ಜಾಗತಿಕ ಭೂಪಟದಲ್ಲಿ ಕಂಗೊಳಿಸಿದ ಭಾರತೀಯ ವಿವಾಹ: ಶ್ರೇಷ್ಠ ಸಂಸ್ಕೃತಿ, ಸಂಪ್ರದಾಯ ಮತ್ತು ಅಧ್ಯಾತ್ಮದ ಬೆಳಕಿನಲ್ಲಿ ನಡೆದ ಅನಂತ್ ಅಂಬಾನಿ-ರಾಧಿಕಾ ಮದುವೆ

1-6871f2b4284ae
Published on

ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ನಿರ್ದೇಶಕ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರ ಭವ್ಯ ವಿವಾಹವು ದೇಶ ಮತ್ತು ಜಗತ್ತಿನ ಗಮನ ಸೆಳೆದು ಒಂದು ವರ್ಷವಾಗಿದೆ (ಜುಲೈ 12). 2024ರಲ್ಲಿ ಸಂಪನ್ನಗೊಂಡ ಈ ಮದುವೆಯು ಭಾರತವು ಅನುಸರಿಸುತ್ತಿರುವ ಸಾಂಸ್ಕೃತಿಕ ವಿದ್ಯಮಾನಕ್ಕೆ ದೊಡ್ಡ ಸಾಕ್ಷಿಯಾಯಿತು. ಮಾತ್ರವಲ್ಲ, ಭಾರತದ ಸಂಸ್ಕೃತಿ, ಅಧ್ಯಾತ್ಮದ ಆಶಯಗಳಿಗೆ ಮತ್ತು ವಿಶಿಷ್ಟ ಸಂಪ್ರದಾಯಗಳಿಂದ ನೆರವೇರಿದ ಮದುವೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಮೂಲಕ, ಲಕ್ಷಾಂತರ ಜನರು ಸಾಕ್ಷಿಯಾದರು. ಸಾಮಾಜಿಕ ಮಾಧ್ಯಮಗಳಲ್ಲೂ ಈ ವಿವಾಹ ಕಂಡು ಜನರು ವಿಸ್ಮಿತರಾದರು. ಭಾರತದಲ್ಲಿ ಮದುವೆ ಎಂದರೆ ಬರೀ ಸಮಾರಂಭವಲ್ಲ. ಅದೊಂದು ಭಾವನಾತ್ಮಕ ಕಾರ್ಯಕ್ರಮ. ಜೀವನದ ಹೊಸ ಅಧ್ಯಾಯ ಎಂದೇ ಪರಿಗಣಿಸಲಾಗುತ್ತದೆ.

ಹಿಂದೂ ವಿವಾಹ ಪದ್ಧತಿಯ ಶಕ್ತಿ: ಹಿಂದೂಗಳಲ್ಲಿ ವಿವಾಹ ಎಂಬುದು ಒಂದು ಸಾಮಾಜಿಕ ಒಪ್ಪಂದ ಮಾತ್ರವಲ್ಲ. ಇದು ಪವಿತ್ರ ಜೋಡಿಯ ಜೀವಮಾನದ ಬದ್ಧತೆಯನ್ನು ಸೂಚಿಸುತ್ತದೆ. ಮದುವೆ ಎಂದರೆ ಗೃಹಸ್ಥಾಶ್ರಮ ಪ್ರವೇಶಿಸಿ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕರ್ತವ್ಯಗಳನ್ನು ಪೂರೈಸುವುದು. ಮೂಲತಃ ಆಧ್ಯಾತ್ಮಿಕ ಮನೋಭಾವದವರಾಗಿರುವ ಅನಂತ್ ಅಂಬಾನಿ ತಮ್ಮ ವಿವಾಹ ಸಮಾರಂಭದಲ್ಲೂ ಈ ಮೌಲ್ಯಗಳನ್ನು ಎತ್ತಿಹಿಡಿದರು. ಮಾತ್ರವಲ್ಲ, ಈ ಮೂಲಕ ಹಿಂದೂ ವಿವಾಹ ಪದ್ಧತಿಯ ಶಕ್ತಿಯನ್ನು, ವೈಶಿಷ್ಟ್ಯವನ್ನು ದರ್ಶಿಸಿದರು. ಆಧುನಿಕ ಮದುವೆಗಳಲ್ಲಿ ಸಂಪ್ರದಾಯಗಳ ಪಾಲನೆ ಅಷ್ಟೊಂದು ನಡೆಯುತ್ತಿಲ್ಲ. ಆದರೆ, ಯುವ ಅಂಬಾನಿ ದಂಪತಿ ವಿವಾಹಕ್ಕೆ ಸಂಬಂಧಿಸಿದ ಪ್ರತಿ ಭಾರತೀಯ ಪದ್ಧತಿಯನ್ನು ಮತ್ತು ಸಂಪ್ರದಾಯವನ್ನು ಶ್ರದ್ಧೆಯಿಂದ ನಿರ್ವಹಿಸಿದರು. ಭಾರತೀಯ ಆಧ್ಯಾತ್ಮಿಕ ನಾಯಕರು ಮತ್ತು ಹಿರಿಯರ ಆಶೀರ್ವಾದದೊಂದಿಗೆ ವೈವಾಹಿಕ ಬದುಕಿಗೆ ಅಡಿ ಇಟ್ಟರು. ಈ ಕ್ಷಣಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿಗ್ಗಜರು ಸಾಕ್ಷಿಯಾಗುವ ಮೂಲಕ ಹಿಂದೂ ವಿವಾಹ ಪದ್ಧತಿಯ ಮಹತ್ವ ಜಗದಗಲ ತಲುಪಿತು.

ಅಧ್ಯಾತ್ಮದ ರಾಜಧಾನಿ ಭಾರತ: ಜಾಗತಿಕ ವೇದಿಕೆಯಲ್ಲಿ ಭಾರತ ಮಹತ್ವದ ಸ್ಥಾನವನ್ನು ಪಡೆದುಕೊಂಡಿದ್ದು, ಆರ್ಥಿಕ, ತಂತ್ರಜ್ಞಾನ ಮತ್ತು ಕೈಗಾರಿಕಾ ರಂಗದಲ್ಲಿ ಗಮನ ಸೆಳೆಯುತ್ತಿದೆ. ಇಂಥ ಸಂದರ್ಭದಲ್ಲಿ ತುಂಬಾ ಸಂಘಟಿತವಾಗಿ, ವ್ಯವಸ್ಥಿತವಾಗಿ, ಆಧ್ಯಾತ್ಮಿಕ ಮಹಾ ಉತ್ಸವದ ರೂಪದಲ್ಲಿ ನಡೆದ ಅನಂತ್ ಅಂಬಾನಿ ಅವರ ಮದುವೆ ಸಮಾರಂಭವು ವಿಶ್ವದ ಆಧ್ಯಾತ್ಮಿಕ ರಾಜಧಾನಿಯಾಗಿ ಭಾರತದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿತು. ಅತಿಥಿಗಳ ಪಟ್ಟಿ ಭಾರತದ ಬಗೆಗಿನ ಅಂತಾರಾಷ್ಟ್ರೀಯ ಆಕರ್ಷಣೆಯನ್ನು ಸೂಚಿಸುತ್ತದೆ. ಅಂತಾರಾಷ್ಟ್ರೀಯ ವಲಯದ ದಿಗ್ಗಜರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ಭಾರತದ ವೃದ್ಧಿಸುತ್ತಿರುವ ಆರ್ಥಿಕ, ರಾಜಕೀಯ, ಬೌದ್ಧಿಕ, ವೈಜ್ಞಾನಿಕ ಸಾಮರ್ಥ್ಯಗಳಿಗೆ ಸಾಕ್ಷಿ. ರಿಲಯನ್ಸ್ ಇಂಡಸ್ಟ್ರೀಸ್ ಸಮೂಹ ಮತ್ತು ಅಂಬಾನಿ ಕುಟುಂಬವು ಈ ಬಗೆಯ ಭವ್ಯ ಸಮಾರಂಭವನ್ನು ಆಯೋಜಿಸುವುದರ ಮೂಲಕ ಆಳವಾದ ಸಂಬಂಧಗಳನ್ನು ಬೆಸೆದದ್ದಲ್ಲದೆ, ಭಾರತ ವಿಶ್ವಗುರುವಾಗಿ ಹೊಮ್ಮಲು ನಿರಂತರವಾಗಿ ಕಾರ್ಯ ಮಾಡುತ್ತಿದೆ.

ಮಾನವ ಸೇವೆಯೇ ಮಾಧವನ ಸೇವೆ

‘ಮಾನವ ಸೇವೆಯೇ ಮಾಧವ ಸೇವೆ’ ಎಂಬ ಮೌಲ್ಯವನ್ನು ಆಳವಾಗಿ ನಂಬಿರುವ ಮತ್ತು ಆಚರಿಸುತ್ತಿರುವ ಅಂಬಾನಿ ಕುಟುಂಬ ಮಾನವೀಯ ಸೇವೆಯ ಮೂಲಕವೇ ದೈವತ್ವವನ್ನು ಕಾಣುತ್ತಿದೆ. ಹೀಗಾಗಿಯೇ, ವಿವಾಹ ಸಮಾರಂಭವನ್ನು ಆರಂಭಿಸಿದ್ದು ಸಮಾಜಮುಖಿ ಕಾರ್ಯದ ಮೂಲಕವೇ. 50 ಬಡ ಜೋಡಿಗೆ ಸಾಮೂಹಿಕ ವಿವಾಹ ಸಮಾರಂಭ ನವಿ ಮುಂಬೈಯ ರಿಲಯನ್ಸ್ ಕಾಪೋರೇಟ್ ಪಾರ್ಕ್​ನಲ್ಲಿ ಅದ್ದೂರಿಯಾಗಿ ನಡೆಯಿತು. 800ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಂಡಿದ್ದ ಈ ಸಾಮೂಹಿಕ ಮದುವೆ ಸಮಾರಭದಲ್ಲಿ ಅಂಬಾನಿ ಕುಟುಂಬದ ಸದಸ್ಯರು ಪಾಲ್ಗೊಂಡು ನವ ವಧು-ವರರಿಗೆ ಆಕರ್ಷಕ ಉಡುಗೊರೆಗಳನ್ನು ನೀಡಿ, ಸುಖಮಯ ಬದುಕಿಗಾಗಿ ಹರಿಸಿದರು.

ಅನ್ನದಾನ

ಮದುವೆ ಸಮಾರಂಭದ ಹೊತ್ತಿನಲ್ಲಿ ಬಡವರಾರೂ ಆಹಾರವಿಲ್ಲದೆ ಕಳವಳ ಪಡಬಾರದು ಎಂಬ ಉದ್ದೇಶದಿಂದ ಮಾನವೀಯತೆಗೆ ಸೇವೆ ಸಲ್ಲಿಸುವ ತತ್ತ್ವದಡಿ ಅನ್ನದಾನವನ್ನೂ ಕೈಗೊಳ್ಳಲಾಯಿತು. ಸಮುದಾಯ ಅಡುಗೆ ಮನೆಯ ಮೂಲಕ (ಕಮ್ಯುನಿಟಿ ಕಿಚನ್) ಮೂರು ವಾರಗಳವರೆಗೆ ಪ್ರತಿನಿತ್ಯ ಸರಾಸರಿ ಸಾವಿರಕ್ಕೂ ಅಧಿಕ ಊಟಗಳನ್ನು ಭಂಡಾರ ಆಯೋಜನೆ ಮೂಲಕ ಪೂರೈಸಲಾಯಿತು.

ವಿಶಿಷ್ಟ ಆಚರಣೆಗಳು

ಉಡುಗೊರೆಗಳ ವಿನಿಮಯ, ಸಂಗೀತ, ನೃತ್ಯ, ವಿಶೇಷ ಪೂಜೆ, ನವಗ್ರಹ ಶಾಂತಿ, ಹಲ್ದಿ ಸಮಾರಂಭ, ಭಜನೆ ಮತ್ತು ಶಿವಶಕ್ತಿ ಪೂಜೆ ಹೀಗೆ ವಿವಾಹ ಸಮಾರಂಭವು ವಿಶಿಷ್ಟ ಆಚರಣೆಗಳಿಂದ ಮಿಳಿತವಾಗಿತ್ತು. ಅದರಲ್ಲೂ, ಅನಂತ್ ಅವರ ತಾಯಿ ಶ್ರೀಮತಿ ನೀತಾ ಅಂಬಾನಿ ಜಾಮನಗರದ ದೇವಸ್ಥಾನವೊಂದರಲ್ಲಿ ಭಾರತೀಯ ಆಧ್ಯಾತ್ಮಿಕ ನೃತ್ಯವನ್ನು ಪ್ರದರ್ಶಿಸಿದ್ದು, ತಾಯಿಯ ಪ್ರೀತಿ, ಮಮತೆ ಮತ್ತು ಭಾರತದ ಅಧ್ಯಾತ್ಮ ಮೌಲ್ಯದ ಪ್ರತೀಕವಾಗಿತ್ತು. ಸಂಗೀತ ಕಾರ್ಯಕ್ರಮ ಕೂಡ ವಿಶಿಷ್ಟ, ಅನನ್ಯವಾಗಿತ್ತು. ಮದುವೆ ಎಂದರೆ ಬರೀ ಸಮಾರಂಭ ಎಂದು ಭಾವಿಸುವ ಈಗಿನ ದಿನಗಳಲ್ಲಿ ಅನಂತ್ ಮತ್ತು ರಾಧಿಕಾ ಅವರ ಪವಿತ್ರ ವಿವಾಹ ಮಹೋತ್ಸವ ಹಲವು ಉನ್ನತ ಮೌಲ್ಯಗಳಿಗೆ ಸಾಕ್ಷಿಯಾಯಿತು ಮತ್ತು ವಿದೇಶಿಯರು ಕೂಡ ಭಾರತದ ವಿವಾಹ ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳಲು ಪೂರಕವಾಯಿತು.

ವಾರಾಣಸಿಯ ಸೊಬಗು

ಮುಂಬೈಯಲ್ಲಿನ ಬಾಂದ್ರಾ ಕುರ್ಲಾ ಪ್ರದೇಶದಲ್ಲಿ ಮುಕೇಶ್ ಅಂಬಾನಿ ಅವರ 27 ಅಂತಸ್ತುಗಳ ಭವ್ಯ ಮಹಲು ಆಂಟಿಲಿಯಾ ಇದೆ. ಈ ಬಂಗಲೆ ಜಗತ್ತಿನ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ಆಂಟಿಲಿಯಾಗೆ ಹೊಂದಿಕೊಂಡೇ ಇರುವ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್​ನಲ್ಲಿ್ಲ ಮದುವೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳು ನಡೆದವು. ವಿಶೇಷವೆಂದರೆ ಮದುವೆ ಮಂಟಪದ ಅಲಂಕಾರ ಥೀಮ್ ದೇಶದ ಪ್ರಾಚೀನ ಹಾಗೂ ಆಧ್ಯಾತ್ಮಿಕ ನಗರಿ ವಾರಾಣಸಿಗೆ ಸಂಬಂಧಿಸಿದ್ದಾಗಿತ್ತು. ಈ ನಗರಿಯ ಭವ್ಯತೆ, ಪ್ರಾಚೀನತೆ ಹಾಗೂ ಶ್ರೇಷ್ಠತೆಯನ್ನು ಅಲಂಕಾರದಲ್ಲಿ ಬಿಂಬಿಸಲಾಗಿತ್ತು. ಈ ಮೂಲಕ ಅತಿಥಿಗಳು ವಾರಾಣಸಿಯ ಸೊಗಡನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು.

ಸದಾ ನೆನಪಿನಲ್ಲಿ ಉಳಿಯುವಂಥದ್ದು

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಕೇವಲ ಇಬ್ಬರು ಒಂದಾಗುವ ಆಚರಣೆಯಾಗಿರಲಿಲ್ಲ. ಭಾರತೀಯ ಸಂಸ್ಕೃತಿ, ಮೌಲ್ಯ, ಆಧ್ಯಾತ್ಮಿಕ ನಂಟುಗಳ ಸಂಗಮವಾಗಿತ್ತು. ಹಾಗಾಗಿಯೇ, ಅಂತಾರಾಷ್ಟ್ರೀಯ ಮಟ್ಟದ ಅತಿಥಿಗಳು ಕೂಡ ಬೆರಗಿನಿಂದ ಈ ಸಮಾರಂಭವನ್ನು ಕಣ್ತುಂಬಿಕೊಂಡರು. ಭಾರತದ ಸಾಂಸ್ಕೃತಿಕ ಭವ್ಯ ಸಮಾರಂಭಗಳಲ್ಲಿ ಈ ಮಹಾ ವಿವಾಹ ಉತ್ಸವ ಸದಾ ನೆನಪಿನಲ್ಲಿ ಉಳಿಯುವಂಥದ್ದು. ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ, ವಿವಾಹ ಶಾಸ್ತ್ರಗಳು ಕ್ರಮವಾಗಿ ನಡೆದು, ಬಳಿಕ ಆಶೀರ್ವಾದ ಸಮಾರಂಭ ಮತ್ತು ವಿವಾಹ ಆರತಕ್ಷತೆಗೆ ಹಲವು ಕ್ಷೇತ್ರಗಳ ದಿಗ್ಗಜರು. 12 ಚ ಕ್ಷೇತ್ರಗಳಿಂದ ಆಗಮಿಸಿದ್ದ ತಲಾ ಒಬ್ಬೊಬ್ಬ ವೇದವಿದ್ವಾಂಸರು ಮದುವೆ ಶಾಸ್ತ್ರಗಳನ್ನು ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.

ಮದುವೆಯಲ್ಲಿ ವಿದೇಶಿ ಗಣ್ಯರು

ಜಾನ್ ಕೆರ್ರಿ, ಅಮೆರಿಕದ ರಾಜಕಾರಣಿ

ಸಮಿಯಾ ಸುಲುಹು ಹಸನ್, ತಂಜಾನಿಯಾ ಅಧ್ಯಕ್ಷರು

ಮೊಹಮದ್ ನಶೀದ್, ಮಾಲ್ದೀವ್ಸ್ ಮಾಜಿ ರಾಷ್ಟ್ರಪತಿ

ಶಾಂತನು ನಾರಾಯಣ್, ಎಡೋಬ್ ಸಿಇಒ

ಟೋನಿ ಬ್ಲೇರ್, ಬ್ರಿಟನ್ ಮಾಜಿ ಪ್ರಧಾನಿ

ಬೊರಿಸ್ ಜಾನ್ಸನ್, ಬ್ರಿಟನ್ ಮಾಜಿ ಪ್ರಧಾನಿ

ಸೆಬೆಸ್ಟ್ರಿಯನ್ ಕುರ್ಜ್, ಆಸ್ಟ್ರಿಯಾದ ಮಾಜಿ ಪ್ರಧಾನಿ

ಸ್ಟಿಫನ್ ಹಾರ್ಪರ್, ಕೆನೆಡಾ ಮಾಜಿ ಪ್ರಧಾನಿ

ಆಶೀರ್ವದಿಸಿದ ಗುರುಗಳು

ಸ್ವಾಮಿ ಸದಾನಂದ ಸರಸ್ವತಿ, ದ್ವಾರಕಾದ ಶಂಕಾರಾಚಾರ್ಯರು

ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ಜೋಷಿಮಠದ ಶಂಕರಾಚಾರ್ಯರು

ಗೌರಂಗ್ ದಾಸ್ ಪ್ರಭು, ಇಸ್ಕಾನಿನ ಡಿವಿಜನಲ್ ಡೈರೆಕ್ಟರ್

ಗೌರ್ ಗೋಪಾಲ್ ದಾಸ್, ಇಸ್ಕಾನಿನ ಸಂತರು

ರಾಧಾನಾಥ ಸ್ವಾಮಿ, ಇಸ್ಕಾನ್ ಆಡಳಿತ ಮಂಡಳಿಯ ಸದಸ್ಯರು

ಪೂಜ್ಯಶ್ರೀ ರಮೇಶ್ ಭಾಯಿ ಒಝಾ

ಗೌತಮ್ಾಯಿ ಓಝಾ

ಪೂಜ್ಯಶ್ರೀ ದೇವಪ್ರಸಾದ್ ಮಹಾರಾಜ್

ವಿಜುಬೆನ್ ರಾಜಾನಿ, ಶ್ರೀಆನಂದಭಾವ ಸೇವಾ ಸಂಸ್ಥಾನ

ಶ್ರೀಬಾಲಕ ಯೋಗೇಶ್ವರದಾಸ್ ಜೀ ಮಹಾರಾಜ್, ಬದ್ರಿನಾಥ್ ಧಾಮ್

ಪೂಜ್ಯಶ್ರೀ ಚಿದಾನಂದ ಸರಸ್ವತಿ. ಪರಮಾರ್ಥನಿಕೇತನ ಆಶ್ರಮದ ಮುಖ್ಯಸ್ಥರು

ಶ್ರೀ ನಮ್ರಮುನಿ ಮಹಾರಾಜ್

ಯೋಗಗುರು ಬಾಬಾ ರಾಮದೇವ್

ಧೀರೇಂದ್ರ ಕುಮಾರ್ ಗರ್ಗ್, ಬಾಗೇಶ್ವರಧಾಮನ ಗುರುಗಳು

ಸ್ವಾಮಿ ರಾಮಭದ್ರಾಚಾರ್ಯ

ಸ್ವಾಮಿ ಕೈಲಾಶಾನಂದ, ನಿರಂಜನ ಅಖಾರದ ಮಹಾಮಂಡಲೇಶ್ವರ

ಅವಧೇಶಾನಂದ ಗಿರಿ, ಜುನಾ ಅಖಾರಾದ ಮಹಾಮಂಡಲೇಶ್ವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net