ಸುಳ್ಳು ಹೇಳಿದ ಪಾಕ್ ಅಧಿಕಾರಿ; ತರಾಟೆಗೆ ತೆಗೆದುಕೊಂಡ ಭಾರತದ ವಕ್ತಾರ..!

Untitled-1
Published on

ನವದೆಹಲಿ: ಸುಳ್ಳು ಹೇಳುವ ಮೂಲಕ ತಪ್ಪು ಸಂದೇಶ ರವಾನಿಸಲು ಯತ್ನಿಸಿದ ಪಾಕಿಸ್ತಾನದ ಅಧಿಕಾರಿ ವಿರುದ್ಧ ಕಿಡಿಕಾರಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ, ಪಾಕ್​ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಅವರ ನ್ಯಾಷನಲ್​ ಸೆಕ್ಯುರಿಟಿ ಆ್ಯಂಡ್​ ಸ್ಟ್ರಾಟೆಜಿಕ್​ ಪಾಲಿಸಿ ಪ್ಲ್ಯಾನಿಂಗ್​ನ ವಿಶೇಷ ಸಹಾಯಕ ಮೊಯಿದ್ ಯೂಸುಫ್​ ಭಾರತದ ಪತ್ರಕರ್ತರಿಗೆ ನೀಡಿದ್ದ ಹೇಳಿಕೆಯೇ ಇಷ್ಟಕ್ಕೆಲ್ಲ ಕಾರಣ. ಪಾಕಿಸ್ತಾನದ ಜತೆ ಮಾತನಾಡಲು ಇಚ್ಛಿಸಿ ಭಾರತ ಸಂದೇಶ ಕಳಿಸಿದ್ದಾಗಿ ಯೂಸುಫ್​ ಹೇಳಿಕೆ ನೀಡಿದ್ದರು.

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಇದನ್ನು ಅಲ್ಲಗಳೆದಿದ್ದು, ಕಪೋಲಕಲ್ಪಿತ ಹೇಳಿಕೆಗಳನ್ನು ನೀಡುವುದನ್ನು ಪಾಕಿಸ್ತಾನ ಬಿಡಬೇಕು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನಕ್ಕೆ ಭಾರತ ಯಾವ ಸಂದೇಶವನ್ನೂ ರವಾನಿಸಿಲ್ಲ. ಯೂಸುಫ್​ ಭಾರತದ ಆಂತರಿಕ ವಿಷಯದ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಪಾಕಿಸ್ತಾನದ ಸರ್ಕಾರ ಅಲ್ಲಿನ ತನ್ನ ಆಡಳಿತ ವೈಫಲ್ಯ ಮರೆಮಾಚುವ ಸಲುವಾಗಿ ಭಾರತದ ಬಗ್ಗೆ ಹೇಳಿಕೆ ನೀಡಿ ದೊಡ್ಡ ಸುದ್ದಿ ಆಗುವ ಹಾಗೆ ಮಾಡುತ್ತಿದೆ ಎಂದಿರುವ ಅನುರಾಗ್​, ಭಾರತದ ಆಂತರಿಕ ವಿಚಾರದಲ್ಲಿ ತಲೆಹಾಕದಂತೆ ಪಾಕಿಸ್ತಾನದ ಅಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net