

ನವದೆಹಲಿ: ಫೆ. 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನಕ್ಕೆ ಅತ್ಯಂತ ಸಂತೋಷದಿಂದ ಎದುರು ನೋಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ನಮ್ಮ ಗೌರವಾನ್ವಿತ ಅತಿಥಿಯ ಸ್ಮರಣೀಯ ಸ್ವಾಗತಕ್ಕೆ ಭಾರತ ಸಾಕ್ಷಿಯಾಗಲಿದೆ. ಈ ಭೇಟಿ ತುಂಬಾ ವಿಶೇತೆಗಳಲ್ಲಿ ಒಂದಾಗಿದೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತ ಮತ್ತು ಅಮೆರಿಕವು ಪ್ರಜಾಪ್ರಭುತ್ವದೊಂದಿಗೆ ಸಾಮಾನ್ಯ ಬದ್ಧತೆ ಮತ್ತು ಬಹುತ್ವವನ್ನು ಹಂಚಿಕೊಳ್ಳುತ್ತದೆ. ಜಟಿಲ ಸಮಸ್ಯೆಗಳು ಎದುರಾದಂತಹ ಸಂದರ್ಭಗಳಲ್ಲಿ ಉಭಯ ರಾಷ್ಟ್ರಗಳು ದೊಡ್ಡಮಟ್ಟದ ಸಹಕಾರಗಳನ್ನು ನೀಡುತ್ತವೆ. ನಮ್ಮ ರಾಷ್ಟ್ರಗಳ ನಡುವಿನ ಬಲಿಷ್ಠ ಸ್ನೇಹ ನಮ್ಮ ನಾಗರಿಕರಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ಒಳ್ಳೆಯದನ್ನು ಬಯಸುತ್ತದೆ ಎಂದು ಪ್ರಧಾನಿ ಟ್ವೀಟ್ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ.
ಭಾರತ ಪ್ರವಾಸಕ್ಕೆ ಎದರು ನೋಡುತ್ತಿದ್ದೇನೆ ಎಂದು ಟ್ರಂಪ್ ಸುದ್ದಿಗಾರರೊಂದಿಗೆ ಹೇಳಿದ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿ ಸ್ಮರಣೀಯ ಸ್ವಾಗತ ನೀಡಲು ಭಾರತ ಕಾಯುತ್ತಿದೆ ಎಂದು ಹೇಳಿದ್ದಾರೆ.
ಎರಡು ದಿನಗಳ ಭೇಟಿ ವೇಳೆ ಟ್ರಂಪ್ ಮತ್ತು ಪ್ರಧಾನಿ ಮೋದಿ ಗುಜರಾತಿನ ಅಹಮದಾಬಾದ್ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. (ಏಜೆನ್ಸೀಸ್)