

ಪ್ರಯಾಗ್ರಾಜ್: ದೇಶಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯು ದೊಡ್ಡ ಸವಾಲಾಗಿದೆ. ತುರ್ತು ಪರಿಸ್ಥಿಯ ಅವಧಿಯಿಂದಲೂ ಭಾರತೀಯರು ಜನಸಂಖ್ಯೆಯ ನಿಯಂತ್ರಣದ ಬಗ್ಗೆ ಗಮನಹರಿಸಿಲ್ಲ ಎಂದು ಇನ್ಫೋಸಿಸ್ ಸಹಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಹೇಳಿದರು.
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿರುವ ಮೋತಿಲಾಲ್ ನೆಹರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತವು ಜನಸಂಖ್ಯೆ, ತಲಾ ಭೂಮಿ ಲಭ್ಯತೆ ಮತ್ತು ಆರೋಗ್ಯ ಸೌಲಭ್ಯಗಳಿಗೆ ಸಂಬಂಧಿಸಿದ ಮಹತ್ವದ ಸವಾಲುಗಳನ್ನು ಎದುರಿಸುತ್ತಿದೆ. ತುರ್ತು ಪರಿಸ್ಥಿತಿಯ ನಂತರ ನಾವು ಭಾರತೀಯರು ಜನಸಂಖ್ಯೆಯ ನಿಯಂತ್ರಣಕ್ಕೆ ವಿಶೇಷ ಗಮನ ನೀಡಿಲ್ಲ. ಜನಸಂಖ್ಯೆಯಿಂದಾಗಿ ತಲಾ ಭೂಮಿ ಲಭ್ಯತೆ ಮತ್ತು ಆರೋಗ್ಯ ಸೇವೆಗಳು ದೊಡ್ಡ ಸವಾಲಾಗಿ ಪರಿಣಮಿಸಿವೆ. ಇದು ಮುಂದೆ ದೇಶಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ತಿಳಿಸಿದರು.
ಅಮೆರಿಕ, ಬ್ರೆಜಿಲ್ ಮತ್ತು ಚೀನಾದಂತಹ ದೇಶಗಳಿಗೆ ಹೋಲಿಸಿದರೆ, ಭಾರತದ ಜನರು ಕಡಿಮೆ ಭೂಮಿಯನ್ನು ಹೊಂದಿದ್ದಾರೆ. ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವುದು ವೃತ್ತಿಪರರ ಜವಾಬ್ದಾರಿಯಾಗಿದೆ. ದೊಡ್ಡ ಕನಸುಗಳನ್ನು ಹೊಂದಿರುವವರು ಅವರ ಕನಸುಗಳನ್ನು ನನಸಾಗಿಸಲು ಶ್ರಮಿಸಿದಾಗ ಮಾತ್ರ ಅವರು ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಒಂದು ತಲೆಮಾರು ಮುಂದಿನವರ ಬದುಕನ್ನು ಹಸನಾಗಿಸಲು ಹಲವು ತ್ಯಾಗಗಳನ್ನು ಮಾಡಬೇಕು. ನನ್ನ ಪ್ರಗತಿಗಾಗಿ ನನ್ನ ತಂದೆ-ತಾಯಿ, ಒಡಹುಟ್ಟಿದವರು ಮತ್ತು ಶಿಕ್ಷಕರು ಗಣನೀಯ ತ್ಯಾಗ ಮಾಡಿದ್ದಾರೆ. ಮುಖ್ಯ ಅತಿಥಿಯಾಗಿ ನಾನು ಇಲ್ಲಿ ಹಾಜರಿರುವುದು ಅವರ ತ್ಯಾಗ ವ್ಯರ್ಥವಾಗಲಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಭಾರತದ ಜನಸಂಖ್ಯೆ 1.44 ಕೋಟಿಗೂ ಹೆಚ್ಚು. ಆದರೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣದಿಂದಾಗಿ ಅನೇಕ ತಜ್ಞರು ಇದನ್ನು ಆರ್ಥಿಕತೆಗೆ ಒಳ್ಳೆಯದು ಎಂದು ಕರೆಯುತ್ತಾರೆ. ಅದೇ ಸಮಯದಲ್ಲಿ ವಯಸ್ಸಾದ ಜನಸಂಖ್ಯೆಯು ಕಾಲಾನಂತರದಲ್ಲಿ ಹೆಚ್ಚಾಗುವ ಸಾಧ್ಯತೆಯು ಆರ್ಥಿಕತೆಗೆ ಸವಾಲನ್ನು ಸೂಚಿಸುತ್ತದೆ. ಭಾರತವು ಚೀನಾಕ್ಕಿಂತ ದೊಡ್ಡ ಉತ್ಪಾದನಾ ಕೇಂದ್ರವಾಗಲು ಬಹಳ ಸಮಯ ತೆಗೆದುಕೊಳ್ಳಬಹುದು ಎಂದು ನಾರಾಯಣ ಮೂರ್ತಿ ಹೇಳುತ್ತಾರೆ. ಚೀನಾದ ಆರ್ಥಿಕತೆ ಭಾರತಕ್ಕಿಂತ 6 ಪಟ್ಟು ದೊಡ್ಡದಾಗಿದೆ.
ಸಮಾರಂಭದಲ್ಲಿ 1,670 ಪದವಿಗಳನ್ನು ನೀಡಲಾಯಿತು. ಸ್ನಾತಕೋತ್ತರ ವಿದ್ಯಾರ್ಥಿಗಳು 34 ಚಿನ್ನದ ಪದಕಗಳನ್ನು, ಪದವಿಪೂರ್ವ ವಿದ್ಯಾರ್ಥಿಗಳು 13 ಪಡೆದಕೊಂಡರು.(ಏಜೆನ್ಸೀಸ್)