ಕೆನಡಾಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಲ್ಲಿ ಶೇ.86 ಕುಸಿತ!

canada-students
Published on

ಒಟ್ಟಾವಾ(ಕೆನಡಾ): ಖಲಿಸ್ತಾನ್ ಉಗ್ರ ನಿಜ್ಜರ್ ಹತ್ಯೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಗಂಭೀರ ಭಿನ್ನಾಭಿಪ್ರಾಯ ತಲೆದೋರಿದ ನಂತರ ದೇಶಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ರಾಜತಾಂತ್ರಿಕ ಗದ್ದಲದ ಹಿನ್ನೆಲೆಯಲ್ಲಿ ಕೆನಡಾವು ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾಗುವ ಅಧ್ಯಯನ ಪರವಾನಗಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಕಳೆದ ವರ್ಷ ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 14,910 ಪರವಾನಗಿಗಳನ್ನು ಮಾತ್ರ ನೀಡಿದೆ. ಕಳೆದ ಮೂರು ತಿಂಗಳಲ್ಲಿ ಈ ಸಂಖ್ಯೆ 1,08,940 ಆಗಿತ್ತು. ಅಂದರೆ ಶೇ.86ರಷ್ಟು ಇಳಿಕೆ ದಾಖಲಾಗಿದೆ.

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಭಾರತೀಯ ಏಜೆಂಟರೇ ಕಾರಣ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆಧಾರರಹಿತ ಆರೋಪಗಳು ಉಭಯ ದೇಶಗಳ ನಡುವೆ ಆಳವಾದ ಭಿನ್ನಾಭಿಪ್ರಾಯವನ್ನು ಹೆಚ್ಚಿಸಿದವು. ಇದರ ಪರಿಣಾಮ ಭಾರತ ಸರ್ಕಾರದ ಸಲಹೆ ಅನುಸರಿಸಿ ಕೆನಡಾವು ದೆಹಲಿಯಲ್ಲಿರುವ ತನ್ನ ರಾಯಭಾರಿಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದು, 41 ರಾಜತಾಂತ್ರಿಕರನ್ನು ಹಿಂತೆಗೆದುಕೊಂಡಿತು.

ಇತ್ತೀಚಿನ ಸಂದರ್ಶನವೊಂದರಲ್ಲಿ ಕೆನಡಾದ ವಲಸೆ ಸಚಿವ ಮಾರ್ಕ್ ಮಿಲ್ಲರ್, ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಅಧ್ಯಯನ ಪರವಾನಗಿಗಳನ್ನು ರದ್ದುಗೊಳಿಸಿದ್ದು, ಮತ್ತೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಬಹಿರಂಗಪಡಿಸಿದ್ದರು. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚು ವಿದ್ಯಾರ್ಥಿಗಳಿಗೆ ಪರ್ಮಿಟ್ ವಿತರಣೆ ಮಾಡುವ ಲಕ್ಷಣಗಳು ಕಾಣುತ್ತಿಲ್ಲ.

ಕೆನಡಾದಲ್ಲಿ ಓದುತ್ತಿರುವ ವಿದೇಶಿ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಸಿಂಹಪಾಲು. 2022 ರಲ್ಲಿ 2,25,835 ಅಧ್ಯಯನ ಪರವಾನಗಿಗಳನ್ನು ನೀಡಲಾಗಿದ್ದರೆ, ಅವುಗಳಲ್ಲಿ 41 ಪ್ರತಿಶತವು ಭಾರತೀಯ ವಿದ್ಯಾರ್ಥಿಗಳೇ ಆಗಿದ್ದರು. ಅಲ್ಲಿನ ವಿಶ್ವವಿದ್ಯಾಲಯಗಳಿಗೆ ವಿದೇಶಿ ವಿದ್ಯಾರ್ಥಿಗಳೇ ಮುಖ್ಯ ಆದಾಯ ಮೂಲ. ಮತ್ತೊಂದೆಡೆ ವಿದೇಶಿ ವಿದ್ಯಾರ್ಥಿಗಳ ವಲಸೆ ಗಮನಾರ್ಹವಾಗಿ ಹೆಚ್ಚಾಗಿದೆ, ಇದು ಕೆನಡಾದಲ್ಲಿ ನಿರುದ್ಯೋಗ ಮತ್ತು ವಸತಿ ಕೊರತೆಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎಂದು ಮಿಲ್ಲರ್ ಇತ್ತೀಚೆಗೆ ಹೇಳಿದರು. ಈ ಹಿನ್ನೆಲೆಯಲ್ಲಿ ತಮ್ಮ ದೇಶದಲ್ಲಿ ನೆಲೆಸಿರುವ ವಿದೇಶಿ ವಿದ್ಯಾರ್ಥಿಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net