ಭಾರತದ ಆರ್ಥಿಕವೃದ್ಧಿ ಜಪಾನ್​ನಲ್ಲಿ ತಲ್ಲಣ

ec
Published on

. 2025ಕ್ಕೆ ಭಾರತ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆ

. ಪಾನಿಗರಲ್ಲಿ ಆತಂಕ ಸೃಷ್ಟಿಸಿದ ಐಎಂಎಫ್ ಭವಿಷ್ಯ

ನವದೆಹಲಿ: ಮುಂದಿನ ವರ್ಷ (2025) ಭಾರತವು ವಿಶ್ವದಲ್ಲೇ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭವಿಷ್ಯ ನುಡಿದಿರುವುದು ಜಪಾನ್​ನ ಉದ್ಯಮ ವಲಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ.

ಭಾರತದ ಸಾಂಕೇತಿಕ ಒಟ್ಟು ದೇಶೀಯ ಉತ್ಪನ್ನ (ಎನ್​ಜಿಡಿಪಿ) 2025ರಲ್ಲಿ ಜಪಾನ್​ನ ಎನ್​ಜಿಡಿಪಿಯನ್ನು ಮೀರಿ ಬೆಳೆಯಲಿದ್ದು, ಆ ಮೂಲಕ ಭಾರತ ಜಗತ್ತಿನ 4ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಜಪಾನ್​ನ ಎನ್​ಜಿಡಿಪಿ 4.31 ಟ್ರಿಲಿಯನ್ ಡಾಲರ್ ಇದ್ದು, ಭಾರತದ ಎನ್​ಜಿಡಿಪಿ ಮುಂದಿನ ವರ್ಷ 4.34 ಟ್ರಿಲಿಯನ್ ಡಾಲರ್​ಗೆ ತಲುಪಲಿದೆ ಎಂದು ಐಎಂಎಫ್ ಇತ್ತೀಚೆಗೆ ಹೇಳಿದೆ.

ಜಪಾನ್​ನ ಜಿಡಿಪಿಯನ್ನು 2023ರಲ್ಲಿ ಜರ್ಮನಿ ಹಿಂದೆ ಹಾಕಿತ್ತು. ಈಗ ಭಾರತವೂ ಹಿಂದಿಕ್ಕಿದರೆ ಜಪಾನ್ ಐದನೇ ಸ್ಥಾನಕ್ಕೆ ಕುಸಿಯಲಿದೆ. ಐಎಂಎಫ್ ಈ ಮೊದಲು ಇಂತಹ ಬೆಳವಣಿಗೆ 2026ಕ್ಕೆ ನಡೆಯಲಿದೆ ಎಂದಿತ್ತು. ಆದರೆ ಇದು ಒಂದು ವರ್ಷ ಮುಂಚೆಯೇ ನಡೆಯುತ್ತಿರುವುದು ಜಪಾನ್​ನ ಆತಂಕಕ್ಕೆ ಕಾರಣವಾಗಿದೆ.

ಜಾಗತಿಕ ಆರ್ಥಿಕ ಬೆಳವಣಿಗೆ ಬಗ್ಗೆ ಆರ್ಗನೈಸೇಷನ್ ಫಾರ್ ಎಕನಾಮಿಕ್ ಕೋಆಪರೇಷನ್ ಆಂಡ್ ಡೆವಲಪ್​ವೆುಂಟ್ (ಒಇಸಿಡಿ) ಮೇ 2ರಂದು ಹೊಸ ವರದಿ ಬಿಡುಗಡೆ ಮಾಡಿದ್ದು, ಅದರಿಂದ ಜಪಾನ್ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಾಗಿದೆ. ಜಾಗತಿಕ ವೃದ್ಧಿ ಈ ವರ್ಷ ಶೇ. 3.1ರಷ್ಟಾಗಲಿದ್ದು, ಜಪಾನ್​ನ ಆರ್ಥಿಕ ವೃದ್ಧಿಯ ದರ ಶೇ. 0.5ರಿಂದ ಶೇ. 1ರಷ್ಟಿರಲಿದೆ ಎಂದು ಒಇಸಿಡಿ ತಿಳಿಸಿದೆ. ಯೂಕ್ರೇನ್ ಯುದ್ಧದಂತಹ ಭೌಗೋಳಿಕ-ರಾಜಕೀಯ ಘಟನೆಗಳು ಇದಕ್ಕೆ ಕಾರಣ ಎಂದು ಅದು ಅಭಿಪ್ರಾಯಪಟ್ಟಿದೆ. ಒಮಿಕ್ರಾನ್ ಅಲೆಯಿಂದ ಆಗಲೇ ಕುಸಿದಿದ್ದ ಜಪಾನ್ ಕಂಪನಿಗಳ ಆರ್ಥಿಕ ಚಟುವಟಿಕೆ ಯುದ್ಧದಿಂದಾಗಿ ಮತ್ತಷ್ಟು ಸಮಸ್ಯೆಗೆ ಸಿಲುಕಿದೆ. ಜಾಪನೀಸ್ ಕರೆನ್ಸಿ ಯೆನ್​ನ ಅನಿಶ್ಚಿತತೆ ಕೂಡ ಆ ರಾಷ್ಟ್ರದ ಉದ್ಯಮಿಗಳ ಆತ್ಮವಿಶ್ವಾಸವನ್ನು ಉಡುಗಿಸಿದೆ. ಆಮದು ವೆಚ್ಚ ಹೆಚ್ಚಿದ್ದು, ರಫ್ತು ಪ್ರಮಾಣ ಕುಸಿದಿದೆ. ಜಪಾನ್​ನ ರಫ್ತು ಪ್ರಮಾಣವು ಕಳೆದ ಎರಡೂವರೆ ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಜಪಾನ್ ತನ್ನ ರಫ್ತಿಗೆ ಅತಿ ಹೆಚ್ಚು ನೆಚ್ಚಿಕೊಂಡಿರುವುದು ಚೀನಾವನ್ನು. ಆದರೆ ಚೀನಾದಿಂದ ಇತ್ತೀಚೆಗೆ ಹೆಚ್ಚಿನ ಆರ್ಡರ್​ಗಳು ಜಪಾನ್​ಗೆ ದೊರೆಯುತ್ತಿಲ್ಲ. ಇದಕ್ಕೆ ಕಾರಣ- ಸ್ವತಃ ಚೀನಾದ ಆರ್ಥಿಕತೆಯೇ ಸಂಕಷ್ಟದಲ್ಲಿರುವುದು. ಆಮದಿಗೆ ಚೀನಾ ಮಾರುಕಟ್ಟೆಯನ್ನು ಮುಕ್ತಗೊಳಿಸಲು ಆ ರಾಷ್ಟ್ರದ ಅಧ್ಯಕ್ಷ ಷಿ ಮನಸ್ಸು ಮಾಡುತ್ತಿಲ್ಲ.

ಭಾರತದ್ದು ಬೇರೆಯದೇ ಕಥೆ: 2023ರ ಜೂನ್​ನಿಂದ ಸೆಪ್ಟೆಂಬರ್​ವರೆಗಿನ ತ್ರೖೆಮಾಸಿಕದಲ್ಲಿ ಶೇ. 7.6ರಷ್ಟು ಆರ್ಥಿಕ ವೃದ್ಧಿ ದಾಖಲಾಗಬಹುದೆಂದು ಸರ್ಕಾರ ಅಂದುಕೊಂಡಿದ್ದರೆ, ಆ ವರ್ಷದ ಕೊನೆಯ ತಿಂಗಳುಗಳಲ್ಲಿ 8.4ರಷ್ಟು ವೃದ್ಧಿ ದಾಖಲಾಯಿತು. ವಿಜೃಂಭಿಸುತ್ತಿರುವ ಷೇರುಮಾರುಕಟ್ಟೆ, ಪ್ರಬಲ ದೇಶೀಯ ಬಳಕೆ, ಸ್ಥಿರವಾಗಿರುವ ರೂಪಾಯಿ ಬೆಲೆ, ಹೆಚ್ಚಿರುವ ರಫ್ತು ಪ್ರಮಾಣ ಮುಂತಾದವು ಭಾರತದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net