

ದುಬೈ: ಆತ ಪಾಗಲ್ ಪ್ರೇಮಿ. ಪೊಲೀಸರಿಗೆ ಶರಣಾಗುವ ಮುನ್ನ ಗರ್ಲ್ ಫ್ರೆಂಡ್ನ ಡೆಡ್ಬಾಡಿಯನ್ನು ಕಾರಿನ ಫ್ರಂಟ್ ಸೀಟಿನಲ್ಲಿ ಕೂರಿಸಿಕೊಂಡು 45 ನಿಮಿಷ ಕೂಲ್ ಆಗಿ ಡ್ರೈವ್ ಮಾಡಿದ್ದ! ತಿಂಡಿ ತಿನ್ನೋದಕ್ಕೂ ಗಾಡಿ ನಿಲ್ಲಿಸಿದ್ದ!
ಅಂದ ಹಾಗೆ ಈ ಪಾಗಲ್ ಪ್ರೇಮಿ ಭಾರತೀಯ. ಭಾನುವಾರ ಇದಕ್ಕೆ ಸಂಬಂಧಿಸಿದಂತೆ ದುಬೈನ ಕೋರ್ಟ್ ವಿಚಾರಣೆ ಇತ್ತು. ಈ ಘಟನೆ ನಡೆದುದು ಕಳೆದ ಜುಲೈನಲ್ಲಿ. ಈತನಿಗೆ ಮರಣದಂಡನೆ ವಿಧಿಸುವಂತೆ ಕೋರ್ಟ್ಗೆ ಮನವಿ ಮಾಡಲಾಗಿದೆ. ತೀರ್ಪು ಇನ್ನೂ ಪ್ರಕಟವಾಗಿಲ್ಲ.
ಗಲ್ಫ್ ನ್ಯೂಸ್ ವರದಿ ಪ್ರಕಾರ, ಇಪ್ಪತ್ತೇಳು ವರ್ಷದ ಯುವಕನಿಗೆ ಆ ಯುವತಿ ಜತೆಗೆ ಐದು ವರ್ಷಗಳಿಂದ ಒಡನಾಟ ಇತ್ತು. ಆಕೆ ತನ್ನನ್ನು ವಂಚಿಸಿ ಬೇರೆಯವರ ಜತೆಗೆ ಸಂಬಂಧ ಇಟ್ಟುಕೊಳ್ಳುತ್ತಿದ್ದಾಳೆ ಎಂಬ ಅನುಮಾನದ ಕಾರಣ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದ. ಇದಾದ ಬಳಿಕ ಡೆಡ್ಬಾಡಿಯೊಂದಿಗೆ ಮುಕ್ಕಾಲು ಗಂಟೆ ಡ್ರೈವ್ ಮಾಡಿದ್ದ. ನಂತರ ದೈರಾದಲ್ಲಿರುವ ಅಲ್ ಮುರಾಖ್ಕಾಬ್ಬತ್ ಪೊಲೀಸ್ ಠಾಣೆಗೆ ತೆರಳಿ ಪಾರ್ಕಿಂಗ್ನಲ್ಲಿ ಕಾರು ನಿಲ್ಲಿಸಿ ಘಟನೆ ವಿವರಿಸಿ ಪೊಲೀಸರಿಗೆ ಶರಣಾಗಿದ್ದ.
ಅಂದಿನ ಘಟನೆಯನ್ನು ಠಾಣೆಯಲ್ಲಿದ್ದ ಪೊಲೀಸ್ ಅಧಿಕಾರಿ ವಿವರಿಸಿದ್ದು ಹೀಗೆ- ಪೊಲೀಸ್ ಠಾಣೆಯೊಳಗೆ ಆತ ಬಂದಾಗ ಆತ ಕೈಗಳು ರಕ್ತಸಿಕ್ತವಾಗಿದ್ದವು. ಬಟ್ಟೆ ಮೇಲೂ ರಕ್ತದ ಕಲೆಗಳಿದ್ದವು. ನಾನು ಬೆರಗಾಗಿದ್ದೆ. ಆತ ಠಾಣೆಯೊಳಗೆ ಬಂದು ನಿಂತು, ನಾನು ಗರ್ಲ್ ಫ್ರೆಂಡ್ಅನ್ನು ಗಂಟಲು ಸೀಳಿ ಹತ್ಯೆ ಮಾಡಿದ್ದೇನೆ. ಡೆಡ್ ಬಾಡಿ ಕಾರಿನ ಸೀಟಿನಲ್ಲಿದೆ ಎಂದಿದ್ದ. ಕಾರಿನ ಸಮೀಪ ಹೋಗಿ ನೋಡಿದಾಗ ಆತ ಹೇಳಿದ್ದು ಸತ್ಯವೆಂದು ವೇದ್ಯವಾಯಿತು. ಗಂಟಲು ಸೀಳಲು ಬಳಸಿದ್ದ ಚೂರಿಯೂ ಕಾರಿನ ಹಿಂದಿನ ಸೀಟಿನಲ್ಲಿತ್ತು.
ಆಕೆ ಇನ್ನೂ ಐವರು ಪುರುಷರೊಂದಿಗೆ ಸ್ನೇಹ ಹೊಂದಿರುವುದು ಖಚಿತವಾಗಿತ್ತು. ಇದಕ್ಕೆ ಪರಿಹಾರ ಕಾಣದೇ ಹೋದರೆ ಆಕೆಯ ಪ್ರಾಣ ತೆಗೆಯುವುದಾಗಿಯೂ ಆಕೆಯ ಕುಟುಂಬದ ಸದಸ್ಯರಿಗೆ ಇ-ಮೇಲ್ ಮಾಡಿದ್ದೆ. ಆದರೆ ಅವರು ಅದನ್ನು ನಿರ್ಲಕ್ಷಿಸಿದರು. ಪರಿಹಾರ ಸಿಗಲಿಲ್ಲ. ಆಕೆಯ ಪ್ರಾಣ ತೆಗೆದೆ ಎಂದು ಆತ ಹೇಳಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)