

ಕಾನಹೊಸಹಳ್ಳಿ: ಎರಡು ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಹುಟ್ಟೂರಾದ ಆಲೂರಿಗೆ ಮಂಗಳವಾರ ವಾಪಸಾದ ಸೈನಿಕ ರಾಘವೇಂದ್ರರೆಡ್ಡಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಸಿಕ್ಕಿತು.
ರಾಘವೇಂದ್ರರೆಡ್ಡಿ ಊರಿಗೆ ಮರಳುವ ವಿಷಯ ತಿಳಿಯುತ್ತಿದ್ದಂತೆ ಸಂಗಮಗೊಂಡ ಗ್ರಾಮಸ್ಥರು, ಸ್ವಾಗತಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ರಾಷ್ಟ್ರೀಯ ಹೆದ್ದಾರಿ 50ರ ಆಲೂರು ಕ್ರಾಸ್‌ಗೆ ತೆರಳಿ ವಿಶೇಷವಾಗಿ ಅಲಂಕರಿಸಿದ ವಾಹನದ ಸೈನಿಕನನ್ನು ಕುಳ್ಳಿರಿಸಿ ಗ್ರಾಮದತುಂಬೆಲ್ಲ ಮೆರವಣಿಗೆ ಮಾಡಿದರು.
ಈ ಅದ್ದೂರಿ ಸ್ವಾಗತ, ಗ್ರಾಮಸ್ಥರ ಸಂಭ್ರಮ ಕಂಡ ಯೋಧ ರಾಘವೇಂದ್ರರೆಡ್ಡಿ ಭಾವುಕರಾಗಿ ಮಾತನಾಡಿ, ನಾನು 2002-03ರಲ್ಲಿ ದೇಶ ಸೇವೆಗೆ ಸೇರಿದೆ. ನಂತರ ಕೊಲ್ಕತ್ತಾ, ಮಿಜೋರಾಂ, ಪಂಜಾಬ್, ತ್ರಿಪುರ, ಅಸ್ಸಾಂ ಹಾಗೂ ಬಾಂಗ್ಲದೇಶದ ಬಾರ್ಡರ್ ಸೇರಿದಂತೆ ವಿವಿಧ ಭಾಗದಲ್ಲಿ ದೇಶಕ್ಕಾಗಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ. ನಿವೃತ್ತಿ ಕೊನೆಯಲ್ಲಿ ಗ್ರಾಮಸ್ಥರು ನನ್ನನ್ನು ಸ್ವಾಗತಿಸಿದ ಪರಿ, ಸೈನಿಕರಾಗಿ ಸೇವೆ ಸಲ್ಲಿಸಲು ಇಚ್ಛಿಸುವ ಗ್ರಾಮದ ಯುವಕರಿಗೆ ಸ್ಫೂರ್ತಿಯಾಗಲಿದೆ ಎಂದರು.