

ನವದೆಹಲಿ: ಲಡಾಖ್ನ ಪೂರ್ವಭಾಗದ ವಾಸ್ತವ ಗಡಿರೇಖೆ ಬಳಿಯ ಬಹುತೇಕ ಕಡೆಗಳಿಂದ ತನ್ನ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಂಡಿರುವುದಾಗಿ ಚೀನಾ ಹೇಳುತ್ತಿದೆ. ಆದರೆ, ಅಲ್ಲಿನ ಪರಿಸ್ಥಿತಿ 2020ರ ಏಪ್ರಿಲ್ನಲ್ಲಿ ಯಥಾಸ್ಥಿತಿಗೆ ಮರಳುವಂತೆ ಮಾಡುವ ಭಾರತದ ಪ್ರಯತ್ನ ಹೆಚ್ಚಿನ ಫಲ ನೀಡಿಲ್ಲ. ಇದರಿಂದಾಗಿ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಈ ಕಾರಣಕ್ಕಾಗಿ ಭಾರತ 35 ಸಾವಿರ ಹೆಚ್ಚುವರಿ ಯೋಧರನ್ನು ಲಡಾಖ್ ಪ್ರದೇಶದಲ್ಲಿನ ವಾಸ್ತವ ಗಡಿರೇಖೆ ಬಳಿಗೆ ರವಾನಿಸಿದೆ.
ಭಾರತದ ಈ ಕ್ರಮದಿಂದಾಗಿ 3,488 ಕಿ.ಮೀ. ಉದ್ದವಿರುವ ವಾಸ್ತವ ಗಡಿರೇಖೆ ಬಳಿಯ ಪರಿಸ್ಥಿತಿಯಲ್ಲಿ ಭಾರಿ ಬದಲಾವಣೆ ಉಂಟು ಮಾಡಲಿದೆ. ರಾಷ್ಟ್ರದ ಮಿಲಿಟರಿ ವೆಚ್ಚದ ಮೇಲೆ ತೀವ್ರ ಒತ್ತಡ ಇದ್ದು, ಅದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಉನ್ನತ ಮಟ್ಟದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಜೂ.15ರಂದು ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ರಕ್ತಸಿಕ್ತ ಘರ್ಷಣೆ ನಡೆದಿತ್ತು. ಈ ಘಟನೆಯಲ್ಲಿ ಭಾರತದ 20 ಯೋಧರು ವೀರಮರಣ ಹೊಂದಿದ್ದರು. ಅಂದಿನಿಂದ ಇಂದಿನವರೆಗೂ ಈ ಭಾರತದಲ್ಲಿ ಉಭಯ ರಾಷ್ಟ್ರಗಳು ಹೆಚ್ಚುವರಿ ಸೇನೆಯನ್ನು ನಿಯೋಜಿಸಿವೆ. ಅರ್ಟಿಲರಿ ಗನ್ ಮತ್ತು ಟ್ಯಾಂಕ್ಗಳು ಕೂಡ ಆ ಪ್ರದೇಶದಲ್ಲಿ ನೆಲೆಗೊಂಡಿವೆ. ಭಾರತ ಮತ್ತು ಚೀನಾ ನಡುವಿನ ಗಡಿಒಪ್ಪಂದಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ವಿಫಲವಾಗಿರುವುದು ಹೆಚ್ಚುವರಿ ಯೋಧರ ನಿಯೋಜನೆಗೆ ಕಾರಣವಾಗಿದೆ.
ವಾಸ್ತವ ಗಡಿರೇಖೆಯ ಪರಿಕಲ್ಪನೆಯೇ ಬದಲಾಗಿದೆ. ಅದರಲ್ಲೂ ವಿಶೇಷವಾಗಿ ಲಡಾಖ್ ಪ್ರದೇಶದಲ್ಲಿ ಇದು ಮೇಲ್ನೋಟಕ್ಕೇ ಕಾಣುತ್ತಿದೆ. ಈ ಪ್ರದೇಶಕ್ಕೆ ಉಭಯ ರಾಷ್ಟ್ರಗಳು ಹೆಚ್ಚುವರಿ ಯೋಧರನ್ನು ನಿಯೋಜಿಸುತ್ತಿವೆ. ಇದನ್ನು ಗಮನಿಸಿದಾಗ ತಮ್ಮ ನಿಲುವನ್ನು ಬದಲಿಸಿಕೊಳ್ಳಲು ಉಭಯ ರಾಷ್ಟ್ರಗಳು ಸಿದ್ಧವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ, ರಾಜಕೀಯ ಮುಖಂಡರ ಮಾತುಕತೆ ಹೊರತಾಗಿ ಯೋಧರು ಹಿಂದೆಸರಿಯುವಂತೆ ಕಾಣುತ್ತಿಲ್ಲ ಎಂದು ದೆಹಲಿ ಮೂಲದ ದ ಯುನೈಟೆಡ್ ಸರ್ವಿಸ್ ಇನ್ಸ್ಟಿಟ್ಯೂಷನ್ ಆಫ್ ಇಂಡಿಯಾದ ತಜ್ಞ ಮತ್ತು ನಿವೃತ್ತ ಮೇಜರ್ ಜನರಲ್ ಬಿ.ಕೆ. ಶರ್ಮ ಅಭಿಪ್ರಾಯಪಟ್ಟಿದ್ದಾರೆ.
ಹಲವು ಸುತ್ತಿನ ಮಿಲಿಟರಿ ಮಾತುಕತೆ ಬಳಿಕ ಗಲ್ವಾನ್ ಕಣಿವೆಯಲ್ಲಿ ಸದ್ಯಕ್ಕೆ ಘರ್ಷಣೆಗಳು ನಿಂತಿವೆ. ಬಹುತೇಕ ವಿವಾದಾತ್ಮಕ ಪ್ರದೇಶಗಳಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡಿರುವುದಾಗಿ ಚೀನಾ ಹೇಳುತ್ತಿದೆ. ಆದರೆ, ಇದನ್ನು ನಂಬುವುದು ತುಸು ಕಷ್ಟದ ಸಂಗತಿ ಎನ್ನಲಾಗುತ್ತಿದೆ.