

ಭಾರತ ವಿಭಜನೆಯಾಗಿ 1947ರಲ್ಲಿ ಪಾಕಿಸ್ತಾನ ಅಸ್ತಿತ್ವಕ್ಕೆ ಬಂತು. ಈ ವಿಭಜನೆಯಲ್ಲಿ ಬಂಗಾಳ ಎರಡು ಭಾಗಗಳಾಗಿ ವಿಂಗಡನೆಯಾಯಿತು. ಸಹಜವಾಗಿ ಪಶ್ಚಿಮ ಬಂಗಾಳ ಭಾರತದ ಪಾಲಾದರೆ ಪೂರ್ವ ಬಂಗಾಳ ಪಾಕಿಸ್ತಾನದ ವಶವಾಗಿ ಪೂರ್ವ ಪಾಕಿಸ್ತಾನವಾಯಿತು. ಪಶ್ಚಿಮ ಪಾಕಿಸ್ತಾನದಿಂದ ಸಾವಿರಾರು ಮೈಲಿ ಕ್ರಮಿಸಿ ಭಾರತದಿಂದ ಹಾದುಹೋಗಿ ಪೂರ್ವ ಪಾಕಿಸ್ತಾನವನ್ನು ತಲುಪಬೇಕಿತ್ತು. ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ಒಂದೇ ದೇಶಕ್ಕೆ ಸೇರಿದ್ದರೂ ಅವುಗಳ ನಡುವೆ ಸಾಕಷ್ಟು ವೈರುಧ್ಯಗಳಿದ್ದವು. ಭೌಗೊಳಿಕವಾಗಿ ಮಾತ್ರವಲ್ಲದೆ ಭಾಷೆ ಮತ್ತು ಸಾಂಸ್ಕೃತಿಕವಾಗಿ ಅಂತರಗಳಿದ್ದವು. ಸ್ವಾತಂತ್ರ್ಯದ ನಂತರ ಅವುಗಳ ನಡುವಿನ ತಿಕ್ಕಾಟಗಳು ಹೆಚ್ಚಾದವು.
ಕಲಹ ಮೊದಲು ಭಾಷೆಯಿಂದ ಆರಂಭವಾಯಿತು. ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿ ಪ್ರಮುಖ ಭಾಷೆಯಾಗಿತ್ತು. ಪಶ್ಚಿಮ ಪಾಕಿಸ್ತಾನದಲ್ಲಿ ಉರ್ದು, ಪಂಜಾಬಿ, ಬಿಹಾರಿ, ಮರಾಠಿ ಸೇರಿ ಹಲವು ಭಾಷೆ ಮಾತನಾಡುವ ಜನರಿದ್ದರು. ಆದರೆ ಆಗಿನ ಸರ್ಕಾರ ಉರ್ದುವನ್ನು ರಾಷ್ಟ್ರಭಾಷೆಯನ್ನಾಗಿ ಘೊಷಿಸಿದ್ದು, ಪೂರ್ವ ಪಾಕಿಸ್ತಾನಿಯರನ್ನು ಕೆರಳಿಸಿತು. ಬಂಗಾಳಿಯನ್ನು ರಾಷ್ಟ್ರಭಾಷೆಯಾಗಿಸಬೇಕೆಂದು ಆಗ್ರಹಿಸಿ ಅವರು ಹೋರಾಟ ಆರಂಭಿಸಿದರು. 1952ರಲ್ಲಿ ಢಾಕಾದಲ್ಲಿ ಬೃಹತ್ ಆಂದೋಲನ ನಡೆಯಿತು. ಚಳವಳಿಯನ್ನು ಹತ್ತಿಕ್ಕಲು ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ 5 ಜನ ಹತರಾದರು. ಭಾಷೆಯಿಂದ ಆರಂಭವಾದ ಹೋರಾಟ ಅಲ್ಲಿಗೆ ನಿಲ್ಲಲಿಲ್ಲ. ಎಲ್ಲ ಸಂಪನ್ಮೂಲಗಳನ್ನು ಕೇಂದ್ರೀಕರಿಸಿ ಪಶ್ಚಿಮ ಪಾಕಿಸ್ತಾನಕ್ಕೆ ಅನುಕೂಲಕರ ನೀತಿಯನ್ನು ಪಾಕ್ ಸರ್ಕಾರ ಜಾರಿಗೊಳಿಸಿತು. ಬಜೆಟ್ನ ಪ್ರತಿಶತ 75 ಭಾಗ ಪಶ್ಚಿಮ ಪಾಕಿಸ್ತಾನಕ್ಕೆ ನೀಡಲಾಯಿತು. ಇದರಿಂದ ಪೂರ್ವ ಪಾಕಿಸ್ತಾನದಲ್ಲಿ ಬಡತನ ಹೆಚ್ಚಾಯಿತು. ಅಸಮಾನತೆಯ ನೀತಿಯಿಂದ ಜನರು ತತ್ತರಿಸಿ ಹೋದರು.
ಸರ್ಕಾರದ ಇಬ್ಬಗೆ ನೀತಿಯ ವಿರುದ್ಧ ಹೋರಾಟಗಳು ತೀವ್ರಗೊಂಡವು. ಅವಾಮಿ ಲೀಗ್ನ ಮುಖ್ಯಸ್ಥ ಶೇಖ್ ಮುಜಿಬುರ್ ರೆಹಮಾನ್ ಹೋರಾಟದ ನಾಯಕತ್ವ ವಹಿಸಿಕೊಂಡರು. ಅಪಾರ ಜನಬೆಂಬಲ ಗಳಿಸಿದ ಮುಜಿಬುರ್ ರೆಹಮಾನ್ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಸಾಧಿಸಿದರು. ಆದರೆ ಇದನ್ನು ಪಶ್ಚಿಮ ಪಾಕಿಸ್ತಾನ ಒಪ್ಪಲಿಲ್ಲ. ಅವಾಮಿ ಲೀಗ್ಗೆ ಸರ್ಕಾರ ಸ್ಥಾಪಿಸಲು ಅವಕಾಶ ಕೊಡದೆ ಗವರ್ನರ್ ಆಡಳಿತವನ್ನು ಜಾರಿಗೊಳಿಸಿತು. ಇದು ಪೂರ್ವ ಪಾಕಿಸ್ತಾನಿಯರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತು. ಮುಜಿಬುರ್ ರೆಹಮಾನ್ ಸರ್ಕಾರದ ವಿರುದ್ಧ ಸಿಕ್ಸ್ ಪಾಯಿಂಟ್ ಚಳವಳಿ ಆರಂಭಿಸಿದರು. ಪ್ರತ್ಯೇಕ ರಾಷ್ಟ್ರ, ಕರೆನ್ಸಿ, ವಿದೇಶಾಂಗ ನೀತಿ, ವ್ಯಾಪಾರ ನೀತಿ, ತೆರಿಗೆ ಕಾನೂನು, ವಿದೇಶಿ ವಿನಿಮಯ ಮತ್ತು ಪ್ರತ್ಯೇಕ ಭೂಸೇನೆ ಮತ್ತು ನೌಕದಳಗಳು ಬೇಕೆಂದು ಒತ್ತಾಯಿಸಿದರು.
1970ರಲ್ಲಿ ‘ಭೋಲಾ’ ಎಂಬ ಚಂಡಮಾರುತ ಪೂರ್ವ ಪಾಕಿಸ್ತಾನಕ್ಕೆ ಅಪ್ಪಳಿಸಿತು. ಜನ ಚಂಡಮಾರುತದ ತೀವ್ರತೆಗೆ ನಲುಗಿಹೋದರು. ಭೀಕರ ಪ್ರವಾಹ ಜನಜೀವನವನ್ನು ತತ್ತರಗೊಳಿಸಿತು. ಪರಿಹಾರ ಕಾರ್ಯ ಆರಂಭಿಸಲು ಮುಜಿಬುರ್ ರೆಹಮಾನ್ ಸರ್ಕಾರಕ್ಕೆ ವಿನಂತಿಸಿದರು. ಆದರೆ ಅಂದಿನ ಯಾಹ್ಯಾ ಖಾನ್ ಸರ್ಕಾರ ಸೂಕ್ತ ಪರಿಹಾರ ಒದಗಿಸದೆ ಚುನಾವಣೆ ಘೊಷಿಸಿತು. ಜನ ಮತ್ತೊಮ್ಮೆ ಅವಾಮಿ ಲೀಗ್ನ್ನು ಬೆಂಬಲಿಸಿದರೂ ಸರ್ಕಾರ ಮುಜಿಬುರ್ ರೆಹಮಾನ್ರ ಗೆಲುವನ್ನು ನಿರಾಕರಿಸಿತು. ಇದು ಬಾಂಗ್ಲಾದೇಶದ ಸ್ವತಂತ್ರ ಆಂದೋಲನಕ್ಕೆ ನಾಂದಿ ಹಾಡಿತು. ಬಾಂಗ್ಲಾದೇಶದ ಧ್ವಜವನ್ನು ಢಾಕಾದಲ್ಲಿ ಹಾರಿಸಲಾಯಿತು. ಹೋರಾಟವನ್ನು ಹತ್ತಿಕ್ಕಲು ‘ಆಪರೇಶನ್ ಸರ್ಚ್ಲೈಟ್’ನ್ನು ಆರಂಭಿಸಲಾಯಿತು. ಮುಜಿಬುರ್ ರೆಹಮಾನ್ ಸೇರಿದಂತೆ ಹಲವು ಹೋರಾಟಗಾರರನ್ನು ಬಂಧಿಸಿ ಪಶ್ಚಿಮ ಪಾಕಿಸ್ತಾನಕ್ಕೆ ಕರೆದೊಯ್ಯಲಾಯಿತು. ಅಪಾರ ಹಿಂಸಾಚಾರಗಳು ಪೂರ್ವ ಪಾಕಿಸ್ತಾನದಲ್ಲಿ ನಡೆದುಹೋದವು. ಅದು ಜನರ ಸಾವುನೋವುಗಳಿಗೆ ಕಾರಣವಾಯಿತು.
ಬಾಂಗ್ಲಾದೇಶದ ಸ್ಥಾಪನೆಗಾಗಿ ಮುಜಿಬುರ್ ರೆಹಮಾನ್ ಭಾರತದ ಸಹಾಯ ಕೇಳಿದರು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಮಾನವೀಯ ನೆಲೆಯಲ್ಲಿ ಬಾಂಗ್ಲಾ ವಿಮೋಚನೆಗೆ ಬೆಂಬಲ ನೀಡಿದರು. ಜೊತೆಗೆ ಬಾಂಗ್ಲಾದೇಶದ ಸ್ಥಾಪನೆ ಭಾರತದ ರಕ್ಷಣಾ ನೀತಿ ಮತ್ತು ವಿದೇಶಾಂಗ ನೀತಿಗೆ ಅನುಕೂಲಕರವಾಗಿತ್ತು. ಆಗ ಜಾಗತಿಕ ಮಟ್ಟದಲ್ಲಿ ರಷ್ಯಾ ಮತ್ತು ಅಮೆರಿಕ ನಡುವೆ ಉದ್ವಿಗ್ನತೆಗಳು ಹೆಚ್ಚಾಗಿದ್ದವು. ಇಂದಿರಾ ಗಾಂಧಿ ರಷ್ಯಾ ಜೊತೆ ಸ್ನೇಹ ಸಂಬಂಧಕ್ಕೆ ಸಹಿ ಹಾಕಿದ್ದರು. ಆದುದರಿಂದ ಅಮೆರಿಕ ಪಾಕಿಸ್ತಾನದ ಪರವಾಗಿತ್ತು. ಬಾಂಗ್ಲಾಕ್ಕೆ ಸಹಕಾರ ನೀಡುವ ಭಾರತದ ನೀತಿಯನ್ನು ಅಮೆರಿಕ ವಿರೋಧಿಸಿತು. ಆದರೆ, ಇಂದಿರಾ ಗಾಂಧಿ ಅವರು ಧೈರ್ಯವಾಗಿ ಮುನ್ನುಗ್ಗಿದರು. ಬಾಂಗ್ಲಾ ವಿಮೋಚನೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭವಾಯಿತು.
1971ರ ಡಿಸೆಂಬರ್ 3ರಂದು ‘ಆಪರೇಶನ್ ಚಾಂಗಿಸ್ ಖಾನ್’ ಹೆಸರಿನಲ್ಲಿ ಪಾಕಿಸ್ತಾನ ಭಾರತದ 8 ವಾಯುನೆಲೆಗಳ ಮೇಲೆ ದಾಳಿ ನಡೆಸಿತು. ಭಾರತ ಪ್ರತಿದಾಳಿಗೆ ಮುಂದಾಯಿತು. ವಾಯುಸೇನೆ, ನೌಕಾ ದಳ ಮತ್ತು ಭೂಸೇನೆಗಳು ಕಾರ್ಯಪ್ರವೃತ್ತವಾದವು. ಡಿಸೆಂಬರ್ 6ರಂದು ಭಾರತೀಯ ಸೇನೆ ಜೆಸ್ಸೋರ್ ಎಂಬ ನಗರವನ್ನು ಸ್ವತಂತ್ರಗೊಳಿಸಿತು. ಭಾರತದ ದಾಳಿಗೆ ನಲುಗಿದ ಪಾಕಿಸ್ತಾನ ಸೋತು ಸುಣ್ಣವಾಯಿತು. ಡಿಸೆಂಬರ್ 16ರಂದು ಪಾಕ್ ಸೇನೆಯು ಭಾರತೀಯ ಸೇನೆಗೆ ಶರಣಾಯಿತು. ಭಾರತದ ಲೆಫ್ಟಿನಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಸಮ್ಮುಖದಲ್ಲಿ ಪಾಕ್ ಲೆಫ್ಟಿನಂಟ್ ಜನರಲ್ ಎ. ಎ.ಕೆ. ನಿಯಾಜಿ ಅವರು ಶರಣಾಗತಿ ಒಪ್ಪಂದಕ್ಕೆ (instrument of surrender) ಸಹಿ ಹಾಕಿದರು. ಇದು ಸ್ವತಂತ್ರ ಭಾರತದ ಪ್ರಥಮ ನಿರ್ಣಾಯಕ ವಿಜಯವಾಗಿತ್ತು ಮತ್ತು ಶರಣಾಗತಿ ಪತ್ರ ಬರೆಸಿಕೊಂಡ ಮೊದಲ ಪ್ರಸಂಗವಾಗಿತ್ತು.
ಭಾರತವು ಪಾಕ್ ಸೇನೆಯ ಸುಮಾರು 90,000 ಸೈನಿಕರನ್ನು ಯುದ್ಧ ಕೈದಿಗಳೆಂದು ವಶಕ್ಕೆ ಪಡೆದಿತ್ತು. ಎರಡನೇ ವಿಶ್ವಯುದ್ಧದ ನಂತರದಲ್ಲಿ ಇಷ್ಟು ಸಂಖ್ಯೆಯ ಸೈನಿಕರನ್ನು ವಶಕ್ಕೆ ಪಡೆದ ದಾಖಲೆ ಇದಾಗಿತ್ತು ಎಂಬುದು ಭಾರತದ ಸೇನೆಯ ಪರಾಕ್ರಮಕ್ಕೆ ಸಾಕ್ಷಿ. ಈ ವಿಜಯಕ್ಕಾಗಿ ನಮ್ಮ ಸುಮಾರು 4,000 ವೀರಯೋಧರ ಬಲಿದಾನ ಆಯಿತು. ಸುಮಾರು 12,000 ಸೈನಿಕರು ಗಾಯಗೊಂಡರು. ಪಾಕ್ ಕಡೆ 9,000 ಸೈನಿಕರು ಹತರಾದರೆ 25,000 ಮಂದಿ ಗಾಯಗೊಂಡರು. ಈ ಸಮರವು ಬಾಂಗ್ಲಾದೇಶದ ಉದಯವನ್ನು ಅಧಿಕೃತವಾಗಿ ಘೊಷಿಸಿತು. ಭಾರತದ ಜಯವನ್ನು ನೆನೆಯುವ ಸಲುವಾಗಿ ಡಿಸೆಂಬರ್ 16ನ್ನು ‘ವಿಜಯ ದಿವಸ’ ಎಂದು ಆಚರಿಸಲಾಗುತ್ತದೆ.
ಭಾರತದ ಸಹಕಾರವಿಲ್ಲದೇ ಬಾಂಗ್ಲಾದೇಶ ಸ್ವತಂತ್ರ ದೇಶವಾಗುತ್ತಿರಲಿಲ್ಲ. ಭಾರತದ ಸಹಕಾರಕ್ಕೆ ಅದು ಎಂದಿಗೂ ಋಣಿಯಾಗಿರಬೇಕು. ಆದರೆ ಬಾಂಗ್ಲಾದೇಶ ಇವತ್ತು ಭಾರತಕ್ಕೆ ಮಗ್ಗುಲ ಮುಳ್ಳಾಗಿ ಕಾಡುತ್ತಿದೆ. 2024ರ ಆಗಸ್ಟ್ 5ರಂದು ಪ್ರಧಾನಿ ಶೇಖ್ ಹಸೀನಾ ದೇಶ ತೊರೆದು ಮಹಮ್ಮದ್ ಯುನಸ್ ನೇತೃತ್ವದ ಹಂಗಾಮಿ ಸರ್ಕಾರ ರಚನೆಯಾದ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ವ್ಯಾಪಕ ಹಿಂಸಾಚಾರಗಳು ನಡೆದಿವೆ, ನಡೆಯುತ್ತಿವೆ. ತಮ್ಮ ದೇಶದ ಸೃಷ್ಟಿಗೆ ಕಾರಣರಾದ ಶೇಖ್ ಮುಜಿಬುರ್ ರೆಹಮಾನರ ಸ್ಮಾರಕಗಳನ್ನು ಅಲ್ಲಿನ ಜನ ಧ್ವಂಸಗೊಳಿಸಿದ್ದಾರೆ.
ಶ್ರೀಕೃಷ್ಣನ ಸಂದೇಶಗಳನ್ನು ಜಗತ್ತಿಗೆ ಸಾರಲು ಕಟಿಬದ್ಧರಾಗಿ ನಿಂತಿರುವ ಇಸ್ಕಾನ್ ಸಂಸ್ಥೆಯ ಮೇಲೆ, ಅಲ್ಲಿನ ಸನ್ಯಾಸಿಗಳ ಮೇಲೆ ದಂಗೆಕೋರರು ಮುಗಿಬಿದ್ದಿದ್ದಾರೆ. ‘ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸಿ’ ಎಂದು ಭಾರತ ಆಗ್ರಹಿಸಿದರೂ ಅಲ್ಲಿನ ಸರ್ಕಾರ ಸುಮ್ಮನಾಗಿದೆ. ಭಾರತ ಬಾಂಗ್ಲಾದ ಹುಟ್ಟಿನಿಂದ ಹಿಡಿದು ಅದರ ಸರ್ವತೋಮುಖ ಅಭಿವೃದ್ಧಿಗೆ ತನ್ನ ಸಂಪೂರ್ಣ ಸಹಕಾರವನ್ನು ಕಳೆದ ಐದು ದಶಕಗಳಿಂದ ನೀಡುತ್ತ ಬಂದಿದ್ದರೂ ಬಾಂಗ್ಲಾ ಕೃತಘ್ನ ನೀತಿ ಅನುಸರಿಸುತ್ತಿರವುದು ಖೇದಕರ ಸಂಗತಿ.