

ಕಡೂರು:ದೇಶದ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿದ್ದು, ಸಂವಿಧಾನದ ಕಾಯ್ದೆ ,ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ತಹಸೀಲ್ದಾರ್ ಎಂ.ಪಿ.ಕವಿರಾಜ್ ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಜಾಪ್ರಭುತ್ವದ ಹಿತವನ್ನು ಪ್ರತಿಯೊಬ್ಬರು ಕಾಪಾಡಬೇಕು. ಸರ್ವ ಧರ್ಮದವರು ಒಂದೇ ಎಂಬ ಭಾವನೆ ಮೂಡಬೇಕು.ಎಲ್ಲರಿಗೂ ಸಂವಿಧಾನ ಅನ್ವಯವಾಗಲಿದೆ. ಸಾಮಾಜಿಕ ಧರ್ಮ ಹಿನ್ನಲೆಗಳು ಬೇರೆ ಇದ್ದರೂ ಪ್ರತಿಯೊಬ್ಬರಿಗೂ ಮುಕ್ತ ಅವಕಾಶ ಸಿಗಬೇಕು ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನ ರಚಿಸಲಾಗಿದೆ. ವಿಶ್ವಕ್ಕೆ ದಲ್ಲಿ ಭಾರತ ಸಂವಿಧಾನ ಮಾದರಿ ಎಂದು ಬಣ್ಣಿಸಿದರು.
ಪ್ರಾಚಾರ್ಯ ಡಾ.ಎಚ್.ಎಸ್.ತವರಾಜ್ ಮಾತನಾಡಿ, ನಮ್ಮ ದೇಶದ ಸಂವಿಧಾನ ಪವಿತ್ರವಾಗಿದ್ದು, ಎಲ್ಲರಿಗೂ ಎಲ್ಲ ರೀತಿಯ ಹಕ್ಕುಗಳು ದೊರಕಲಿದೆ. ಸಂವಿಧಾನಕ್ಕೆ ಪ್ರತಿಯೊಬ್ಬರು ಗೌರವ ನೀಡಬೇಕಿದೆ. ಸಂವಿಧಾನದ ಬಗ್ಗೆ ತಿಳಿದುಕೊಳ್ಳಲು ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಇದರ ಮಹತ್ವ ಅರಿಯಬೇಕಿದೆ ಎಂದರು.
ಬ್ಲೂ ಆರ್ಮಿ ಸಂಘಟನೆ ರಾಜ್ಯಾಧ್ಯಕ್ಷ ಶೂದ್ರ ಶ್ರೀನಿವಾಸ್ ಮಾತನಾಡಿ, ಎಲ್ಲ ದೇಶಗಳ ಬಗ್ಗೆ ಅಧ್ಯಯನ ನಡೆಸುವ ಮೂಲಕ ಶ್ರೇಷ್ಠವಾದ ಸಂವಿಧಾನವನ್ನು ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ್ದಾರೆ. ಸಂವಿಧಾನದ ಬಗ್ಗೆ ಅನೇಕರಿಗೆ ತಿಳಿಯದಿರುವುದು ವಿಷಾದನೀಯ. ಇಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸ್ವ ಇಚ್ಚೆಯಿಂದ ಪಾಲ್ಗೊಳ್ಳಬೇಕು.
ಸರ್ಕಾರದ ಯಾವುದೇ ಕಾರ್ಯಕ್ರಮಗಳಲ್ಲಿ ನಾಡಗೀತೆಯಂತೆ ಸಂವಿಧಾನದ ಬಗ್ಗೆ ಓದುವ ಪದ್ದತಿ ಜಾರಿಗೆ ಬರಬೇಕು. ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ ಎಂದರು.