

ನವದೆಹಲಿ: ಲಾಕ್ಡೌನ್ ಅವಧಿಯಲ್ಲಿ ಭಾರತದಲ್ಲಿ ಕರೊನಾ ಸೋಂಕು ವ್ಯಾಪಿಸುವುದು ನಿಯಂತ್ರಣದಲ್ಲಿದೆ ಎಂದೇ ಹೇಳಲಾಗುತ್ತಿತ್ತು. ದೇಶದ ಜನಸಂಖ್ಯೆಗೆ ಹೋಲಿಸಿದಲ್ಲಿ ಇಲ್ಲಿರುವ ಕೋವಿಡ್ ರೋಗಿಗಳ ಸಂಖ್ಯೆ ತೀರಾ ಕಡಿಮೆ ಎಂದೇ ವ್ಯಾಖ್ಯಾನ ಮಾಡಲಾಗುತ್ತಿತ್ತು. ಜತೆಗೆ, ಬೇರೆ ದೇಶಗಳು ಭಾರತದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿವೆ ಎಂಬುದಕ್ಕೂ ಭಾರಿ ಪ್ರಚಾರ ಸಿಕ್ಕಿತ್ತು.
ಆದರೆ, ಹಂತಹಂತವಾಗಿ ನಿರ್ಬಂಧಗಳು ಸಡಿಲವಾಗುತ್ತಿದ್ದಂತೆ ಕರೊನಾ ಇನ್ನಿಲ್ಲದ ವೇಗದಲ್ಲಿ ಹೆಚ್ಚಾಗುತ್ತಿದೆ. ಕಳೆದ ಡಿಸೆಂಬರ್ನಿಂದ ಇಲ್ಲಿಯವರೆಗೆ ಚೀನಾದಲ್ಲಿ ಕಂಡುಬಂದ ಪ್ರಕರಣಗಳ ಸಂಖ್ಯೆ ನಮ್ಮಲ್ಲಿ ಒಂದೇ ದಿನಕ್ಕೆ ಕಾಣಿಸಿಕೊಳ್ಳುತ್ತಿದೆ....!
ಚೀನಾದಲ್ಲಿ ಆರಂಭದಿಂದ ಇಲ್ಲಿಯವರೆಗೆ 85,000 ಸೋಂಕಿತರಿದ್ದರೆ, ಭಾರತದಲ್ಲಿ ಕಳೆದ 24 ತಾಸುಗಳಲ್ಲಿ 84 ಸಾವಿರ ಹೊಸ ಕೇಸ್ಗಳು ಪತ್ತೆಯಾಗಿವೆ. ಜತೆಗೆ ಸತತ ಎರಡನೇ ದಿನವೂ 80 ಸಾವಿರಕ್ಕೂ ಅಧಿಕ ಕೇಸ್ಗಳು ವರದಿಯಾಗಿವೆ.
ಇದಲ್ಲದೇ, ಆಗಸ್ಟ್ನಿಂದಲೇ ಭಾರತದಲ್ಲಿ ಪ್ರತಿದಿನ ವರದಿಯಾಗುತ್ತಿರುವ ಕೇಸ್ಗಳ ಸಂಖ್ಯೆ ಜಗತ್ತಿನಲ್ಲಿಯೇ ಅತ್ಯಧಿಕವಾಗಿದೆ. ಆಗಸ್ಟ್ ತಿಂಗಳೊಂದರಲ್ಲಿಯೇ 20 ಲಕ್ಷ ಹೊಸ ಕೇಸ್ಗಳು ದೇಶದಲ್ಲಿ ಕಂಡುಬಂದಿವೆ. ಸದ್ಯ ಭಾರತದಲ್ಲಿನ ಸೋಂಕಿತರ ಸಂಖ್ಯೆ 38.53 ಲಕ್ಷಕ್ಕೂ ಹೆಚ್ಚಾಗಿದೆ.
ಮಾರ್ಚ್ನಲ್ಲಿ ವಿಶ್ವಭೂಪಟದಲ್ಲಿ ಎಲ್ಲೋ ಇದ್ದ ಭಾರತ, ಕೇಸ್ಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನಕ್ಕೆ ಬಂದಿದೆ. ಕೆಲ ದಿನಗಳಲ್ಲಿ ಬ್ರೆಜಿಲ್ಅನ್ನು ಮೀರಿಸಲಿದೆ. ಹಾಗೂ ಇದೇ ವೇಗದಲ್ಲಿ ಮುಂದುವರಿದರೆ ಅಮೆರಿಕವನ್ನು ಮೀರಿಸಿ 1.3 ಕೋಟಿ ಕೇಸ್ಗಳು ವರದಿಯಾಗುವ ಸಾಧ್ಯತೆಗಳಿವೆ ಎಂದು ಐಐಎಸ್ಸಿ ಲೆಕ್ಕಾಚಾರ ಹಾಕಿದೆ.
ಚೀನಾದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದಾಗ ಭಾರತದಲ್ಲಿ ಒಂದೂ ಪ್ರಕರಣಗಳಿರಲಿಲ್ಲ. ಅಲ್ಲಿ ಅನ್ಲಾಕ್ ಶುರುವಾದಾಗ ಭಾರತದಲ್ಲಿ ಲಾಕ್ಡೌನ್ ಮಾಡಲಾಗುತ್ತಿತ್ತು. ಅಲ್ಲಿ ಲಾಕ್ಡೌನ್ನಿಂದಾಗಿ ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದರೆ, ಇಲ್ಲಿ ಅನ್ಲಾಕ್ ಶುರುವಾಗುತ್ತಿದ್ದಂತೆ ಕರೊನಾ ತಾಂಡವ ಶುರುವಾಗಿದೆ. ದಿನಕ್ಕೊಂದು ಚೀನಾ ಸೃಷ್ಟಿಯಾಗುತ್ತಿದೆ. ಸದ್ಯ ಕರೊನಾ ಅತ್ಯಂತ ದೊಡ್ಡ ಮೂಲವೆಂದರೆ ಭಾರತ ಮಾತ್ರ.