ವಾಹನೋದ್ಯಮದಲ್ಲಿ ಶೀಘ್ರ ಭಾರತ ಅಗ್ರಗಣ್ಯ

2-678a9585f3c16
Published on

ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ | ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್​ಪೋ ಆರಂಭ

ನವದೆಹಲಿ: ಭವಿಷ್ಯದಲ್ಲಿ ಭಾರತವೇ ವಾಹನೋದ್ಯಮದಲ್ಲಿ ಅಗ್ರಗಣ್ಯ ರಾಷ್ಟ್ರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್​ಪೋ- 2025’ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ನಾಲ್ಕೇ ವರ್ಷಗಳಲ್ಲಿ ಈ ಉದ್ಯಮಕ್ಕೆ 36 ಶತಕೋಟಿ ಡಾಲರ್ ವಿದೇಶಿ ಬಂಡವಾಳ ಹರಿದುಬಂದಿದೆ. ಪ್ರತಿ ವರ್ಷ ಎರಡೂವರೆ ಕೋಟಿ ವಾಹನಗಳು ಮಾರಾಟವಾಗಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ವಾಹನ ಮಾರಾಟ ಹಿಂದೆಂದೂ ಆಗಿರಲಿಲ್ಲ ಎಂದು ಹೇಳಿದರು.

ಐದು ದಿನಗಳ ಕಾಲ ದೆಹಲಿಯ ಮೂರು ಸ್ಥಳಗಳಲ್ಲಿ ನಡೆಯಲಿರುವ ದೇಶದ ಈ ಅತಿ ದೊಡ್ಡ ವಾಹನ ಎಕ್ಸ್​ಪೋದಲ್ಲಿ ಹೊಸದಾಗಿ ನೂರಕ್ಕೂ ಹೆಚ್ಚು ವಾಹನಗಳು, ತಂತ್ರಜ್ಞಾನಗಳು ಮತ್ತು ಬಿಡಿಭಾಗಗಳು ಲೋಕಾರ್ಪಣೆಯಾಗಲಿವೆ. ಸಂಬಂಧಿಸಿದ ಎಲ್ಲ ಕಂಪನಿಗಳು ಭಾಗವಹಿಸಿವೆ.

‘ವಾಹನೋದ್ಯಮದಲ್ಲಿ ನಾವೀನ್ಯತೆ, ಆಧುನಿಕ ತಂತ್ರಜ್ಞಾನ ಅಳವಡಿಕೆಯಾಗುತ್ತಿದ್ದು, ಮುಂಬರುವ ವರ್ಷಗಳಲ್ಲಿ ಇಡೀ ಜಗತ್ತಿನಲ್ಲೇ ಭಾರತ ಮತ್ತು ಏಷ್ಯಾ ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬೆಳವಣಿಗೆಗೆ ಸಾಕ್ಷಿಯಾಗಲಿವೆ. ಈ ವೃದ್ಧಿಯಲ್ಲಿ ‘ಮೇಕ್ ಇನ್ ಇಂಡಿಯಾ’ ಉಪಕ್ರಮವು ಮಹತ್ವದ ಪಾತ್ರ ವಹಿಸಿದೆ. ಸಾಧನೆ ಆಧರಿತ ಪ್ರೋತ್ಸಾಹಕ (ಪಿಎಲ್​ಐ) ಯೋಜನೆಯು ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಹೆಚ್ಚಿನ ವೇಗ ನೀಡಿದೆ. ಈ ವಲಯದಲ್ಲಿ 2.25 ಲಕ್ಷ ಕೋಟಿ ರೂ. ಮೌಲ್ಯದ ಮಾರಾಟಕ್ಕೆ ಮತ್ತು 1.5 ಲಕ್ಷ ನೇರ ಉದ್ಯೋಗಗಳ ಸೃಜನೆಗೆ ಅದು ಕಾರಣವಾಗಿದೆ’ ಎಂದು ಮೋದಿ ವಿವರಿಸಿದರು.

‘ಕಳೆದ ಒಂದೇ ವರ್ಷದಲ್ಲಿ ವಾಹನೋದ್ಯಮವು ಶೇ. 12ರಷ್ಟು ವೃದ್ಧಿ ದಾಖಲಿಸಿದೆ. ರಫ್ತು ಹೆಚ್ಚಾಗಿದೆ. ಭಾರತದಲ್ಲಿ ಮಾರಾಟವಾಗುವ ಕಾರುಗಳ ಸಂಖ್ಯೆಯು ಹಲವು ರಾಷ್ಟ್ರಗಳ ಜನಸಂಖ್ಯೆಯನ್ನೇ ಮೀರಿಸಿದೆ. ದೇಶದಲ್ಲಿ ದೊಡ್ಡದಿರುವ ಯುವ ಜನಸಂಖ್ಯೆ, ಹೆಚ್ಚುತ್ತಿರುವ ನಗರೀಕರಣ, ಆಧುನಿಕ ಮೂಲಸೌಕರ್ಯ ಅಭಿವೃದ್ಧಿ, ಕೈಗೆಟಕುವ ದರದಲ್ಲಿ ಸಿಗುತ್ತಿರುವ ವಾಹನಗಳು ಈ ಉದ್ಯಮವನ್ನು ಇನ್ನಷ್ಟು ಎತ್ತರಕ್ಕೇರಿಸಲಿವೆ’ ಎಂದು ಅಭಿಪ್ರಾಯಪಟ್ಟರು.

ಕಳೆದ ಒಂದು ದಶಕದಲ್ಲಿ 25 ಕೋಟಿಗಿಂತ ಹೆಚ್ಚು ಜನರು ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ. ನವಮಧ್ಯಮ ವರ್ಗ ಸೃಷ್ಟಿಯಾಗಿದ್ದು, ಅಂಥವರು ತಮ್ಮ ಮೊದಲ ವಾಹನ ಖರೀದಿಸುತ್ತಿದ್ದಾರೆ. ಪರಿಸರ ಮತ್ತು ಆರ್ಥಿಕತೆ ಎರಡಕ್ಕೂ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ. ಎಲೆಕ್ಟ್ರಿಕ್ ವಾಹನಗಳು, ಹೈಡ್ರೋಜನ್ ಇಂಧನ, ಜೈವಿಕ ಇಂಧನ ಮುಂತಾದ ಹಸಿರು ಉಪಕ್ರಮಗಳಿಗೆ ಉತ್ತೇಜನ ನೀಡುತ್ತಿದೆ ಎಂದು ವಿವರಿಸಿದರು.

ಕಳೆದ 10 ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು 640 ಪಟ್ಟು ಜಾಸ್ತಿಯಾಗಿದೆ. ದಶಕದ ಹಿಂದೆ ಪ್ರತಿ ವರ್ಷ 2,600 ಎಲೆಕ್ಟ್ರಿಕ್ ವಾಹನಗಳು ಮಾತ್ರ ಮಾರಾ ಟವಾಗುತ್ತಿದ್ದವು. 2024ರಲ್ಲಿ 16.8 ಲಕ್ಷಕ್ಕಿಂತ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ. ಮುಂದಿನ 10 ವರ್ಷಗಳಲ್ಲಿ ಈ ಸಂಖ್ಯೆ 8 ಪಟ್ಟು ಹೆಚ್ಚಾಗಲಿದೆ ಎಂದರು. ವಾಯು ಮಾಲಿನ್ಯಕ್ಕೆ ಕಾರಣ

ವಾಗುವ ಹಳೆಯ ವಾಹನಗಳನ್ನು ಬಿಟ್ಟು ಹೊಸ ವಾಹನ ಖರೀದಿಸಲು ಜನರನ್ನು ಪ್ರೋತ್ಸಾಹಿಸಬೇಕಾಗಿದೆ. ಇದಕ್ಕಾಗಿ ರೂಪಿಸಿರುವ ವೆಹಿಕಲ್ ಸ್ಕ್ರ್ಯಾಪಿಂಗ್ ನೀತಿಯ ಲಾಭವನ್ನು ವಾಹನ ಉತ್ಪಾದಕರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಈ ಕ್ಷೇತ್ರದಲ್ಲಿ ರತನ್ ಟಾಟಾ ಮತ್ತು ಒಸಾಮು ಸುಜುಕಿ ಮಾಡಿದ ಕಾರ್ಯಗಳನ್ನು ಪ್ರಧಾನಿ ಶ್ಲಾಘಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net