ಅಪಾಯದಲ್ಲಿ ಭಾರತದ ಮಕ್ಕಳು: 33 ದೇಶಗಳ 100 ಕೋಟಿ ಮಕ್ಕಳ ಜೀವಕ್ಕೆ ಹವಾಮಾನ ವೈಪರೀತ್ಯ ಕಂಟಕ

Front child
Published on

ನವದೆಹಲಿ: ಸಂಭಾವ್ಯ ಕರೊನಾ ಮೂರನೇ ಅಲೆಯ ಭೀತಿಯ ನಡುವೆಯೇ ಭಾರತೀಯ ಮಕ್ಕಳು ಹವಾಮಾನ ಬದಲಾವಣೆ ಕಾರಣದಿಂದಾಗಿ ಗಂಭೀರ ಅಪಾಯಕ್ಕೆ ಸಿಲುಕಿರುವ ಸಂಗತಿ ಬಯಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಮಕ್ಕಳ ಆರೋಗ್ಯ, ಶಿಕ್ಷಣದ ಭವಿಷ್ಯ ಸಂಕಷ್ಟಕ್ಕೆ ಸಿಲುಕಿರುವುದಾಗಿ ಯುನಿಸೆಫ್ ವರದಿ ಎಚ್ಚರಿಸಿದೆ. ಗಂಭೀರ ಹವಾಮಾನ ವೈಪರೀತ್ಯ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಜತೆಗೆ ದಕ್ಷಿಣ ಏಷ್ಯಾದ ಇತರ ಮೂರು ರಾಷ್ಟ್ರಗಳು ಸ್ಥಾನ ಪಡೆದಿವೆ. ಪಾಕಿಸ್ತಾನ 14, ಬಾಂಗ್ಲಾದೇಶ 15, ಅಫ್ಘಾನಿಸ್ತಾನ 25 ಹಾಗೂ ಭಾರತ 26ನೇ ಸ್ಥಾನದಲ್ಲಿವೆ. ಈ ನಾಲ್ಕು ರಾಷ್ಟ್ರಗಳ ಜತೆಗೆ ಒಟ್ಟಾರೆ 33 ದೇಶಗಳ ಅಂದಾಜು 100 ಕೋಟಿಗೂ ಅಧಿಕ ಮಕ್ಕಳ ಜೀವ ಅಪಾಯದಲ್ಲಿರುವುದಾಗಿ ಯುನಿಸೆಫ್ ಮಕ್ಕಳ ಹವಾಮಾನ ಅಪಾಯ ಸೂಚ್ಯಂಕದ ಪರಿಚಯ (ಸಿಸಿಆರ್)ವರದಿಯಲ್ಲಿ ವಿಶ್ಲೇಷಿಸಿದೆ.

ಕಾಡಲಿದೆ ಅತಿವೃಷ್ಟಿ, ಅನಾವೃಷ್ಟಿ: ಭವಿಷ್ಯದಲ್ಲಿ 60 ಕೋಟಿಗೂ ಅಧಿಕ ಭಾರತೀಯರು ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗಲಿದ್ದಾರೆ. ಹಾಗೆಯೇ ಜಾಗತಿಕ ತಾಪಮಾನ ಶೇ.2 ಡಿಗ್ರಿ ಸೆಲ್ಸಿಯಸ್​ಗಿಂತ ಹೆಚ್ಚಿ ನಗರಗಳಿಗೆ ನೆರೆ ಕಾಡಲಿದೆ ಎಂದು ಎಚ್ಚರಿಸಲಾಗಿದೆ.

ಹೇಗೆಲ್ಲ ಪರಿಣಾಮ?

  • ನೆರೆ, ಬರ ಸೃಷ್ಟಿಸುವ ಅನಾಹುತ ಅಪಾರ ಮಕ್ಕಳನ್ನು ಬಲಿಪಡೆಯಬಹುದು
  • ಕುಡಿಯುವ ನೀರು, ಆಹಾರದ ಕೊರತೆ ಕಾಡಿ ಜೀವ ಕಳೆದುಕೊಳ್ಳಬಹುದು
  • ಬಡ, ಮಧ್ಯಮ ಕುಟುಂಬಗಳಿಗೆ ಆರ್ಥಿಕ ಆಘಾತ ಕಾಡಬಹುದು
  • ಕಲಿಕೆಗೂ ಸಾಧ್ಯವಾಗದಂತಹ ಸಂಕಷ್ಟ ಎದುರಾಗಬಹುದು
  • ವಾಯುಮಾಲಿನ್ಯ ಮಕ್ಕಳ ಆರೋಗ್ಯವನ್ನು ಹದಗೆಡಿಸಬಹುದು

ವರದಿಯಲ್ಲೇನಿದೆ?

  • ಕೋವಿಡ್ 19 ಹಾಗೂ ಹವಾಮಾನ ವೈಪರೀತ್ಯ ದಕ್ಷಿಣ ಏಷ್ಯಾ ಪಾಲಿಗೆ ಎಚ್ಚರಿಕೆಯ ಗಂಟೆ
  • ಅಂತರ್ಜಲ ವೃದ್ಧಿ, ಮಳೆ ಪ್ರಮಾಣ ಹೆಚ್ಚಳಕ್ಕೆ ಸೂಕ್ತವಾದ ವಾತಾವರಣ ನಿರ್ವಿುಸಬೇಕು

ದಕ್ಷಿಣ ಏಷ್ಯಾದ ಲಕ್ಷಾಂತರ ಮಕ್ಕಳು ಬರ, ನೆರೆ, ವಾಯುಮಾಲಿನ್ಯ, ಕೆರೆ ಒತ್ತುವರಿಯ ಪರಿಣಾಮದಿಂದ ನೆಲೆ ಕಳೆದುಕೊಂಡು ಹಸಿದು ಬದುಕುವ ಪರಿಸ್ಥಿತಿಗೆ ಸಿಲುಕಲಿದ್ದಾರೆ. ಆರೋಗ್ಯ, ಕುಡಿಯುವ ನೀರಿನ ಸಮಸ್ಯೆ ಬದುಕನ್ನು ಹೈರಾಣಾಗಿಸಲಿದೆ. | ಜಾರ್ಜ್ ಲರೇಯಾ ಅಡ್ಜೇಯಿ ಯುನಿಸೆಫ್ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net