ಎಲ್​ಎಸಿಯಲ್ಲಿ ಭಾರತ ಅಲರ್ಟ್; ಟಿ-90 ಟ್ಯಾಂಕ್, ಅಪಾರ ಪ್ರಮಾಣದ ಯುದ್ಧ ಪರಿಕರಗಳ ನಿಯೋಜನೆ

page 9 3
Published on

ನವದೆಹಲಿ: ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್​ಎಸಿ)ಯಲ್ಲಿ ತಂಟೆ ಮುಂದುವರಿಸಿರುವ ಚೀನಾ ಯೋಧರಿಗೆ ಪ್ರತಿರೋಧ ಒಡ್ಡಲು ಭಾರತೀಯ ಸೇನೆ ಸಜ್ಜಾಗಿದೆ. ದೌಲತ್ ಬೇಗ್ ಓಲ್ಡಿ ಮತ್ತು ದೆಪ್ಸಾಂಗ್ ವಲಯದಲ್ಲಿ ಚೀನಾ ಸೇನೆ ಬಲಗೊಳ್ಳುತ್ತಿರುವುದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಟಿ-90(ಭೀಷ್ಮ) ಯುದ್ಧ ಟ್ಯಾಂಕ್​ಗಳನ್ನು ನಿಯೋಜಿಸುವ ಜತೆಗೆ ಅಪಾರ ಯುದ್ಧ ಪರಿಕರಗಳನ್ನು ಸನ್ನದ್ಧ ಸ್ಥಿತಿಯಲ್ಲಿಡುತ್ತಿರುವುದಾಗಿ ತಿಳಿದು ಬಂದಿದೆ. ಏಪ್ರಿಲ್ -ಮೇನಲ್ಲಿ ಚೀನಾ 17 ಸಾವಿರ ಸೈನಿಕರನ್ನು ದೆಪ್ಸಾಂಗ್ ಪ್ರದೇಶದಲ್ಲಿ ನಿಯೋಜಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಭಾರತ ಇದೀಗ ನೆಲೆ ಭದ್ರಪಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿದೆ. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿರುವುದಾಗಿ ಹಿರಿಯ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಖಾಸಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಚೀನಾ ತಂಡದ ಮಾತುಕತೆ: ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ವ್ಯಾಪ್ತಿಯ ಪ್ಯಾಂಗೊಂಗ್ ತ್ಸೊ ಸರೋವರದಿಂದ ಸೇನೆ ವಾಪಸ್ ಪಡೆಯುವುದು, ಚೀನಾ ಸರಹದ್ದಿನ ಸೂಕ್ಷ್ಮ ಪ್ರದೇಶಗಳಲ್ಲಿ ಸೇನಾಪಡೆಗಳನ್ನು ಹೆಚ್ಚಿಸುವುದೂ ಸೇರಿದಂತೆ ಹಲವು ಮಹತ್ವದ ವಿಚಾರವಾಗಿ ಭಾರತ- ಚೀನಾ ಮಿಲಿಟರಿ ಅಧಿಕಾರಿಗಳು ಭಾನುವಾರ ನಡೆದ 5ನೇ ಸುತ್ತಿನ ಮಾತುಕತೆಯಲ್ಲಿ ಸುಮಾರು 10 ತಾಸು ಚರ್ಚೆ ನಡೆಸಿರುವುದಾಗಿ ತಿಳಿದು ಬಂದಿದೆ. ಉಭಯ ರಾಷ್ಟ್ರಗಳು ಸಭೆಯ ಕುರಿತು ಮಾಹಿತಿ ಬಹಿರಂಪಡಿಸುವ ಮೊದಲೇ ಚೀನಾ ಅಧ್ಯಯನ ತಂಡವೊಂದು ಸಭೆಯ ಮಾಹಿತಿಯನ್ನು ನೀಡಿದೆ.

ಭಾರತದ ವಿರುದ್ಧ ಸೈಬರ್ ವಾರ್: ಲಡಾಖ್ ಚೀನಾ ಈಗ ತನ್ನ ಸೈಬರ್ ದಾಳಿಕೋರ ರನ್ನು ಭಾರತದ ವಿರುದ್ಧ ಸಮರಕ್ಕೆ ನಿಯೋಜಿಸಲು ಮುಂದಾಗಿದೆ. ಚೀನಾ ಸೇನೆಯ ರಹಸ್ಯ ಘಟಕದ ಹೊಸ ಸಂಚಿನ ಕುರಿತಂತೆ ಭಾರತದ ರಕ್ಷಣಾ ಮತ್ತು ಭದ್ರತಾ ಏಜೆನ್ಸಿಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಗುಪ್ತದಳದ ಮಾಹಿತಿ ಪ್ರಕಾರ, ಕಳೆದ ಕೆಲವು ತಿಂಗಳಿಂದ ಚೀನಾ ಸೇನೆಯ ಸೈಬರ್ ಘಟಕದಿಂದ ಇಂತಹ ಹಲವು ಪ್ರಯತ್ನಗಳು ಬೆಳಕಿಗೆ ಬಂದಿವೆ. ಚೀನಾ ಸೇನೆಯ ರಹಸ್ಯ ಘಟಕ-61398 ಭಾರತದ ವಿರುದ್ಧ ನಿರಂತರವಾಗಿ ಸೈಬರ್ ಸಮರ ಸಾರಿಕೊಂಡೇ ಬಂದಿದೆ. ವಿಶ್ವದ ಇತರ ರಾಷ್ಟ್ರಗಳಿಗೂ ಇದರ ಅನುಭವವಾಗಿದೆ. ಲಡಾಖ್ ಪ್ರಕರಣದ ಬಳಿಕ ಭಾರತವನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಆಸಕ್ತಿಯಿಂದ ಚೀನಾ ಈ ಕಾರ್ಯ ನಿರ್ವಹಿಸುತ್ತಿರುವುದಾಗಿ ಭಾರತೀಯ ಅಧಿಕಾರಿಯ ಹೇಳಿಕೆ ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net