ಸಂಪಾದಕೀಯ: ಬ್ರಿಕ್ಸ್​ನಲ್ಲಿ ಭಾರತದ ಪಾರಮ್ಯ

BRICS Summit
BRICS Summit
Published on
ರಾಜಧಾನಿ ನವದೆಹಲಿಯಲ್ಲಿ ನಡೆದ ಹದಿನೆಂಟನೇ ಬ್ರಿಕ್ಸ್​ ಶೃಂಗಸಭೆ ಭಾನುವಾರ ಮುಕ್ತಾಯಗೊಂಡಿದೆ. ಎರಡು ದಿನಗಳು, 12 ದೇಶಗಳ ಅಗ್ರ ನಾಯಕರು, ಸಾವಿರಾರು ಪ್ರತಿನಿಧಿಗಳು, ಡಜನ್​ಗಟ್ಟಲೇ ಕಾರ್ಯಕ್ರಮಗಳು ಮತ್ತು ಎಲ್ಲರ ಒಮ್ಮತದೊಂದಿಗೆ ಅಂಗೀಕರಿಸಲ್ಪಟ್ಟ ಒಂದು ಘೋಷಣಾಪತ್ರವು ಈಗ ಜಾಗತಿಕವಾಗಿ ಗಮನ ಸೆಳೆದಿದೆ. ಬ್ರಿಕ್ಸ್​ನ ಎಲ್ಲ 11 ಸದಸ್ಯ ರಾಷ್ಟ್ರಗಳು 140 ಪ್ಯಾರಾಗ್ರಾಫ್​ಗಳ ಜಂಟಿ ಘೋಷಣಾಪತ್ರವಾದ "ನವದೆಹಲಿ ಡಿಕ್ಲರೇಶನ್​'ಗೆ (ಹೊಸ ದೆಹಲಿ ಘೋಷಣೆ) ಸಹಿ ಹಾಕಿರುವುದು, ಭಾರತ ರಾಜತಾಂತ್ರಿಕ ಕ್ಷೇತ್ರದಲ್ಲಿ ಸಾಧಿಸಿರುವ ಸ್ಪಷ್ಟವಾದ ಮೇಲುಗೈ. ಮಾತ್ರವಲ್ಲ, ಇದು ಬ್ರಿಕ್ಸ್​ ಒಕ್ಕೂಟದಲ್ಲಿ ಒಗ್ಗಟ್ಟು ಮತ್ತು ಸಹಕಾರದ ಭಾವವನ್ನು ಹೆಚ್ಚಿಸಿರುವುದಕ್ಕೆ ಸಾಕ್ಷಿ.
ವಿಶ್ವದಲ್ಲಿ ಪ್ರಸ್ತುತ ನಾಲ್ಕು ದೊಡ್ಡ ಸಂಘರ್ಷಗಳು ನಡೆಯುತ್ತಿವೆ. ಅಮೆರಿಕ&ಇರಾನ್​, ರಷ್ಯಾ&ಯೂಕ್ರೇನ್​, ಸೌದಿ ಅರೇಬಿಯಾ&ಹೌತಿ ಮತ್ತು ಇಸ್ರೇಲ್​&ಲೆಬನಾನ್​. ಪ್ರಪಂಚದಾದ್ಯಂತ ಪ್ರಕ್ಷುಬ್ಧತೆ ಹಾಗೂ ಅನಿಶ್ಚಿತತೆಯ ವಾತಾವರಣವಿದೆ. ಬ್ರಿಕ್ಸ್​ನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ , "ಅಮೆರಿಕ ವಿರೋಧಿ' ಎಂದು ಜರಿಯುತ್ತಾರೆ. "ಬ್ರಿಕ್ಸ್​ನ ಅಮೆರಿಕ ವಿರೋಧಿ ನೀತಿಗಳನ್ನು ಬೆಂಬಲಿಸುವ ಯಾವುದೇ ದೇಶದ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು' ಎಂದು ಟ್ರಂಪ್​ ಎಚ್ಚರಿಕೆ ಸಹ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬ್ರಿಕ್ಸ್​ ಶೃಂಗಸಭೆಯಂತಹ ಬೃಹತ್​ ಕಾರ್ಯಕ್ರಮವನ್ನು ಆಯೋಜಿಸುವುದು ಸುಲಭವಾಗಿರಲಿಲ್ಲ. ಪರಸ್ಪರ ಸಂಘರ್ಷದಲ್ಲಿ ತೊಡಗಿರುವ ಇರಾನ್​, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳನ್ನೂ ಭಾರತ ಒಪ್ಪಿಸುವಲ್ಲಿ ಯಶಸ್ವಿಯಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳಲ್ಲಿ 15ಕ್ಕೂ ಹೆಚ್ಚು ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು ಮತ್ತು ಕೆಲವು ಪರಸ್ಪರ ವಿರೋಧಿ ದೇಶಗಳನ್ನೂ ಒಂದೆಡೆ ಕೂರಿಸಿದರು. ಪುತಿನ್​ ಭೇಟಿಯ ವೇಳೆ ವ್ಯಾಪಾರ, ರಕ್ಷಣೆ ಮತ್ತು ಇಂಧನ ವಿಷಯಗಳ ಕುರಿತು ಚರ್ಚೆ ನಡೆಯಿತು. ಯೂಕ್ರೇನ್​ ಯುದ್ಧದ ಶಾಂತಿಯುತ ಪರಿಹಾರಕ್ಕಾಗಿ ಭಾರತ ಮತ್ತು ಪ್ರಧಾನಿ ಮೋದಿಯವರ ರಾಜತಾಂತ್ರಿಕ ಪ್ರಯತ್ನಗಳನ್ನು ಪುತಿನ್​ ಶ್ಲಾಘಿಸಿದರು ಹಾಗೂ ಕೃತಜ್ಞತೆ ಸಲ್ಲಿಸಿದರು. ಇರಾನ್​ ಅಧ್ಯಕ್ಷ ಪೆಜೆಶ್ಕಿಯಾನ್​ ಅವರೊಂದಿಗಿನ ಮಾತುಕತೆಯಲ್ಲಿ ಪ್ರಧಾನಿ ಮೋದಿ, ನೌಕಾಯಾನ ಮತ್ತು ವ್ಯಾಪಾರದ ಮುಕ್ತತೆಗೆ ಒತ್ತು ನೀಡಿದರು. ಕಳೆದ 8 ವರ್ಷಗಳಲ್ಲಿ ಇರಾನ್​ ಅಧ್ಯಕ್ಷರೊಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿತ್ತು.
ಇದೇ ವೇಳೆ "ದೆಹಲಿ ಘೋಷಣಾಪತ್ರ'ದಲ್ಲಿ ಪಹಲ್ಗಾಮ್​ ದಾಳಿಯನ್ನು ಖಂಡಿಸಲಾಗಿದ್ದು, "ನಾವು 2025ರ ಏಪ್ರಿಲ್​ 22ರಂದು ಜಮ್ಮು&ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕಟುಶಬ್ದಗಳಲ್ಲಿ ಖಂಡಿಸುತ್ತೇವೆ ಮತ್ತು ಗಡಿಯಾಚೆಗಿನ ಉಗ್ರರ ನುಸುಳುವಿಕೆ ಸೇರಿದಂತೆ ಭಯೋತ್ಪಾದನೆಯ ಎಲ್ಲ ರೂಪಗಳ ವಿರುದ್ಧ ಹೋರಾಡಲು ಬದ್ಧರಾಗಿದ್ದೇವೆ' ಎಂದು ಹೇಳುವ ಮೂಲಕ ಭಯೋತ್ಪಾದನೆ ವಿರುದ್ಧದ ಸಮರಕ್ಕೆ ಬಲ ಸಿಕ್ಕಂತಾಗಿದೆ. ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್​ ಏಳು ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದ್ದಲ್ಲದೆ, ಗಡಿ ವಿವಾದಕ್ಕೆ ನಿಷ್ಪಕ್ಷಪಾತ, ನ್ಯಾಯಯುತ ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳುವ ಮಾತನ್ನು ಪುನರುಚ್ಚರಿಸಿದ್ದಾರೆ. ಟ್ರಂಪ್​ ಹೇರುತ್ತಿರುವ ವಿವೇಚನಾರಹಿತ ಸುಂಕ ನೀತಿಗೂ ಬ್ರಿಕ್ಸ್​ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ, ಅಮೆರಿಕದ ಡಾಲರ್​ ಪ್ರಾಬಲ್ಯ ಕುಗ್ಗಿಸಲು ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರಕ್ಕೆ ಉತ್ತೇಜನ ನೀಡುವ ಬಗ್ಗೆ ಒಮ್ಮತದ ಅಭಿಪ್ರಾಯ ಏರ್ಪಟ್ಟಿದೆ. ಜಾಗತಿಕವಾಗಿ ರಾಜಕೀಯ ಬಿಕ್ಕಟ್ಟಿನ ಸ್ಥಿತಿ ಇರುವಾಗ ಭಾರತ ಬ್ರಿಕ್ಸ್​ ಶೃಂಗಸಭೆಯ ಅಧ್ಯಕ್ಷತೆಯ ಮೂಲಕ, ಮತ್ತೊಮ್ಮೆ ತನ್ನ ಪ್ರಭಾವ ಹಾಗೂ ಶಕ್ತಿಯನ್ನು ಜಗತ್ತಿನೆದುರಿಗೆ ಪರಿಚಯಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net