

ಒಟ್ಟಾವಾ: ಲಿಬರಲ್ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದ ನಡುವೆ ಜಸ್ಟಿನ್ ಟ್ರುಡೊ ಕೆನಡಾದ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೇವಲ ನಾಲ್ಕು ದಿನಗಳ ನಂತರ ಭಾರತ ಮೂಲದ ಸಂಸತ್ ಸದಸ್ಯ ಚಂದ್ರ ಆರ್ಯ(Chandra Arya) ಅವರು ಪಕ್ಷದಿಂದ ಕೆನಡಾದ ಮುಂದಿನ ಪ್ರಧಾನಿಯಾಗಲು ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ನಾನು ಕೆನಡಾದ ಮುಂದಿನ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿದ್ದೇನೆ. ಇದರಿಂದ ನಾನು ನಮ್ಮ ದೇಶವನ್ನು ಪುನರ್ನಿರ್ಮಿಸಲು ಮತ್ತು ಭವಿಷ್ಯದ ಪೀಳಿಗೆಗೆ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು. ಕೆನಡಾಕ್ಕೆ ದೊಡ್ಡ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆದರದ ನಾಯಕತ್ವದ ಅಗತ್ಯವಿದೆ. ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಎಲ್ಲಾ ಕೆನಡಿಯನ್ನರಿಗೆ ಸಮಾನ ಅವಕಾಶಗಳನ್ನು ಒದಗಿಸಲು ಕೆನಡಾ ಇಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಪ್ರಧಾನಿಯಾಗುವ ತಮ್ಮ ಉದ್ದೇಶದ ಬಗ್ಗೆ ಮಾತನಾಡಿದ ಚಂದ್ರ ಆರ್ಯ, ಕೆನಡಾಕ್ಕೆ ಆರ್ಥಿಕತೆಯನ್ನು ಮರುನಿರ್ಮಾಣ ಮಾಡುವುದು, ದೇಶಕ್ಕೆ ಸಮೃದ್ಧಿಯನ್ನು ಮರುಸ್ಥಾಪಿಸುವುದು ಮತ್ತು ಎಲ್ಲಾ ಕೆನಡಿಯನ್ನರಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವಂತಹ ದೊಡ್ಡ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ನಾಯಕತ್ವದ ಅಗತ್ಯವಿದೆ ಎಂದು ಹೇಳಿದರು. ಅವರು ಕೆನಡಾವನ್ನು ಸಾರ್ವಭೌಮ ಗಣರಾಜ್ಯವನ್ನಾಗಿ ಮಾಡುವ ಭರವಸೆ ನೀಡಿದರು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಮಾತನಾಡಿದರು.
ಕೆನಡಾದಲ್ಲಿ ಅನೇಕ ಜನರು, ವಿಶೇಷವಾಗಿ ಯುವ ಪೀಳಿಗೆ, ಗಂಭೀರ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಧ್ಯಮ ವರ್ಗದ ಜನರು ಕಷ್ಟಪಡುತ್ತಿದ್ದಾರೆ ಮತ್ತು ಅನೇಕ ಕಾರ್ಮಿಕ ಕುಟುಂಬಗಳು ಬಡತನಕ್ಕೆ ಬೀಳುತ್ತಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಮುಂದಿನ ಕೆಲವು ದಶಕಗಳವರೆಗೆ ದೇಶದ ಸಮೃದ್ಧಿಯನ್ನು ಖಾತ್ರಿಪಡಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಆರ್ಯ ಹೇಳಿದರು.
ಚಂದ್ರ ಆರ್ಯ ಅವರು ಕರ್ನಾಟಕದ ತುಮಕೂರು ಜಿಲ್ಲೆಯ ದ್ವಾರಲು ಗ್ರಾಮದಲ್ಲಿ ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದರು. 2006ರಲ್ಲಿ ಕೆನಡಾಕ್ಕೆ ತೆರಳಿದ ನಂತರ ಅವರು ಮೊದಲು ಇಂಡೋ-ಕೆನಡಾ ಒಟ್ಟಾವಾ ಬಿಸಿನೆಸ್ ಚೇಂಬರ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬಳಿಕ 2015ರಲ್ಲಿ ಕೆನಡಾದ ಫೆಡರಲ್ ಚುನಾವಣೆಯಲ್ಲಿ ನೇಪಿಯನ್ ರೈಡಿಂಗ್‌ಗೆ ಸಂಸದರಾದರು. ಅವರು 2019 ಮತ್ತು 2021 ರಲ್ಲಿ ಮರು ಆಯ್ಕೆಯಾದರು.
ಚಂದ್ರ ಆರ್ಯ ಅವರು ಕೆನಡಾ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ವಿಶೇಷವಾಗಿ ಭಾರತೀಯ ಸಮುದಾಯ ಮತ್ತು ಕೆನಡಾದ ಸಮಾಜದ ಪ್ರಮುಖ ವಿಷಯಗಳ ಬಗ್ಗೆ ಅವರು 2022ರಲ್ಲಿ ಕೆನಡಾದ ಹೌಸ್ ಆಫ್ ಕಾಮನ್ಸ್‌ನಲ್ಲಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಭಾಷಣ ಮಾಡಿದರು ಮತ್ತು ಟೊರೊಂಟೊದಲ್ಲಿನ ಹಿಂದೂ ದೇವಾಲಯಗಳ ಧ್ವಂಸ ಪ್ರಕರಣಗಳಲ್ಲಿ ಧ್ವನಿ ಎತ್ತಿದರು. ಈ ದಾಳಿಗೆ ಖಲಿಸ್ತಾನಿ ಉಗ್ರರೆ ಕಾರಣ ಎಂದು ಹೊಣೆಯನ್ನು ಹೊರಿಸಿದರು.(ಎಜೆನ್ಸೀಸ್)