

ನವದೆಹಲಿ: ವಾಸ್ತವ ಗಡಿ ರೇಖೆಯುದ್ದಕ್ಕೂ ಅದರಲ್ಲೂ ವಿಶೇಷವಾಗಿ ಲೇಹ್ನಿಂದ ಲಡಾಖ್ವರೆಗಿನ ನಾಲ್ಕು ಕಡೆಗಳಲ್ಲಿ ಚೀನಿ ಯೋಧರು ಭಾರತೀಯ ಯೋಧರೊಂದಿಗೆ ತಿಕ್ಕಾಟ ನಡೆಸುತ್ತಿದ್ದಾರೆ. ಗಡಿರೇಖೆಗೆ ಸಮೀಪವಾಗಿ ಸಹಸ್ರಾರು ಟೆಂಟ್ಗಳನ್ನು ನೆಟ್ಟು ಯೋಧರ ಜಮಾವಣೆ ಮಾಡುತ್ತಿದೆ. ಜತೆಗೆ ಬಂಕರ್ಗಳನ್ನು ನಿರ್ಮಿಸುವ ಮೂಲಕ ಭಾರತದೊಂದಿಗೆ ದೀರ್ಘಕಾಲದವರೆಗೆ ತಿಕ್ಕಾಟ ಮುಂದುವರಿಸುವ ಇರಾದೆ ತೋರುತ್ತಿದೆ.
ಇದಕ್ಕೆ ಪ್ರತಿಯಾಗಿ ಭಾರತ ಕೂಡ ಗಡಿರೇಖೆಯ ಬಳಿಯ ಸೇನಾ ನಿಯೋಜನೆಯನ್ನು ಪ್ರಮಾಣವನ್ನು ಹೆಚ್ಚಿಸಿದೆ. ಬಂಕರ್ಗಳ ನಿರ್ಮಾಣಕ್ಕೂ ಮುಂದಾಗಿದೆ. ತನ್ಮೂಲಕ ದೀರ್ಘಕಾಲದ ತಿಕ್ಕಾಟಕ್ಕೆ ತಾನೂ ಸಿದ್ಧ ಎಂದು ಪರೋಕ್ಷವಾಗಿ ಚೀನಾಕ್ಕೆ ಎಚ್ಚರಿಕೆಯನ್ನೂ ರವಾನಿಸಿದೆ.
ಆದರೆ ಈ ತಿಕ್ಕಾಟಕ್ಕೆ ಕಾರಣ ಏನೆಂದು ಹುಡುಕುತ್ತಾ ಹೊರಟರೆ, ವಾಸ್ತವ ಗಡಿರೇಖೆ ಸಮೀಪದಲ್ಲಿ ಭಾರತ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಎಂಬ ಉತ್ತರ ದೊರೆಯುತ್ತದೆ. ಈ ಕಾಮಗಾರಿಗಳಿಂದಾಗಿ ತ್ವರಿತವಾಗಿ ಯೋಧರನ್ನು ವಾಸ್ತವ ಗಡಿರೇಖೆ ಬಳಿಗೆ ತಲುಪಿಸಲು ಭಾರತಕ್ಕೆ ಅನುಕೂಲವಾಗುತ್ತದೆ. ಇದು ಚೀನಿಯರ ಆತಂಕಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಅವರು ಪದೇಪದೆ ಭಾರತದ ಗಡಿಯೊಳಗೆ ಅತಿಕ್ರಮಣ ಮಾಡುವ ಮೂಲಕ ಬೆದರಿಸುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ. ಆದರೆ, ಚೀನಿಯರು ಅದೆಷ್ಟೇ ಅಡ್ಡಿಪಡಿಸಿದರೂ, ಒರಲಿ, ಎದೆಎದೆ ಬಡಿದುಕೊಂಡರೂ ತಾನು ಮಾತ್ರ ಯಾವುದಕ್ಕೂ ಜಗ್ಗುವುದಿಲ್ಲ. ಅಭಿವೃದ್ಧಿ ಕಾಮಗಾರಿಗಳನ್ನು ಇನ್ನಷ್ಟು ಚುರುಕುಗೊಳಿಸುವುದಾಗಿ ಭಾರತ ಸ್ಪಷ್ಟಪಡಿಸಿದೆ.
ಅತಿಎತ್ತರದ ಏರ್ಸ್ಟ್ರಿಪ್ ತಂದಿರುವ ನಡುಕ: ವಾಸ್ತವ ಗಡಿರೇಖೆಗೆ ಸಮೀಪವಾಗಿ ಗಲ್ವಾನ್ ಬಳಿ ಭಾರತ ಡಾರ್ಚುಕ್ನಿಂದ ದೌಲತಾ ಬೇಗ್ ಓಲ್ಡಿಗೆ ಶಯಾಕ್ ಮಾರ್ಗವಾಗಿ ರಸ್ತೆಯನ್ನು ನಿರ್ಮಿಸಿದೆ. ಈ ರಸ್ತೆಯನ್ನು ಏರ್ಸ್ಟ್ರಿಪ್ ಆಗಿಯೂ ಬಳಸುವ ರೀತಿಯಲ್ಲಿ ನಿರ್ಮಿಸಲಾಗಿದೆ. ಇದು ವಿಶ್ವದ ಅತಿಎತ್ತರದ ಏರ್ಸ್ಟ್ರಿಪ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದು, ಇಲ್ಲಿ ಸಿ-130 ಜೆ ಯುದ್ಧವಿಮಾನವನ್ನು ಸುಲಭವಾಗಿ ಇಳಿಸಬಹುದಾಗಿದೆ. 2019ರಲ್ಲಿ ನಿರ್ಮಾಣವಾಗಿರುವ ಈ ರಸ್ತೆ ಕರಾಕೊರಂ ಹೆದ್ದಾರಿಗೂ ಸುಲಭವಾಗಿ ಸಂಪರ್ಕ ಒದಗಿಸುತ್ತದೆ. ಇದು ಚೀನಿಯರ ಎದೆನಡುಕಕ್ಕೆ ಕಾರಣವಾಗಿದೆ.
ಗಡಿಭಾಗದಲ್ಲಿ ಚೀನಿಯರು ಆಗಾಗ ಉಪಟಳ ಕೊಡುತ್ತಿರುತ್ತಾರೆ. ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಲು ತಕ್ಷಣವೇ ಹೆಚ್ಚಿನ ಯೋಧರನ್ನು ವಾಸ್ತವ ಗಡಿರೇಖೆ ಬಳಿಗೆ ಸಾಗಿಸುವುದು ಅಗತ್ಯವಾಗಿರುತ್ತದೆ. ಇದಕ್ಕೆ ಈ ಏರ್ಸ್ಟ್ರಿಪ್ ಸಹಕರಿಸುತ್ತದೆ ಎಂದು ಭಾರತೀಯ ಸೇನಾಪಡೆ ಮೂಲಗಳು ಹೇಳಿವೆ.
ಚೀನಿಯರು ಕಳೆದ ನಾಲ್ಕು ವರ್ಷಗಳಿಂದ ವಾಸ್ತವ ಗಡಿರೇಖೆ ಬಳಿಯ ತಮ್ಮ ಪ್ರದೇಶದಲ್ಲಿ ಇಂಥ ಹಲವು ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಇದೀಗ ಭಾರತ ಈ ಕಾಮಗಾರಿಗಳಿಗೆ ಹೊಂದಿಕೊಳ್ಳುವ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ತಮ್ಮ ಭಾಗದಲ್ಲಿ ಕೈಗೊಳ್ಳುತ್ತಿದೆ. ಇದಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಚೀನಿಯರು ಗಡಿಭಾಗದಲ್ಲಿ ಪದೇಪದೆ ಗಡಿ ಅತಿಕ್ರಮಣ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಭಾರತ ಮಾತ್ರ ಇದಾವುದಕ್ಕೂ ಜಗ್ಗದೆ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನವನ್ನು ಮುಂದುವರಿಸುತ್ತಿದೆ.