

ನವದೆಹಲಿ: ಭಾರತೀಯ ನೌಕಾಪಡೆಯ ಡಾರ್ನಿಯರ್ ವಿಮಾನಗಳನ್ನು ಚಲಾಯಿಸುವುದಕ್ಕೆ ಮೂವರು ಮಹಿಳಾ ಪೈಲಟ್ಗಳ ಒಂದು ತಂಡ ಇದೀಗ ಸಿದ್ಧವಾಗಿದೆ. ಡಾರ್ನಿಯರ್ ಆಪರೇಷನಲ್ ಫ್ಲೈಯಿಂಗ್ ಟ್ರೈನಿಂಗ್ ನ 9 ತಿಂಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿರುವ ಮೂವರು ಮಹಿಳಾ ಪೈಲಟ್ಗಳು ಗುರುವಾರ ಕೊಚ್ಚಿಯ ವಾಯುನೆಲೆಯಲ್ಲಿ ಅರ್ಹತಾ ಪತ್ರವನ್ನು ಸ್ವೀಕರಿಸಿದ್ದಾರೆ.
ದೆಹಲಿಯ ಮಾಲ್ಟಿಯಾ ನಗರದ ಲೆಫ್ಟಿನೆಂಟ್ ದಿವ್ಯಾ ಶರ್ವ, ಉತ್ತರ ಪ್ರದೇಶದ ಟಿಲ್ಹಾರದ ಲೆಫ್ಟಿನೆಂಟ್ ಶುಭಾಂಗಿ ಸ್ವರೂಪ್ ಮತ್ತು ಬಿಹಾರದ ಮುಜಾಫರ್ಪುರದ ಲೆಫ್ಟಿನೆಂಟ್ ಶಿವಾಂಗಿ ಅರ್ಹತಾ ಪತ್ರ ಸ್ವೀಕರಿಸಿದ ಮಹಿಳಾ ಪೈಲಟ್ಗಳು. ಇವರ ಜತೆ ಅರ್ಹತೆ ಪಡೆದ ಆರು ಪೈಲೆಟ್ಗಳಿಗೂ ಪತ್ರ ವಿತರಿಸಲಾಗಿದೆ.
ಸದರ್ನ್ ನೇವಲ್ ಕಮಾಂಡ್ (ಎಸ್ಎನ್ಸಿ) ಮುಖ್ಯ ಸಿಬ್ಬಂದಿ ಅಧಿಕಾರಿ ಅಡ್ಮಿರಲ್ ಆಂಟನಿ ಜಾರ್ಜ್ ಪೈಲೆಟ್ಗಳಿಗೆ ಅರ್ಹತಾಪತ್ರ ಪ್ರಧಾನ ಮಾಡಿದರು. ಈ ಎಲ್ಲ ಪೈಲಟ್ಗಳು ಭಾರತೀಯ ವಾಯುಪಡೆ ಮತ್ತು ನೌಕಾಪಡೆಯಲ್ಲಿ ತರಬೇತಿ ಪೂರ್ಣಗೊಳಿಸಿದ್ದಾರೆ. ಎಂಟು ತಿಂಗಳ ಕಾಲ ಡಾರ್ನಿಯರ್ ಸ್ಕ್ವಾಡ್ರನ್ನೊಂದಿಗೆ ತರಬೇತಿ ನೀಡಲಾಗಿತ್ತು. ಒಂದು ತಿಂಗಳು ಎಸ್ಎನ್ಸಿಯ ವಿವಿಧ ವೃತ್ತಿಪರ ಶಾಲೆಗಳಲ್ಲಿ ತರಬೇತಿ ನೀಡಲಾಗಿತ್ತು. ಮಹಿಳಾ ಪೈಲೆಟ್ ಆಗಿ ಮೊದಲು ಆಯ್ಕೆಯಾದ ಲೆಫ್ಟಿನೆಂಟ್ ಶಿವಾಂಗಿ ನೂತನ ರಫೇಲ್ ವಿಮಾನದ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. (ಏಜೆನ್ಸೀಸ್)