ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಯತ್ನಿಸಿದ ಪಾಕ್​: ಎಕೆ-47 ರೈಫೆಲ್ ಸಹಿತ ಹಲವು ಶಸ್ತ್ರಾಸ್ತ್ರ ವಶ

AK_POK
Published on

ಶ್ರೀನಗರ: ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುವ ಪಾಕಿಸ್ತಾನ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಟ್ಯೂಬ್​ವೊಂದರಲ್ಲಿ ಶಸ್ತ್ರಾಸ್ತ್ರಗಳನ್ನು ಕಟ್ಟಿ ಕುಪ್ವಾರಾ ಜಿಲ್ಲೆಯ ಕೀರನ್ ವಿಭಾಗದ ಕಿಶನ್​ಗಂಗಾ ನದಿಯಲ್ಲಿ ಶುಕ್ರವಾರ ರಾತ್ರಿ ಹರಿಬಿಡಲಾಗಿತ್ತು. ಅದನ್ನು ಭಾರತೀಯ ಕಣ್ಗಾವಲು ಯಂತ್ರ ಪತ್ತೆಹಚ್ಚಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಸೇನೆ, ಪೊಲೀಸರ ಜಂಟಿ ತಂಡ ಕಾರ್ಯಾಚರಣೆ ನಡೆಸಿದ್ದು, ಉಗ್ರರ ಪ್ರಯತ್ನವನ್ನು ವಿಫಲಗೊಳಿಸಿದೆ. ನದಿಯಲ್ಲಿದ್ದ ನಾಲ್ಕು ಎಕೆ-47 ರೈಫೆಲ್​ಗಳು, ಎಂಟು ಸ್ಪೋಟಕಗಳು ಮತ್ತು 240 ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ಈ ರೀತಿಯ ಕಳ್ಳ ಮಾರ್ಗದಲ್ಲಿ ಪಾಕ್ ಉಗ್ರರು ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುತ್ತಿದ್ದಾರೆ. ಅವೆಲ್ಲವನ್ನೂ ನಾವು ವಿಫಲಗೊಳಿಸಿದ್ದೇವೆ. ಆದರೂ ಪಾಕ್ ಕುತಂತ್ರ ಬದಲಾಗಿಲ್ಲ ಎಂದು ಕಮಾಂಡರ್ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ತಿಳಿಸಿದ್ದಾರೆ.

ನುಸುಳುಕೋರರ ಸಂಖ್ಯೆ ಇಳಿಕೆ: ಪ್ರತಿ ವರ್ಷಕ್ಕೆ ಹೋಲಿಸಿದರೆ ಕಾಶ್ಮೀರದಲ್ಲಿ ಈ ವರ್ಷ ನುಸುಳುಕೋರರ ಸಂಖ್ಯೆ ಭಾರಿ ಇಳಿಕೆ ಕಂಡಿದೆ. ಕಳೆದ ವರ್ಷ 150ಕ್ಕೂ ಅಧಿಕ ಮಂದಿ ನುಸುಳುವ ಪ್ರಯತ್ನ ಮಾಡಿದ್ದರು. ಆದರೆ ಈ ವರ್ಷ ಇಲ್ಲಿಯವರೆಗೆ ಕೇವಲ 30 ಉಗ್ರರು ಒಳನುಸುಳಲು ಯತ್ನ ಮಾಡಿದ್ದಾರೆ. ಅದನ್ನು ವಿಫಲಗೊಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಅನೇಕ ಉಗ್ರರು ಶರಣಾಗಿ, ಬದುಕನ್ನು ಬದಲಾಯಿಸಿಕೊಂಡಿದ್ದಾರೆ. ಇದು ಆಶಾದಾಯಕವಾಗಿದೆ. ನುಸುಳುಕೋರರ ಸಂಖ್ಯೆ ಕಡಿಮೆಯಾಗಿರುವುದರಿಂದಾಗಿ ಕಣಿವೆ ಪ್ರದೇಶದಲ್ಲಿ ಹಿಂಸಾಚಾರ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ಗಡಿ ನಿಯಂತ್ರಣ ರೇಖೆಯ ಬಳಿಯಲ್ಲಿರುವ ಲಾಂಚ್ ಪ್ಯಾಡ್​ಗಳಲ್ಲಿ 250-300 ಉಗ್ರರು ಇರುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net