

ವಾಷಿಂಗ್ಟನ್: ವೈಮಾನಿಕ ದಾಳಿಯ ಹಾರ್ಪನ್ ಬ್ಲಾಕ್-2 ಕ್ಷಿಪಣಿ ಮತ್ತು ಜಲ ಮಾರ್ಗದಲ್ಲಿ ದಾಳಿ ನಡೆಸುವಂತಹ ಲಘು ಕ್ಷಿಪಣಿಗಳನ್ನು (ಟಾರ್ಪೆಡೊ) ಭಾರತಕ್ಕೆ ಪೂರೈಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮತಿಸಿದ್ದಾರೆ. -ಠಿ; 1,180 ಕೋಟಿ (155 ಮಿಲಿಯನ್ ಡಾಲರ್) ಮೊತ್ತದ ಈ ಕ್ಷಿಪಣಿಗಳಿಂದ ಭಾರತದ ವಾಯು ಮತ್ತು ನೌಕಾ ದಳದ ದಾಳಿ ಸಾಮರ್ಥ್ಯ ಹೆಚ್ಚಲಿದೆ.
ರಕ್ಷಣಾ ಸಾಮಗ್ರಿಯ ಮಾರಾಟದ ಪ್ರಸ್ತಾವವನ್ನು ಟ್ರಂಪ್ ಅವರ ಆಡಳಿತ ಸಂಸತ್ತಿನ (ಕಾಂಗ್ರೆಸ್) ಗಮನಕ್ಕೆ ತಂದಿದ್ದು, ಇಲ್ಲಿ ಒಪ್ಪಿಗೆ ದೊರೆತ ನಂತರ ಈ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ.
ಹತ್ತು ಎಜಿಎಂ-84ಎಲ್ ಹಾರ್ಪನ್ ಬ್ಲಾಕ್-2 ಕ್ಷಿಪಣಿಗಳಿಗೆ ಸುಮಾರು -ಠಿ; 700 ಕೋಟಿ (92 ಮಿಲಿಯನ್ ಡಾಲರ್) ವೆಚ್ಚ ತಗುಲಲಿದೆ. ಹದಿನಾರು ಎಂಕೆ 54 ಆಲ್ ಅಪ್ ರೌಂಡ್ ಲಘು ಟಾರ್ಪೆಡೊಗಳು ಹಾಗೂ ಮೂರು ಎಂಕೆ ಎಕ್ಸರ್ಸೈಸ್ ಟಾರ್ಪೆಡೋಗಳಿಗೆ ಒಟ್ಟು -ಠಿ; 479 ಕೋಟಿ (63 ಮಿಲಿಯನ್ ಡಾಲರ್) ವೆಚ್ಚ ಆಗಲಿದೆ ಎಂದು ಕಾಂಗ್ರೆಸ್ಗೆ ಸಲ್ಲಿಸಿರುವ ಎರಡು ಅಧಿಸೂಚನೆಗಳಲ್ಲಿ ಅಮೆರಿಕದ ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ ತಿಳಿಸಿದೆ. ಬೋಯಿಂಗ್ ಕಂಪನಿ ಹಾರ್ಪನ್ ಕ್ಷಿಪಣಿಗಳನ್ನು ತಯಾರಿಸಲಿದ್ದು ಟಾರ್ಪೆಡೊಗಳನ್ನು ರಾಯ್ಥೆಯಾನ್ ಸರಬರಾಜು ಮಾಡಲಿದೆ.
ಭಾರತ ಸರ್ಕಾರ ಈ ಎರಡು ಮಿಲಿಟರಿ ಸಾಮಗ್ರಿಗಳಿಗೆ ಸಲ್ಲಿಸಿದ ಕೋರಿಕೆ ಮೇರೆಗೆ ಅವುಗಳ ಮಾರಟಕ್ಕೆ ವಿದೇಶಾಂಗ ಇಲಾಖೆ ಇತ್ತೀಚೆಗೆ ನಿರ್ಧರಿಸಿತ್ತು ಎಂದು ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ ಪೆಂಟಗನ್ ತಿಳಿಸಿದೆ. ಪ್ರಸ್ತಾಪಿತ ಮಾರಾಟ ಅಮೆರಿಕ-ಭಾರತ ವ್ಯೂಹಾತ್ಮಕ ಸಂಬಂಧ ಬಲಪಡಿಸಲು ನೆರವಾಗುವ ಮೂಲಕ ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತೆಗೆ ಬೆಂಬಲವಾಗಿರುತ್ತದೆ. ದೇಶದ ಒಂದು ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರದ ಭದ್ರತೆ ಹೆಚ್ಚಿಸಲೂ ಅದು ನೆರವಾಗುತ್ತದೆ ಎಂದು ಪೆಂಟಗನ್ ವಿವರಿಸಿದೆ.
ಪಿ-81 ವಿಮಾನದಲ್ಲಿ ಹಾರ್ಪನ್ ಬಳಕೆ
ಹಾರ್ಪನ್ ಕ್ಷಿಪಣಿ ವ್ಯವಸ್ಥೆಯನ್ನು ಆಯಕಟ್ಟಿನ ಸಾಗರ ತೀರಗಳನ್ನು ರಕ್ಷಿಸುವ ಸಮರ ಕಾರ್ಯಾಚರಣೆಗಳಿಗಾಗಿ ಪಿ-81 ವಿಮಾನಗಳಲ್ಲಿ ಅಳವಡಿಸಲಾಗುತ್ತದೆ. ಅಂತರ್-ಕಾರ್ಯಾಚರಣೆ ಸಾಮರ್ಥ್ಯವನ್ನು ವರ್ಧಿಸಲಿದೆ. ಎಂಕೆ 54 ಲಘು ಟಾರ್ಪೆಡೊ ಕ್ಷಿಪಣಿ ಜಲಾಂತರ್ಗಾಮಿ ವಿರುದ್ಧ
ಕಾರ್ಯಾಚರಣೆ ನಡೆಸುವ ಭಾರತದ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ.