ಭಾರತೀಯರೇ, ಹೀಗೇಕೆ ಆಲೋಚಿಸಬಾರದು?

1-680bc502b8fef
Published on
ಪ್ರಾಚೀನ ನಾಗರಿಕತೆಗಳಲ್ಲಿ ಭಾರತೀಯ ನಾಗರಿಕತೆ ಅತ್ಯಂತ ಹಳೆಯದು. ಅನೇಕ ಏಳು-ಬೀಳುಗಳು, ಸಾವು-ನಲಿವು, ಲಾಭ-ನಷ್ಟ ಗಳನ್ನು ಎದುರಿಸಿದರೂ, ನಮ್ಮ ಸಂಸ್ಕೃತಿ ಮತ್ತು ನಾಗರಿಕತೆ ಇಂದಿಗೂ ಜೀವಂತವಾಗಿದೆ.

ಇದು ನಮ್ಮ ಹೆಮ್ಮೆಗೂ, ಅಭಿಮಾನಕ್ಕೂ ಕಾರಣ. ಇಂತಹ ಹಿನ್ನೆಲೆಯಲ್ಲಿ, ಕೆಲವು ಭಾರತೀಯರು ತಮ್ಮ ದೇಶ, ಸಂಸ್ಕೃತಿ, ಜ್ಞಾನ, ಸಂಪತ್ತು ಮುಂತಾದವುಗಳ ಬಗ್ಗೆ ಗೌರವದಿಂದ ಆಲೋಚಿಸುತ್ತಾರೆ. ಆದರೆ ಇನ್ನೂ ಕೆಲವರು, ಪಾಶ್ಚಾತ್ಯ ರಾಷ್ಟ್ರಗಳೇ ನಮ್ಮ ಆದರ್ಶ ಎಂಬ ನಿಲುವಿನಲ್ಲಿ, ತಮ್ಮ ದೇಶದ ವೈಭವವನ್ನು ಮರೆತು ನಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾರೆ.

ಇದರ ನಡುವೆ, ಬಹುತೇಕ ಜನರು ತಮ್ಮ ಮನೆ, ಉದ್ಯೋಗ ಮತ್ತು ಸುಖದ ಜೀವನಕ್ಕೆ ಮಾತ್ರ ಒತ್ತು ನೀಡುತ್ತಿದ್ದಾರೆ. ಅವರಿಗೆ ಭಾರತದಲ್ಲೋ, ಬೇರೆ ದೇಶಗಳಲ್ಲೋ ಜೀವನ ಅನುಕೂಲಕರವಾಗಿರಬೇಕು ಎನ್ನುವುದೇ ಮುಖ್ಯ. ಭಾರತದಲ್ಲಿ ಇಂತಹ ಮನೋಭಾವವು ಸಾಮಾನ್ಯವೆಂದರೂ ತಪ್ಪಾಗದು. ಆದರೆ, ದೇಶ ಸುಭದ್ರವಾಗಿದ್ದರೆ ಮಾತ್ರ ವ್ಯಕ್ತಿಗಳ ಜೀವನವೂ ಸಮೃದ್ಧವಾಗಿರಬಹುದು ಎಂಬ ವಾಸ್ತವವನ್ನು ನಾವು ಅರ್ಥಮಾಡಿಕೊಳ್ಳಬೇಕು.

ಇತ್ತೀಚೆಗೆ, ನಾನು ಚೆನ್ನಾಗಿದ್ದರೆ, ದೇಶವೂ ಚೆನ್ನಾಗಿರುತ್ತದೆ ಎಂಬ ಸ್ವಾರ್ಥೀ ಮನೋಭಾವನೆ ಹೆಚ್ಚಾಗಿದೆ, ಇದು ವಿಷಾದನೀಯ. ಇತಿಹಾಸವನ್ನು ನೋಡಿದಾಗ ಪಾಕಿಸ್ತಾನ, ಸಿರಿಯಾ ಮುಂತಾದ ದೇಶಗಳ ಸ್ಥಿತಿಗತಿ ನಮಗೆ ಸ್ಪಷ್ಟವಾಗುತ್ತದೆ. ವೈಯಕ್ತಿಕವಾಗಿ ಎಷ್ಟೇ ಯಶಸ್ಸು ಸಾಧಿಸಿದರೂ, ದೇಶ ಸುಭದ್ರವಿಲ್ಲದಿದ್ದರೆ, ನಮ್ಮ ಭವಿಷ್ಯವೂ ಅನಿಶ್ಚಿತ. ಹಾಗಾದರೆ, ನಾವು ದೇಶದ ಒಳಿತನ್ನೇ ಆಲೋಚಿಸುತ್ತಾ, ಅದಕ್ಕಾಗಿ ಮಾತ್ರ ದುಡಿಯಬೇಕೇ ಎಂಬ ಪ್ರಶ್ನೆ ಸಹಜ.

ಆದರೆ, ನಾನು ಸುಖಿಯಾಗಬೇಕೆಂದು ಮಾತ್ರವಲ್ಲ, ನಾನು ದೇಶದ ಪ್ರಗತಿಗೆ ಏನಾದರೂ ಕೊಡುಗೆ ನೀಡಬಹುದೇ ಎಂಬ ವಿಚಾರ ಪ್ರತಿ ಭಾರತೀಯನಲ್ಲಿ ಇರಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಮಟ್ಟಿನಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಂಡರೆ, ಭಾರತವನ್ನು ಅಭಿವೃದ್ಧಿ ಪಥದತ್ತ ಒಯ್ದು, ವಿಶ್ವಗುರುವಾಗಿ ಬೆಳೆಸಲು ಸಾಧ್ಯವಾಗುತ್ತದೆ. ಸ್ವಾಮಿ ವಿವೇಕಾನಂದರು ಕನಸು ಕಂಡಿದ್ದ ವಿಶ್ವಗುರು ಭಾರತ ಆಗ ನನಸಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net