

Safety Index : 2025ರ ಸುರಕ್ಷತಾ ಸೂಚ್ಯಂಕದಲ್ಲಿ ಭಾರತವು ಅಮೆರಿಕ ಮತ್ತು ಯುಕೆಯನ್ನು ಹಿಂದಿಕ್ಕಿದೆ. ಇವುಗಳನ್ನು ಸಾಮಾನ್ಯವಾಗಿ ಸುರಕ್ಷಿತ, ಅಭಿವೃದ್ಧಿ ಹೊಂದಿದ ಪ್ರಜಾಪ್ರಭುತ್ವ ದೇಶಗಳೆಂದು ಪರಿಗಣಿಸಲಾಗುತ್ತದೆ.
ಮಂಗಳವಾರ(ಜು.22)ರಂದು ಬಿಡುಗಡೆಗೊಂಡ ಜಾಗತಿಕ ಸುರಕ್ಷತಾ ಸೂಚ್ಯಂಕದಲ್ಲಿ 147 ದೇಶಗಳ ಪಟ್ಟಿಯಲ್ಲಿ ಭಾರತ 55.7 ಅಂಕಗಳೊಂದಿಗೆ 66ನೇ ಸ್ಥಾನ ಪಡೆದಿದೆ. ಆ ಮೂಲಕ ಅಮೆರಿಕ ಹಾಗೂ ಯುಕೆಯನ್ನು ಹಿಂದಿಕ್ಕಿದೆ.
ಯುನೈಟೆಡ್ ಕಿಂಗ್ಡಮ್ (87 ನೇ, 51.7) ಮತ್ತು ಯುನೈಟೆಡ್ ಸ್ಟೇಟ್ಸ್ (89 ನೇ, 50.8) ಗಳನ್ನು ಪಡೆದುಕೊಂಡಿವೆ. ಈ ಸೂಚ್ಯಂಕದಲ್ಲಿ ಚೀನಾ ಏಷ್ಯಾದ ಅತ್ಯಂತ ಸುರಕ್ಷಿತ ದೇಶವಾಗಿ ಹೊರಹೊಮ್ಮಿದೆ. ಜಾಗತಿಕವಾಗಿ ಚೀನಾವು 76.00 ಸುರಕ್ಷತಾ ಅಂಕಗಳೊಂದಿಗೆ 15ನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಜತೆಗೆ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ 59ನೇ ಸ್ಥಾನದಲ್ಲಿದ್ದು, ಪಾಕಿಸ್ತಾನ 65ನೇ ಸ್ಥಾನ ಮತ್ತು ಬಾಂಗ್ಲಾದೇಶ 126ನೇಯ ಸ್ಥಾನದಲ್ಲಿದೆ.
ಈ ವರ್ಷದ ಜಾಗತಿಕ ಶ್ರೇಯಾಂಕದಲ್ಲಿ ಮುಂಚೂಣಿಯಲ್ಲಿರುವ ಯುರೋಪ್ನ ಪುಟ್ಟ ರಾಷ್ಟ್ರವಾದ ಅಂಡೋರಾ, 84.7 ಸುರಕ್ಷತಾ ಅಂಕಗಳೊಂದಿಗೆ "2025 ರ ವಿಶ್ವದ ಸುರಕ್ಷಿತ ದೇಶ" ಎಂಬ ಕಿರೀಟವನ್ನು ಪಡೆದುಕೊಂಡಿದೆ. ಫ್ರಾನ್ಸ್ ಮತ್ತು ಸ್ಪೇನ್ ನಡುವಿನ ಪೈರಿನೀಸ್ ಪರ್ವತಗಳಲ್ಲಿ ನೆಲೆಗೊಂಡಿರುವ ಅಂಡೋರಾ, ಅಸಾಧಾರಣವಾಗಿ ಕಡಿಮೆ ಅಪರಾಧ ಸಂಖ್ಯೆಗಳು ಮತ್ತು ಸಾರ್ವಜನಿಕ ಭದ್ರತೆಗಾಗಿ ಹೆಚ್ಚಿನ ಅಂಕಗಳನ್ನು ಗಳಿಸಿದೆ.
ಟಾಪ್ 10 ಸುರಕ್ಷಿತ ದೇಶಗಳು..
1. ಅಂಡೋರಾ - 84.7
2. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) - 84.5
3. ಕತಾರ್ - 84.2
4. ತೈವಾನ್ - 82.9
5. ಓಮನ್ - 81.7
6. ಐಲ್ ಆಫ್ ಮ್ಯಾನ್ (ಬ್ರಿಟಿಷ್ ಕ್ರೌನ್ ಅವಲಂಬನೆ) - 79.0
7. ಹಾಂಗ್ ಕಾಂಗ್ (ಚೀನಾ) - 78.5
8. ಅರ್ಮೇನಿಯಾ - 77.9
9. ಸಿಂಗಾಪುರ - 77.4
10. ಜಪಾನ್ - 77.1
ಶ್ರೇಯಾಂಕದ ಇನ್ನೊಂದು ತುದಿಯಲ್ಲಿ, ವೆನೆಜುವೆಲಾ ಅತ್ಯಂತ ಕಡಿಮೆ ಸುರಕ್ಷಿತ ದೇಶವೆಂದು ಹೆಸರಿಸಲ್ಪಟ್ಟಿದ್ದು, ಕೇವಲ 19.3 ಸುರಕ್ಷತಾ ಅಂಕಗಳನ್ನು ಗಳಿಸಿದೆ. ಸಂಘರ್ಷ, ರಾಜಕೀಯ ಪ್ರಕ್ಷುಬ್ಧತೆ ಮತ್ತು ಹೆಚ್ಚಿನ ಅಪರಾಧಗಳಿಂದ ಬಳಲುತ್ತಿರುವ ಅಫ್ಘಾನಿಸ್ತಾನ, ಸಿರಿಯಾದಂತಹ ದೇಶಗಳು ಕೆಳಗಿನ ಸ್ಥಾನಗಳನ್ನು ಪಡೆದಿವೆ.(ಏಜೆನ್ಸೀಸ್)