

ಪ್ಯಾರಿಸ್: ನಿನ್ನೆ (ಆ.01) ಪ್ಯಾರಿಸ್ ಒಲಿಂಪಿಕ್ಸ್ 2024ರ ಪದಕದಾಟದಲ್ಲಿ ನಡೆದ ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ದೊಡ್ಡ ವಿವಾದವೊಂದು ಭುಗಿಲೆದ್ದಿದ್ದು, ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವುಮೆನ್ಸ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಇಟಾಲಿ ಮೂಲದ ಬಾಕ್ಸರ್ ಏಂಜಲೀನಾ ಕ್ಯಾರಿನಿ ತಮ್ಮ ಎದುರಾಳಿ ಅಲ್ಜೀರಿಯಾದ ಇಮಾನೆ ಖೆಲಿಫ್ ವಿರುದ್ಧದ ಕಾಳಗದಲ್ಲಿ 46 ಸೆಕೆಂಡ್ಗೆ ಮ್ಯಾಚ್ ತ್ಯಜಿಸಿ, ಹೊರಬಂದರು. ನಾಲ್ಕು ರೌಂಡ್ವರೆಗೂ ಹೋಗಬೇಕಿದ್ದ ಪಂದ್ಯವನ್ನು ಕೇವಲ 2ನೇ ಸುತ್ತಿಗೆ ಅಂತ್ಯಗೊಳಿಸಿದ ಏಂಜೆಲಾ, ಇಂತಹ ಸೋಲನ್ನು ನನ್ನಿಂದ ಒಪ್ಪಿಕೊಳ್ಳಲು ಅಸಾಧ್ಯ ಎಂದು ಆಟ ಅರ್ಧಕ್ಕೆ ಕೈಬಿಟ್ಟರು.
ಖಲಿಫೆ ವಿರುದ್ಧದ ಸೋಲನ್ನು ಸೋಲು ಎಂದು ಒಪ್ಪಿಕೊಳ್ಳಲು ನನ್ನಿಂದ ಅಸಾಧ್ಯ ಎಂದು ಬಾಕ್ಸಿಂಗ್ ಅಖಾಡದಲ್ಲಿಯೇ ಕಣ್ಣೀರಿಟ್ಟ ಏಂಜೆಲಾ, ಕಳೆದ ವರ್ಷ ನಡೆದ ಬಾಕ್ಸಿಂಗ್ ಚಾಂಪಿಯನ್ಶಿಪ್ ವೇಳೆ ಲಿಂಗ ಅರ್ಹತಾ ಪರೀಕ್ಷೆಯಲ್ಲಿ ವಿಫಲವಾಗಿದ್ದ ಖೇಲಿಫ್ರನ್ನು ಹೇಗೆ ಮಹಿಳೆಯರ ಜತೆ ಆಡಲು ಬಿಟ್ಟಿದ್ದೀರಿ ಎಂದು ಪ್ರಶ್ನಿಸಿ, ಭಾವುಕರಾದರು. “ಸ್ಪರ್ಧೆಯಲ್ಲಿ ತನ್ನ ಮೂಗಿಗೆ ಖೆಲಿಫೆ ಹೊಡೆದ ಪಂಚ್ ಬಹಳ ಬಲವಾಗಿತ್ತು. ಅದು ಮಹಿಳೆಯರು ಹೊಡೆದಂತೆ ಇರಲಿಲ್ಲ. ರಿಂಗ್‌ನಲ್ಲಿ ಇಷ್ಟು ವರ್ಷಗಳ ಅನುಭವ ಹೊಂದಿರುವ ನಾನು, ಇಲ್ಲಿಯವರೆಗೆ ಅಂತಹ ಬಲವಾದ ಪೆಟ್ಟನ್ನು ಅನುಭವಿಸಿಯೇ ಇರಲಿಲ್ಲ. ಹೀಗಾಗಿಯೇ ತಕ್ಷಣವೇ ಸ್ಪರ್ಧೆ ಕೈಬಿಡಲು ನಿರ್ಧರಿಸಿದೆ” ಎಂದರು.
ಸದ್ಯ ಈ ವಿಷಯಕ್ಕೆ ಸಂಬಂಧಿಸಿದಂತೆ ಏಂಜೆಲಾ ಪರ ಮಹಿಳಾ ಕ್ರೀಡಾಪಟುಗಳು ಧ್ವನಿ ಎತ್ತಿದ್ದು, ಮಹಿಳೆಯರ ಮಧ್ಯೆ ಪುರುಷ ಏಕೆ? ಇದನ್ನು ತೀವ್ರ ಖಂಡಿಸುತ್ತೇವೆ. ಇದಕ್ಕೆಲ್ಲಾ ಒಲಿಂಪಿಕ್ಸ್‌ನಲ್ಲಿ ಅವಕಾಶ ಕೊಡಬಾರದು ಎಂಬ ಕೂಗುಗಳು ವ್ಯಾಪಕವಾಗಿ ಕೇಳಿಬಂದಿತು. ಎಲ್ಲರೂ ಖೆಲಿಫೆ ಅವರನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಭಾರತದ ಓಟಗಾರ್ತಿ ದ್ಯುತಿ ಚಂದ್ ಮಾತ್ರ ಇಮಾನೆ ಖೆಲಿಫೆ ಪರ ಬ್ಯಾಟ್ ಬೀಸಿದ್ದಾರೆ.
"ತಪ್ಪು ಕಾರಣಗಳಿಂದಾಗಿ ಇಮಾನೆ ಖೆಲಿಫ್ ವಿರುದ್ಧ ಕ್ರೀಡಾಪಟುಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. 2014ರಲ್ಲಿ, ಹೆಚ್ಚಿನ ಟೆಸ್ಟೋಸ್ಟೆರಾನ್ ಮಟ್ಟ ಹೊಂದಿರುವ ವ್ಯಕ್ತಿಯು ಸ್ವಿಟ್ಜರ್ಲೆಂಡ್‌ನಲ್ಲಿನ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್‌ನಲ್ಲಿ ಭಾಗವಹಿಸಬಾರದು ಎಂಬ ಐಒಸಿ ನಿಯಮವನ್ನು ನಾನು ಸವಾಲು ಎಸಗಿದ್ದೆ ಹಾರ್ಮೋನ್ ಮಟ್ಟ ಅಥ್ಲೆಟಿಕ್ ಆಟದ ವೈಖರಿಯನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಗಮನಿಸಲಾಗಿದೆ. ಆ ಸಮಯದಲ್ಲಿ ನಾನು ಸಾಕಷ್ಟು ಅನುಭವಿಸಿದೆ. ಲಿಂಗಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳನ್ನು ಎದುರಿಸಿದ್ದೆ" ಎಂದು ದ್ಯುತಿ ಚಂದ್ ಹೇಳಿದರು.
"ನಿನ್ನೆ ನಡೆಯುತ್ತಿದ್ದ ಒಲಿಂಪಿಕ್ ಬಾಕ್ಸಿಂಗ್ ಪಂದ್ಯದ ವೇಳೆ ಏಂಜೆಲಾ ಕಾರಿನಿ ಅರ್ಧಕ್ಕೆ ಕೈಬಿಟ್ಟು ಹೊರನಡೆದರು. ಈಗ ಅವರು ಅಲ್ಜೀರಿಯನ್ ಬಾಕ್ಸರ್ ಬಗ್ಗೆ ದೂರುತ್ತಿದ್ದಾರೆ. ಅದಕ್ಕೆ ಕಾರಣ, ಹೆಚ್ಚಿನ ಟೆಸ್ಟೋಸ್ಟೆರಾನ್ ಮಟ್ಟ. ನೀವು ಒಲಿಂಪಿಕ್ಸ್‌ನಲ್ಲಿ ಆಡುವಾಗ ಹಲವಾರು ಪರೀಕ್ಷೆಗಳಿಗೆ ಒಳಗಾಗುತ್ತೀರಿ. ಅಂದಮೇಲೆ ಏಂಜೆಲಾ ಹೇಳಿಕೆ ಸರಿ ಎಂದು ನಾನು ಭಾವಿಸುವುದಿಲ್ಲ. ಈ ವಿಷಯವನ್ನು ವಿವಾದ ಮಾಡುವ ಅಗತ್ಯವಿರಲಿಲ್ಲ" ಎಂದು ಹೇಳಿದರು,(ಏಜೆನ್ಸೀಸ್).