

ಝೆಮಾ: ಉತ್ತರ ಸಿಕ್ಕಿಂನ ಝೆಮಾದಲ್ಲಿ ಶುಕ್ರವಾರ ಭಾರತೀಯ ಸೇನಾ ಟ್ರಕ್ ಅಪಘಾತಕ್ಕೀಡಾಗಿದ್ದು, 16 ಸೈನಿಕರು ಹುತಾತ್ಮರಾಗಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಉತ್ತರ ಬಂಗಾಳದ ಸೇನಾ ಆಸ್ಪತ್ರೆಗೆ ವಿಮಾನದ ಮೂಲಕ ರವಾನಿಸಲಾಗಿದೆ.
ಭಾರತ-ಚೀನಾ ಗಡಿ ಸಮೀಪ ಉತ್ತರ ಸಿಕ್ಕಿಂನ ಗಿಡಿ ಚೆಕ್ ಪೋಸ್ಟ್ಗಳತ್ತ 20 ಸೈನಿಕರನ್ನು ಕರೆದೊಯ್ಯುತ್ತಿದ್ದ ಸೇನಾ ವಾಹನವು ಝೆಮಾದಲ್ಲಿ ತೀಕ್ಷ್ಣವಾದ ತಿರುವಿನಲ್ಲಿ ನೂರಾರು ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ. ಈ ದುರ್ಘಟನೆಯಲ್ಲಿ 16 ಸೇನಾ ಸಿಬ್ಬಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರ ಪೈಕಿ ಮೂವರು ಜೂನಿಯರ್ ಕಮಿಷನ್ಡ್ ಆಫೀಸರ್ಗಳು ಮತ್ತು 13 ಮಂದಿ ಸೈನಿಕರು.
ಅಪಘಾತದಲ್ಲಿ ಮೃತಪಟ್ಟ ಯೋಧರಿಗೆ ಭಾರತೀಯ ಸೇನೆ ಸಂತಾಪ ಸೂಚಿಸಿದೆ. 'ಉತ್ತರ ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾರತೀಯ ಸೇನಾ ಸಿಬ್ಬಂದಿಗಳ ಮೃತಪಟ್ಟಿರುವುದು ತೀವ್ರ ನೋವುಂಟು ಮಾಡಿದೆ. ಅವರ ಸೇವೆ ಮತ್ತು ಬದ್ಧತೆಗೆ ರಾಷ್ಟ್ರವು ಕೃತಜ್ಞವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ' ಎಂದು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ತಿಳಿಸಿದ್ದಾರೆ.