹೊಳಹನ್ನೂ, ಅಪರಿಮಿತ ಜೀವನೋತ್ಸಾಹವನ್ನೂ ನೀಡಲಿ.

| ಆದರ್ಶ ಗೋಖಲೆ (ಲೇಖಕರು ಉಪನ್ಯಾಸಕರು, ಯುವ ವಾಗ್ಮಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net