ಅಮೆರಿಕದಲ್ಲಿ ಭಾರತದ ಕಚ್ಚಾತೈಲ ದಾಸ್ತಾನು; ತೈಲ ದರ ಏರಿಳಿತದ ಸಂಕಷ್ಟ ತಪ್ಪಿಸುವ ಉದ್ದೇಶ

Paduru
Published on

ನವದೆಹಲಿ: ಕಚ್ಚಾ ತೈಲ ಬೆಲೆ ಏರಿಳಿತ ಹಾಗೂ ಪೂರೈಕೆಯಲ್ಲಿನ ವ್ಯತ್ಯಯದಂತಹ ಸಮಸ್ಯೆಗಳನ್ನು ನೀಗಿಸಲು ಭಾರತ ತನ್ನ ಕಚ್ಚಾತೈಲವನ್ನು ಅಮೆರಿಕದಲ್ಲಿರುವ ವಿಶ್ವದ ಮೂರನೇ ಅತಿ ದೊಡ್ಡ ತೈಲ ಭಂಡಾರದಲ್ಲಿ ದಾಸ್ತಾನು ಮಾಡಲು ಮುಂದಾಗಿದೆ. ಇದು ವಿದೇಶವೊಂದರಲ್ಲಿ ಭಾರತದ ಮೊದಲ ತೈಲ ಸಂಗ್ರಹವಾಗಲಿದೆ. ಈ ಕುರಿತ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಅಮೆರಿಕದ ಇಂಧನ ಕಾರ್ಯದರ್ಶಿ ಡ್ಯಾನ್ ಬ್ರುಲೆಟ್ಟಿ ಅವರೊಂದಿಗೆ ವಿಡಿಯೋ ಕಾನ್ಪ್​ರೆನ್ಸ್ ಮೂಲಕ ಶುಕ್ರವಾರ ಸಭೆ ನಡೆಸಿದ ಬಳಿಕ ಧಮೇಂದ್ರ ಮಾಹಿತಿ ನೀಡಿದ್ದಾರೆ.

ಕಚ್ಚಾತೈಲವನ್ನು ಅಮೆರಿಕದಲ್ಲಿ ಸಂಗ್ರಹಿಸಿಡುವುದರ ಮುಖ್ಯ ಉದ್ದೇಶ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾತೈಲ ಬೆಲೆ ಏರಿಳಿತದ ಸಂಕಷ್ಟದಿಂದ ತಪ್ಪಿಸಿಕೊಳ್ಳುವುದು ಹಾಗೂ ಬೆಲೆ ಕಡಿಮೆಯಿದ್ದಾಗ ಅದರ ಸದುಪಯೋಗ ಪಡೆದುಕೊಳ್ಳುವುದಾಗಿದೆ. ಅಮೆರಿಕ ವಿಶ್ವದ ಮೂರನೇ ಅತಿ ದೊಡ್ಡ ತೈಲ ಸಂಗ್ರಹಾಗಾರವನ್ನು ಹೊಂದಿದ್ದು, ಅಲ್ಲಿ 71.40 ಕೋಟಿ ಬ್ಯಾರೆಲ್​ನಷ್ಟು ಕಚ್ಚಾತೈಲವನ್ನು ದಾಸ್ತಾನು ಮಾಡಬಹುದಾಗಿದೆ.

ಭಾರತದಲ್ಲಿ ಮೂರು ತೈಲ ಸಂಗ್ರಹಾಗಾರ: ಭಾರತದ ಬಳಿ ತೈಲ ದಾಸ್ತಾನು ಮಾಡಲು ಮೂರು ಭೂತಳದ ಭಂಡಾರ ಇದ್ದು ಅವುಗಳ ಸಾಮರ್ಥ್ಯ 3.80 ಕೋಟಿ ಬ್ಯಾರೆಲ್​ನಷ್ಟಿದೆ. ಈ ಮೂರೂ ಭಂಡಾರಗಳಲ್ಲಿನ ದಾಸ್ತಾನು ದೇಶದ ಒಂಬತ್ತೂವರೆ ದಿನ ತೈಲ ಬೇಡಿಕೆಯನ್ನು ತಣಿಸುತ್ತದೆ. ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದ ಮಾರ್ಚ್​ನಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್​ಗೆ 20 ಡಾಲರ್​ಗಿಂತ ಕಡಿಮೆಗೆ ಕುಸಿದಾಗ ಈ ಮೂರೂ ತೈಲ ಸಂಗ್ರಹಾಗಾರಗಳನ್ನು ತುಂಬಿಸಿತ್ತು.

90 ದಿನಕ್ಕೆ ತೈಲ ಸಂಗ್ರಹಿಸಿ ಎಂದ ಐಇಎ: ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಎಲ್ಲ ದೇಶಗಳಿಗೆ ಕನಿಷ್ಠ 90 ದಿನಗಳಿಗಾಗುವಷ್ಟು ತೈಲವನ್ನು ದಾಸ್ತಾನು ಮಾಡಿಟ್ಟುಕೊಳ್ಳುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ತನ್ನ ತೈಲ ದಾಸ್ತಾನು ಸಾಮರ್ಥ್ಯವನ್ನು ವೃದ್ಧಿಸುತ್ತಿದೆ. ಅಮೆರಿಕ ಭಾರತಕ್ಕೆ ಕಚ್ಚಾತೈಲ ಪೂರೈಸುವ 6ನೇ ಪ್ರಮುಖ ರಾಷ್ಟ್ರವಾಗಿದ್ದು, ಜಾಗತಿಕವಾಗಿ ಕಚ್ಚಾತೈಲ ಆಮದಿನಲ್ಲಿ ಭಾರತ ಮೊದಲ ಮೂರು ಸ್ಥಾನಗಳಲ್ಲಿದೆ. ಹೀಗಾಗಿ ಕಚ್ಚಾತೈಲ ದಾಸ್ತಾನು ಬೆಲೆ ಏರಿಳಿಕೆ ಸಂದರ್ಭದಲ್ಲಿ ಭಾರತಕ್ಕೆ ಅತೀ ದೊಡ್ಡ ವರದಾನವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net