

ನವದೆಹಲಿ; ಬರುವ ಡಿಸೆಂಬರ್ ಒಳಗೆ ದೇಶದ ಎಲ್ಲ ನಾಗರಿಕರಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇಂದು ಹೇಳಿದ್ದಾರೆ. ಅವರು ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು.
ಡಿಸೆಂಬರ್ 2021 ರ ಒಳಗಾಗಿ 216 ಕೋಟಿ ಡೋಸ್ ಲಸಿಕೆ ಉತ್ಪಾದನೆ ಗುರಿ ಪೂರ್ಣಗೊಳ್ಳಲಿದೆ. ಅಂದರೆ 108 ಕೋಟಿ ಜನರಿಗೆ ಭಾರತದಲ್ಲಿ ಲಸಿಕೆ ನೀಡಬಹುದು. ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ಪ್ರಕಾಶ್ ಜಾವಡೇಕರ್ ಹೇಳಿದರು. ಆರೋಗ್ಯ ಇಲಾಖೆ ಕೂಡ ಡಿಸೆಂಬರ್ ಒಳಗೆ ಲಸಿಕೆ ಗುರಿ ಪೂರ್ಣಗೊಳ್ಳಬಹುದು ಎಂದು ಹೇಳಿತ್ತು. ಇದೀಗ ಪ್ರಕಾಶ್ ಜಾವಡೇಕರ್ ಅದನ್ನು ಅಧಿಕೃತಗೊಳಿಸಿದ್ದಾರೆ.
ಇನ್ನು ಕೋವಿಡ್ ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಟಕ ಮಾಡುತ್ತಿದ್ದಾರೆ ಎಂದು ಹೇಳಿರುವ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಪ್ರಕಾಶ್ ಜಾವಡೇಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಾಹುಲ್ ಗಾಂಧಿಗೆ ಯಾವಾಗ ಗಂಭೀರತೆ ಅರ್ಥವಾಗುತ್ತೋ, ಅವರು ಚೈಲ್ಡಿಶ್ ಹೇಳಿಕೆಗಳನ್ನು ನೀಡುವುದು ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಶೇ 3. ರಷ್ಟು ಜನಕ್ಕೆ ಇನ್ನೂ ವ್ಯಾಕ್ಸಿನ್ ಸಿಕ್ಕಿಲ್ಲ. ಭವಿಷ್ಯದ ಬಗ್ಗೆ ಯೋಚಿಸದೇ ಬೇರೆ ದೇಶಗಳಿಗೆ ಲಸಿಕೆ ಕೊಟ್ಟು ಜಂಭ ಕೊಚ್ಚಿಕೊಂಡಿದ್ದೇ ಮೋದಿ ಸಾಧನೆ ಎಂಬಂತಾಯಿತು. ಅಸಲಿಗೆ ದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ ಇಗಿರುವ ಸಂಖ್ಯೆಗಿಂತ ನಾಲ್ಕು ಪಟ್ಟು ಅಧಿಕ ಇದೆ. ಸಾವಿನ ಪ್ರಮಾಣವನ್ನು ಮುಚ್ಚಿಟ್ಟು ಮೋದಿ ರಾಜಕೀಯ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.