

ಮೊಬೈಲ್ಫೋನ್ ಮೂಲಕ ತ್ವರಿತಗತಿಯಲ್ಲಿ ಹಾಗೂ ಉಚಿತವಾಗಿ ಹಣ ವರ್ಗಾಯಿಸಬಹುದಾದ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುಪಿಐ (ಯುನಿಫೈಡ್ ಪೇಮೆಂಟ್ ಸಿಸ್ಟಂ) ಭಾರತದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ಸಿಂಗಾಪುರ ದೇಶದಲ್ಲಿ ವಿಶಿಷ್ಟ ಒಪ್ಪಂದದೊಂದಿಗೆ ತನ್ನ ಜಾಲವನ್ನು ವಿಸ್ತರಿಸಿಕೊಂಡಿದೆ. ಯುಪಿಐ ಹಾಗೂ ಸಿಂಗಾಪುರದಲ್ಲಿನ ‘ಪೇ ನೌ’ ಜತೆಗೂಡಿ ಕಾರ್ಯನಿರ್ವಹಿಸಲು ಒಪ್ಪಂದ ಮಾಡಿಕೊಂಡಿದ್ದು, ಉಭಯ ದೇಶಗಳಲ್ಲಿನ ನಾಗರಿಕರಿಗೆ ಅದರಲ್ಲೂ ಸಿಂಗಪುರದಲ್ಲಿರುವ ಭಾರತದ ವಲಸೆ ಕಾರ್ವಿುಕ, ವಿದ್ಯಾರ್ಥಿ ಸಮುದಾಯಕ್ಕೆ ಈ ಬೆಳವಣಿಗೆ ಅನುಕೂಲಕರವಾಗಿ ಪರಿಣಮಿಸಲಿದೆ. 2016ರ ಏಪ್ರಿಲ್ 11ರಂದು ಭಾರತದಲ್ಲಿ ಜಾರಿಗೊಳಿಸಲಾದ ಯುಪಿಐ ವ್ಯವಸ್ಥೆಯು ಭಾರತ್ಪೇ, ಫೋನ್ಪೇ, ಗೂಗಲ್ಪೇ, ಪೇಟಿಎಂ ಮುಂತಾದ ಆಪ್ಗಳ ಮೂಲಕ ತ್ವರಿತ ಡಿಜಿಟಲ್ ಪಾವತಿಗಳಿಗೆ ಅವಕಾಶ ಮಾಡಿಕೊಟ್ಟಿದೆ.
ಭಾರತದಲ್ಲಿ ಈಗ ಬಹುತೇಕ ಡಿಜಿಟಲ್ ಪಾವತಿಗಳು ಯುಪಿಐ ಮೂಲಕವೇ ನಡೆಯುತ್ತವೆ. 2022ನೇ ವರ್ಷದಲ್ಲಿ ಯುಪಿಐ ಮೂಲಕ 74 ಶತಕೋಟಿ ವಹಿವಾಟುಗಳು ನಡೆದಿದ್ದು, ಇದರ ಮೊತ್ತ 125.94 ಲಕ್ಷ ಕೋಟಿ ರೂಪಾಯಿ ಆಗಿದೆ. ಒಂದು ವರ್ಷದಲ್ಲಿ ನಡೆದಿರುವ ಈ ಬೃಹತ್ ವಹಿವಾಟು ಈ ವ್ಯವಸ್ಥೆಯ ಮೇಲೆ ಜನರಿಗಿರುವ ನಂಬಿಕೆ ಮತ್ತು ಯಶಸ್ಸನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತದೆ. ಭಾರತದಲ್ಲಿ ಯಶಸ್ಸು ಸಾಧಿಸಿದ ನಂತರ ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರಿಗೂ (ಎನ್ಆರ್ಐ) ಇದನ್ನು ವಿಸ್ತರಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ಮುಂದಾಯಿತು. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಮೊಬೈಲ್ಫೋನ್ ಮೂಲಕ ಹಣ ಪಾವತಿಸುವ ಯುಪಿಐ ಬಳಸಲು ಎನ್ಆರ್ಐಗಳಿಗೆ ಕಳೆದ ಜನವರಿ 10ರಂದು ಅನುಮತಿ ನೀಡಿತು. ಮೊದಲ ಹಂತದಲ್ಲಿ ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ, ಹಾಂಕಾಂಗ್, ಓಮನ್, ಕತಾರ್, ಅಮೆರಿಕ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬ್ರಿಟನ್ ಸೇರಿದಂತೆ 10 ದೇಶಗಳ ಫೋನ್ ಸಂಖ್ಯೆಗಳನ್ನು ಯುಪಿಐನಲ್ಲಿ ಬಳಸಲು ಅನುಮತಿಸಲಾಗಿದ್ದು, ಮುಂದಿನ ಹಂತದಲ್ಲಿ ಇತರ ರಾಷ್ಟ್ರಗಳಿಗೂ ವಿಸ್ತರಿಸಲು ಉದ್ದೇಶಿಸಲಾಗಿದೆ.
ಭಾರತದ ಯುಪಿಐ ರೀತಿಯಲ್ಲಿ ಸಿಂಗಾಪುರದಲ್ಲಿ ಪೇ ನೌ ಡಿಜಿಟಲ್ ಪಾವತಿ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ. ಈಗ ಈ ಎರಡೂ ಪಾವತಿ ವ್ಯವಸ್ಥೆಗಳು ಜತೆಗೂಡಿ ಕಾರ್ಯನಿರ್ವಹಿಸಲು ಮುಂದಾಗಿರುವುದು ಉಭಯ ದೇಶಗಳ ಜನರ ನಡುವೆ ಹಣ ವರ್ಗಾವಣೆಯನ್ನು ತ್ವರಿತ ಹಾಗೂ ಸುಲಭ ಪ್ರಕ್ರಿಯೆಯನ್ನಾಗಿಸಲಿದೆ. ಸಾಗರೋತ್ತರ ಚಿಲ್ಲರೆ ಪಾವತಿಗಳು ಸಾಮಾನ್ಯವಾಗಿ ಕಡಿಮೆ ಪಾರದರ್ಶಕ ಮತ್ತು ದೇಶೀಯ ವಹಿವಾಟುಗಳಿಗಿಂತ ಹೆಚ್ಚು ದುಬಾರಿಯಾಗಿರುತ್ತವೆ ಆದರೀಗ ಯುಪಿಐ ಮತ್ತು ಪೇ ನೌ ನಡುವಿನ ಬೆಸುಗೆಯು ಉಭಯ ದೇಶಗಳ ನಡುವೆ ಅಗ್ಗದ ದರದಲ್ಲಿ ಹಾಗೂ ಪಾರದರ್ಶಕವಾಗಿ ಹಣ ರವಾನೆ ವ್ಯವಸ್ಥೆ ರೂಪಿಸುವಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ. ಸಿಂಗಾಪುರದಲ್ಲಿ 7 ಲಕ್ಷಕ್ಕೂ ಅಧಿಕ ಭಾರತೀಯರು ವಾಸಿಸುತ್ತಿದ್ದು, ಅವರು ಭಾರತದಲ್ಲಿನ ತಮ್ಮ ಕುಟುಂಬ ಸದಸ್ಯರಿಗೆ ಹಣ ಕಳುಹಿಸುವುದು ಹಾಗೂ ಪಡೆದುಕೊಳ್ಳುವುದು ಈಗ ಚಿಟಿಕೆ ಹೊಡೆದಷ್ಟೇ ಸುಲಭವಾಗುತ್ತದೆ. ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟಿಗೆ ತ್ವರಿತ ಹಣ ವರ್ಗಾವಣೆಗೂ ಇದು ಅನುಕೂಲಕರವಾಗಿ ಪರಿಣಮಿಸಲಿದೆ.