ವಿಶ್ವಕ್ಕೆ ಭಾರತ, ದೇಶಕ್ಕೆ ಕರ್ನಾಟಕ ಮಾದರಿ; ಯಡಿಯೂರಪ್ಪ ಕರೊನಾ ನಿರ್ವಹಣೆ ಶ್ಲಾಘಿಸಿದ ಜೆ.ಪಿ.ನಡ್ಡಾ

PAge6- BSY
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಹೊಗಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕರೊನಾ ಸಂದರ್ಭದಲ್ಲಿ ತೆಗೆದುಕೊಂಡ ದಿಟ್ಟ ಕ್ರಮಗಳನ್ನು ಶ್ಲಾಘಿಸಿದ್ದು ರಾಜಕೀಯ ಮಹತ್ವ ಪಡೆದುಕೊಂಡಿದೆ.

ಬಿಜೆಪಿ ಜನಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಡ್ಡಾ, ದೆಹಲಿ, ಚೆನ್ನೈ, ಮುಂಬೈಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕರೋನಾ ಕೇಸ್ ಕಡಿಮೆ ಇದೆ. ಬಿಎಸ್​ವೈ ಟೀಮ್ ಅತ್ಯುತ್ತಮವಾಗಿ ಕೆಲಸ ಮಾಡಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಶಹಬ್ಬಾಸ್​ಗಿರಿ ನೀಡಿದರು.

ಕೃಷಿಕರು, ಸವಿತಾ ಸಮಾಜ, ಆಟೋರೀಕ್ಷಾ ಚಾಲಕರು ಸೇರಿ ದುರ್ಬಲ ವರ್ಗಕ್ಕೆ ರಾಜ್ಯದ ಆರ್ಥಿಕ ನೆರವು ಘೊಷಣೆ ಮಾದರಿ ಕಾರ್ಯವಾಗಿದೆ. ಟ್ರೇಸ್, ಟೆಸ್ಟ್, ಟ್ರಾಕ್, ಟ್ರಿಟ್ಮೆಂಟ್ ತಂತ್ರವನ್ನು ಕರ್ನಾಟಕದಲ್ಲಿ ಮಾಡಲಾಗಿದೆ. ಕಾರ್ವಿುಕರಿಗಾಗಿ ಸಹಾಯವಾಣಿ, ಡಿಜಿಟಲ್ ಮಾಧ್ಯಮ ಬಳಸಿಕೊಂಡು ಯಡಿಯೂರಪ್ಪ ಬಹಳ ಉತ್ತಮ ಕೆಲಸ ಮಾಡುವ ಮೂಲಕ ಮುಂದಿದ್ದಾರೆ ಎಂದರು.

ಜಗತ್ತಿನ ಮುಂದೆ ಭಾರತದ ಶಕ್ತಿ ಅನಾವರಣಗೊಂಡಿದೆ. ಆರು ವರ್ಷದ ಆಡಳಿತ ಭಾರತವನ್ನು ಸಶಕ್ತಗೊಳಿಸಿದೆ. ಕರೊನಾದಿಂದ ದೇಶವನ್ನು ಕಾಪಾಡಲು ನಾವು ಸಮರ್ಥರಾಗಿದ್ದೇವೆ ಎಂಬುದನ್ನು ಮೋದಿ ಜಗತ್ತಿಗೆ ಸಾರಿದ್ದಾರೆ ಎಂದ ನಡ್ಡಾ, ಕರೊನಾ ಬಂದ ಆರಂಭದಲ್ಲಿ 3 ದಿನಕ್ಕೆ ಸೋಂಕು ದ್ವಿಗುಣಗೊಳ್ಳುತ್ತಿತ್ತು. ಈಗ 14 ದಿನಕ್ಕೆ ದ್ವಿಗುಣವಾಗುತ್ತಿದೆ. ದೇಶಾದ್ಯಂತ 1 ಸಾವಿರ ಕೋವಿಡ್-19 ಆಸ್ಪತ್ರೆಗಳು ಸೇವೆ ಸಲ್ಲಿಸುತ್ತಿವೆ. ಮೊದಲು ಪ್ರತಿದಿನ ಕೇವಲ 1500 ಟೆಸ್ಟಿಂಗ್ ನಡೆಯುತ್ತಿದ್ದವು, ಈಗ 1.50 ಲಕ್ಷ ಟೆಸ್ಟಿಂಗ್ ಸಾಮರ್ಥ್ಯ ಇದೆ. 20 ಸಾವಿರ ಐಸೋಲೇಷನ್ ಬೆಡ್​ಗಳಿವೆ. ಸ್ವದೇಶಿ ಪಿಪಿಇ ಕಿಟ್ ತಯಾರಿಕೆಯಲ್ಲಿ ಮುಂದಿದ್ದೇವೆ ಎಂದು ವಿವರಿಸಿದರು.

ಲಾಲ್ ಬಹದ್ದೂರ್ ಶಾಸ್ತ್ರಿಯವರ ಮಾತನ್ನು ಇಡೀ ದೇಶ ಕೇಳುತ್ತಿತ್ತು, ಶಾಸ್ತ್ರಿಯವರ ಬಳಿಕ ಈಗ ಆ ಥರದ ಮತ್ತೊಬ್ಬ ನಾಯಕ ಅಂದ್ರೆ ಮೋದಿ. ಜನತಾ ಕರ್ಫ್ಯೂ ಕುರಿತ ಮೋದಿಯವರ ಕರೆಯನ್ನು ಇಡೀ ದೇಶ ಪಾಲಿಸಿತು ಎಂದರು.

ಸ್ವಾವಲಂಬಿ ಭಾರತದತ್ತ ಮೋದಿ ಚಿತ್ತ: ನರೇಂದ್ರ ಮೋದಿಯಿಂದ ವಿಶ್ವವೇ ಭಾರತದತ್ತ ನೋಡುತ್ತಿದೆ. ಬಲಿಷ್ಠ ಭಾರತದ ರೂವಾರಿ, ವಿಶ್ವದಲ್ಲೇ ಅಗ್ರಗಣ್ಯ ನಾಯಕ ಮೋದಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕೊಂಡಾಡಿದರು. ಬಿಜೆಪಿ ಜನ ಸಂವಾದ ರ‍್ಯಾಲಿ ಉದ್ಘಾಟಿಸಿ ಮಾತನಾಡಿ, ಕರೋನಾ ಹೋರಾಟದಲ್ಲಿ ವಿಶ್ವವೇ ಭಾರತವನ್ನು ಶ್ಲಾಘಿಸಿದೆ ಎಂದರು.. ತ್ರಿವಳಿ ತಲಾಕ್ ರದ್ದು, ರೈತರು ಕಾರ್ವಿುಕರಿಗೆ ಪಿಂಚಣಿ, ಆಯುಷ್ಮಾನ್ ಭಾರತ್ ಯೋಜನೆ, ಮೇಕ್ ಇನ್ ಇಂಡಿಯಾ ಘೊಷಣೆ ಮಾಡಿದ್ದು ಮೋದಿ ಸಾಧನೆ. ಆರೋಗ್ಯ, ಕೃಷಿ, ಶಿಕ್ಷಣ ಬಾಹ್ಯಾಕಾಶ ಸೇರಿ ಎಲ್ಲ ಕ್ಷೇತ್ರದಲ್ಲಿ ಭಾರತ ಸಾಧನೆ ಮಾಡಿದೆ. ಸ್ವಾವಲಂಬಿ ಭಾರತದ ರೂವಾರಿಯಾಗಿ ಮೋದಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ನುಡಿದಂತೆ ನಡೆದವನ ಮುಡಿಗೆನ್ನ ನಮನ ಎನ್ನುವ ಕವಿವಾಣಿ ಪ್ರಧಾನಿಗೆ ಅನ್ವಯವಾಗುತ್ತದೆ ಎಂದರು. ಕಾಶ್ಮೀರಕ್ಕೆ ಸ್ವಾತಂತ್ರ್ಯ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣ, 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೊಷಣೆ ಮೋದಿ ಸರ್ಕಾರದ ಸಾಧನೆ ಎಂದು ಬಣ್ಣಿಸಿದರು.

ಕರೋನಾ ಹೊಡೆತಕ್ಕೆ ಇಟಲಿ, ಅಮೇರಿಕ ದೇಶಗಳೇ ತತ್ತರಿಸಿದಾಗ ಭಾರತ ಹೋರಾಟ ಮಾಡಿ ಮಾದರಿ ಹೆಜ್ಜೆ ಇಟ್ಟಿದೆ. ರಾಜ್ಯದಲ್ಲಿ ಕರೋನಾ ತಡೆಗಟ್ಟುವಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಒಳ್ಳೆಯ ಕಾರ್ಯ ಮಾಡಿದೆ. ರಾಜ್ಯದ ಜನತೆಗೆ ಪ್ಯಾಕೇಜ್ ಘೊಷಣೆ ಮಾಡಿದ್ದು ಯಡಿಯೂರಪ್ಪ ಸರ್ಕಾರ ಮಾತ್ರ ಎಂದರು.

ಕಾಂಗ್ರೆಸ್ ವಿರುದ್ಧ ಜೆ.ಪಿ. ನಡ್ಡಾ ವಾಗ್ದಾಳಿ: ನಾವು ಬಹುತೇಕ ವಿಪಕ್ಷ ಸ್ಥಾನದಲ್ಲೇ ಕುಳಿತಿದ್ದೇವೆ. ದೇಶ ಸಂಕಷ್ಟದಲ್ಲಿದ್ದಾಗ ಯಾವತ್ತು ಕೊಳಕು ರಾಜಕೀಯ ಮಾಡಿಲ್ಲ ಎಂದ ಜೆ.ಪಿ.ನಡ್ಡಾ, ಕಾಂಗ್ರೆಸ್​ಗೆ ದೇಶದ ಬಗ್ಗೆ ಚಿಂತೆ ಇಲ್ಲ. ಅವರಿಗೆ ಕೇವಲ ರಾಜಕೀಯ... ರಾಜಕೀಯ... ರಾಜಕೀಯ ಎಂದು ಟೀಕಿಸಿದರು. ನಿಮ್ಮ ಕಾಲದಲ್ಲಿ ಪತ್ರಕರ್ತರು ಸೇರಿ ಬಹುತೇಕರು ಜೈಲಿನ ಕಂಬಿ ಹಿಂದಿದ್ದರು. ಈಗ ಅಸಹಿಷ್ಣುತೆ ಬಗ್ಗೆ ಮಾತನಾಡುತ್ತೀರಾ? ಪ್ರತಿಪಕ್ಷ ಹೇಗೆ ಇರಬೇಕು ಎಂದು ಗೊತ್ತಿಲ್ಲದಿದ್ದರೆ ನಮ್ಮಿಂದ ಕಲಿಯಲಿ ಎಂದು ಛೇಡಿಸಿದರು. ಆರು ವರ್ಷಗಳಲ್ಲಿ ಮೋದಿ ಜಾರಿಗೆ ತಂದ ಯೋಜನೆಗಳನ್ನು ಪಟ್ಟಿ ಮಾಡಿದ ನಡ್ಡಾ, ಇಷ್ಟು ಜನಪರ ಕೆಲಸವನ್ನು ಹಿಂದೆ ಅಧಿಕಾರದಲ್ಲಿದ್ದವರು ಯಾಕೆ ಮಾಡಲಿಲ್ಲ? ಮೋದಿಯಂತಹ ನಾಯಕತ್ವ, ಅಮಿಶ್ ಷಾ ಅವರಂಥ ರಣನೀತಿಗಾರ ಇದ್ದುದ್ದಕ್ಕೆ ಇದೆಲ್ಲವೂ ಸಾಧ್ಯವಾಯಿತು ಎಂದರು. ‘ನಮ್ಮ ಯಶಸ್ವಿ ಮುಖ್ಯಮಂತ್ರಿ, ಹಿರಿಯ ನೇತಾರ ಯಡಿಯೂರಪ್ಪನವರೇ’ ಎಂದು ಸಂಬೋಧಿಸಿದ ನಡ್ಡಾ, ಭಾಷಣದುದ್ದಕ್ಕೂ ಮೆಚ್ಚುಗೆ ಮಳೆಗರೆದರು.

58 ಸಾವಿರ ಬೂತ್​ಗಳಲ್ಲಿ ವೀಕ್ಷಣೆ ವ್ಯವಸ್ಥೆ: ವರ್ಚುಯಲ್ ರ್ಯಾಲಿಯಲ್ಲಿ ರಾಜ್ಯಾದ್ಯಂತ 58 ಸಾವಿರ ಬೂತ್​ಗಳಲ್ಲೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿ ಶಾಸಕರೆಲ್ಲ ತಂತಮ್ಮ ಕ್ಷೇತ್ರಗಳಲ್ಲೇ ಸಭೆಯಲ್ಲಿ ಪಾಲ್ಗೊಂಡರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ಸಚಿವರಾದ ಆರ್.ಅಶೋಕ್, ಗೋಪಾಲಯ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಪಕ್ಷದ ಕಚೇರಿಯಲ್ಲಿ ಹಾಜರಿದ್ದರು. ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ, ಸಚಿವರಾದ ಪ್ರಹ್ಲಾದ್ ಜೋಷಿ, ಸದಾನಂದಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net