ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ! ಕೊಲೆಯ ಹಿಂದಿತ್ತು ಸೇಡು, ಇಲ್ಲಿದೆ ಘಟನೆಯ ಇಂಚಿಂಚೂ ಮಾಹಿತಿ | Indian Man

ವಿಜಯವಾಣಿ (65)
Published on

Indian Man: ಅಮೆರಿಕದ ಮೋಟೆಲ್​ವೊಂದರಲ್ಲಿ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದ ಕರ್ನಾಟಕ ಮೂಲದ ಚಂದ್ರ ನಾಗಮಲ್ಲಯ್ಯ (50) ಎಂಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಟೆಕ್ಸಾಸ್​ನಲ್ಲಿ ವರದಿಯಾಗಿದೆ.

ಆರೋಪಿಯನ್ನು ಯೋರ್ದಾನಿಸ್ ಕೊಬೋಸ್-ಮಾರ್ಟಿನೆಜ್ ಎಂದು ಗುರುತಿಸಲಾಗಿದ್ದು, ಈತ ವಸತಿಗೃಹದಲ್ಲಿ ವಾಷಿಂಗ್ ಮಿಷಿನ್ ವಿಚಾರಕ್ಕೆ ಕನ್ನಡಿಗ ಚಂದ್ರ ನಾಗಮಲ್ಲಯ್ಯ ಜತೆಗೆ ಜಗಳವಾಡಿದ್ದ. ಇದೇ ದ್ವೇಷದಲ್ಲಿ ಅವರ ಮೇಲೆ ಸೇಡಿನ ಕಣ್ಣಿಟ್ಟಿದ್ದ. ಚಂದ್ರ ಕೆಲಸದಲ್ಲಿರುವಾಗಲೇ ಅವರ ಪತ್ನಿ ಮತ್ತು 18 ವರ್ಷದ ಮಗನ ಮುಂದೆಯೇ ಮಚ್ಚಿನಿಂದ ತಲೆ ಕಡಿದು, ಬಿಸಾಡಿರುವುದು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಬ್ಬರ ನಡುವೆ ಜಗಳ!

ಅಮೆರಿಕದ ಟೆಕ್ಸಾಸ್‌ನಲ್ಲಿ ಬುಧವಾರ (ಸೆ.10) ಬೆಳಗ್ಗೆ ಈ ಘಟನೆ ನಡೆದಿದೆ. ಆರೋಪಿ ಅರೆಸ್ಟ್​ ಬಳಿಕ ಹೊರಬಿದ್ದ ಅಫಿಡವಿಟ್ ಪ್ರಕಾರ, ಇಬ್ಬರ ನಡುವೆ ಗಂಭೀರವಾಗಿ ಜಗಳವಾಗಿತ್ತು. ಇಬ್ಬರೂ ಡೌನ್‌ಟೌನ್‌ನ ಪೂರ್ವದಲ್ಲಿರುವ ಸ್ಯಾಮ್ಯುಯೆಲ್ ಬೌಲೆವಾರ್ಡ್‌ನಲ್ಲಿರುವ ಡೌನ್‌ಟೌನ್ ಸೂಟ್ಸ್ ಮೋಟೆಲ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.

ಜಗಳಕ್ಕೆ ಕಾರಣ ವಾಷಿಂಗ್ ಮಿಷಿನ್!

ಅದೇ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಜಗಳಕ್ಕೆ ಕಾರಣವೇನು ಎಂಬುದನ್ನು ಸಾಕ್ಷಿಯಾಗಿ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ. ತಾನು ಕೋಬೋಸ್-ಮಾರ್ಟಿನೆಜ್ ಜೊತೆಗೆ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿದ್ದೆ. ಆಗ ಚಂದ್ರ ನಾಗಮಲ್ಲಯ್ಯ ಅವರು, ಕೆಟ್ಟಿರುವ ವಾಷಿಂಗ್ ಮಿಷಿನ್ ಅನ್ನು ಬಳಸಬೇಡಿ ಎಂದು ಹೇಳಿದರು. ನಾಗಮಲ್ಲಯ್ಯ ನೇರವಾಗಿ ಆತನೊಂದಿಗೆ ಮಾತನಾಡುವ ಬದಲು ನಾನೇಳುವ ಮಾತುಗಳನ್ನು ಅವನಿಗೆ ಸರಿಯಾಗಿ ಅನುವಾದಿಸಲು ಮತ್ತೊಬ್ಬ ವ್ಯಕ್ತಿಗೆ ಹೇಳಿದರು. ಇದು ಮಾರ್ಟಿನೇಜ್​ಗೆ ಸಿಟ್ಟು ತರಿಸಿತ್ತು ಎಂದು ಹೇಳಿರುವುದಾಗಿ ವರದಿಯಾಗಿದೆ.

ತಪ್ಪಿಸಿಕೊಳ್ಳಲು ಯತ್ನ

ಡಲ್ಲಾಸ್ ಅಗ್ನಿಶಾಮಕ ದಳದ (DFR) ಟ್ರಕ್ ಘಟನಾ ಸ್ಥಳಕ್ಕೆ ಆಗಮಿಸುವ ಹೊತ್ತಿಗೆ, ಆರೋಪಿ ಕೊಬೊಸ್-ಮಾರ್ಟಿನೆಜ್ ಇನ್ನೂ ಮಚ್ಚನ್ನು ಹಿಡಿದುಕೊಂಡಿರುವುದು ಕಂಡುಬಂದಿದೆ. ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಹಿಂಬಾಲಿಸಿ ಕಡೆಗೂ ಬಂಧಿಸಲಾಯಿತು.

ಆರೋಪಿ ರೌಡಿ ಶೀಟರ್​

ಫ್ಲೋರಿಡಾದಲ್ಲಿ ವಾಹನ ಕಳ್ಳತನ, ಮಗುವಿನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಮತ್ತು ಹೂಸ್ಟನ್‌ನಲ್ಲಿ ಹಲ್ಲೆ ಆರೋಪಗಳಿಗಾಗಿ ಕೋಬೋಸ್-ಮಾರ್ಟಿನೆಜ್ ಮೇಲೆ 2-3 ಪ್ರಕರಣಗಳು ದಾಖಲಾಗಿದ್ದು, ಅರೆಸ್ಟ್​ ಆಗಿ ಹೊರಬಂದ ದಾಖಲೆಗಳು ಸಿಕ್ಕಿವೆ. ಈ ಅಪರಾಧ ಸಾಬೀತಾದರೆ, ಆತ ಜೀವಾವಧಿ ಶಿಕ್ಷೆಗೆ ಗುರಿಯಾಗುತ್ತಾನೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net