ಭಾರತದ ಉತ್ಪನ್ನಗಳ ರಫ್ತಿಗೆ ನಮ್ಮ ಮಾರುಕಟ್ಟೆ ಮುಕ್ತವಾಗಿದೆ ಎಂದ ರಷ್ಯಾ ಉಸ್ತುವಾರಿ ಚಾರ್ಜ್! | India-Russia

India-Russia
Published on

India-Russia: ಭಾರತ-ರಷ್ಯಾ ನಡುವಿನ ಸಂಬಂಧಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತಿವೆ ಎಂದು ರಷ್ಯಾದ ಉಸ್ತುವಾರಿ ಚಾರ್ಜ್ ಡಿ'ಅಫೇರ್ಸ್ ರೋಮನ್ ಬಾಬುಷ್ಕಿನ್ ಬುಧವಾರ (ಆಗಸ್ಟ್​​ 20) ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಾರ್ಜ್, ಭಾರತವು ತನ್ನ ಉತ್ಪನ್ನಗಳನ್ನು ರಷ್ಯಾಕ್ಕೆ ರಫ್ತು ಮಾಡಲು ರಷ್ಯಾದ ಮಾರುಕಟ್ಟೆಗಳು ಮುಕ್ತವಾಗಿವೆ ಎಂದರು. ಬಾಬುಷ್ಕಿನ್ ತಮ್ಮ ಮಾತುಗಳನ್ನು ಹಿಂದಿಯಲ್ಲಿ ಪ್ರಾರಂಭಿಸುವ ಮೂಲಕ, ಭಾರತ-ರಷ್ಯಾ ಸಂಬಂಧಗಳ ಅನೋನ್ಯತೆಯನ್ನು ಪ್ರದಶಿರ್ಸಿದರು.

ಭಾರತದ ಮೇಲೆ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವಂತೆ ಅಮೆರಿಕದ ನಿರಂತರ ಒತ್ತಡವನ್ನು "ನ್ಯಾಯಸಮ್ಮತವಲ್ಲ" ಎಂದಿರುವ ರಷ್ಯಾ ಉಸ್ತುವಾರಿ, ಅಂತಹ ವಿಧಾನ ಮತ್ತು ನಿರ್ಬಂಧಗಳು ಜಾಗತಿಕ ಆರ್ಥಿಕ ಸ್ಥಿರತೆ ಮತ್ತು ಇಂಧನ ಭದ್ರತೆಗೆ ಹಾನಿಕಾರಕ ಎಂದು ಹೇಳಿದರು. ಇದು ಭಾರತಕ್ಕೆ ಸವಾಲಿನ ಪರಿಸ್ಥಿತಿ. ಭಾರತದೊಂದಿಗಿನ ನಮ್ಮ ಪಾಲುದಾರಿಕೆಯಲ್ಲಿ ಸಂಪೂರ್ಣ ನಂಬಿಕೆ ಇದ್ದು, ಎರಡು ದೇಶಗಳ ನಡುವಿನ ಇಂಧನ ಸಂಬಂಧಗಳಲ್ಲಿ ಎದುರಾಗಬಹುದಾದ ಸವಾಲುಗಳನ್ನು ಎದುರಿಸಲು ಉಭಯ ರಾಷ್ಟ್ರಗಳು ಸಿದ್ಧವಾಗಿವೆ ಎಂದರು.

ರಷ್ಯಾದ ಮಾರುಕಟ್ಟೆ ಭಾರತೀಯ ವಸ್ತುಗಳಿಗೆ ಮುಕ್ತ

ಟ್ರಂಪ್ ಸುಂಕಗಳ ನಡುವೆಯೂ ರಷ್ಯಾದ ಮಾರುಕಟ್ಟೆಗಳು ಭಾರತೀಯ ರಫ್ತಿಗೆ ಮುಕ್ತವಾಗಿವೆ ಎಂದು ರಷ್ಯಾದ ರಾಜತಾಂತ್ರಿಕರಾದ ಚಾರ್ಜ್ ತಮ್ಮ ಹೇಳಿಕೆಯಲ್ಲಿ ಘೋಷಿಸಿದ್ದಾರೆ. ಭಾರತೀಯ ಸರಕುಗಳು ಯುಎಸ್ ಮಾರುಕಟ್ಟೆಗೆ ಹೋಗಲು ಸಾಧ್ಯವಾಗದಿದ್ದರೆ, ಅವು ರಷ್ಯಾಕ್ಕೆ ಬರಬಹುದು ಎಂದು ಆಮಂತ್ರಣ ನೀಡಿದರು.

2024-25ರಲ್ಲಿ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ವ್ಯಾಪಾರವು ದಾಖಲೆಯ ಗರಿಷ್ಠ 68.7 ಶತಕೋಟಿ ಅಮೆರಿಕನ್ ಡಾಲರ್‌ಗಳನ್ನು ತಲುಪಿತ್ತು. ಭಾರತವು 4.88 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಿತ್ತು.

ನಿಮ್ಮನ್ನು ಟೀಕಿಸಿದರೆ ನೀವು ಸರಿಯಾದ ದಾರಿಯಲ್ಲಿದ್ದೀರಿ ಎಂದರ್ಥ

ಪಶ್ಚಿಮ ದೇಶಗಳು ನಿಮ್ಮನ್ನು ಟೀಕಿಸಿದರೆ, ನೀವು ಸರಿಯಾದ ದಾರಿಯಲ್ಲಿದ್ದೀರಿ ಎಂದು ಅರ್ಥ, ನಾವು ಹಲವು ವರ್ಷಗಳಿಂದ ನಿರ್ಬಂಧಗಳ ಸಮಸ್ಯೆಯನ್ನು ಎದುರಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ನಮ್ಮ ವ್ಯಾಪಾರವು 7 ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net