ಶೀಘ್ರದಲ್ಲೇ ಭಾರತಕ್ಕೆ ಸ್ಟಾರ್​ಲಿಂಕ್​ ಎಂಟ್ರಿ: ಸರ್ಕಾರದ ಷರತ್ತುಗಳನ್ನು ಒಪ್ಪಿಕೊಂಡ ಎಲಾನ್​ ಮಸ್ಕ್​! Elon Musk ​

Elon Musk
Published on

Elon Musk: ರಿಮೋಟ್ ಏರಿಯಾಗಳಲ್ಲೂ ಇಂಟರ್ನೆಟ್​ ಸಿಗುವಂತೆ ಮಾಡುವ ಮೂಲಕ ಇಂಟರ್ನೆಟ್​ ಲೋಕದಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ವಿಶ್ವದ ನಂಬರ್​ ಒನ್​ ಶ್ರೀಮಂತ ಎಲಾನ್​ ಮಸ್ಕ್​ ಒಡೆತನದ ಸ್ಟಾರ್​ಲಿಂಕ್​ ಕಂಪನಿ ಇದೀಗ ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿದೆ.

ಭಾರತದಲ್ಲಿ‘ ಸ್ಯಾಟಲೈಟ್​ ಬ್ರಾಡ್​ಬ್ರ್ಯಾಂಡ್​ ಸರ್ವೀಸ್​ ಆರಂಭಿಸುವತ್ತ ಸ್ಟಾರ್​ಲಿಂಕ್​ ಕಂಪನಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಭಾರತ ಸರ್ಕಾರ ನಿಗದಿಪಡಿಸಿರುವ ಎಲ್ಲ ನಿಯಮಗಳನ್ನು ಒಪ್ಪಿಕೊಂಡಿರುವುದಾಗಿ​ ಕಂಪನಿಯು ತಿಳಿಸಿದ್ದು, ಭಾರತದಲ್ಲಿ ತನ್ನ ಕಾರ್ಯಾಚರಣೆಯ ಪರವಾನಗಿ ಪಡೆಯಲು ಒಂದು ಹೆಜ್ಜೆ ಹತ್ತಿರದಲ್ಲಿದೆ.

ಸರ್ಕಾರ ವಿಧಿಸಿರುವ ನಿಯಮಗಳಲ್ಲಿ ಡೇಟಾ ಸಂಗ್ರಹ ಮತ್ತು ಭದ್ರತೆಯು ಪ್ರಾಥಮಿಕವಾಗಿ ಸಂಬಂಧಿಸಿದೆ. ಸ್ಟಾರ್​ಲಿಂಕ್​ನಂತಹ ಜಾಗತಿಕ ಕಂಪನಿಗಳು ಈ ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಬೇಕಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲು ಒಪ್ಪಿಕೊಂಡಿದ್ದರೂ, ಕೆಲವು ನಿಯಮಗಳಲ್ಲಿ ಸ್ವಲ್ಪ ಸಡಿಲಿಕೆ ನೀಡುವಂತೆ ಕಂಪನಿಯು ಕೋರಿದೆ.

ಅಂದಹಾಗೆ ಭಾರತ ಸರ್ಕಾರದ ಪ್ರಮುಖ ಕಾಳಜಿಯು ಬಳಕೆದಾರರ ಡೇಟಾ ಕುರಿತಾಗಿದೆ. ಪರವಾನಗಿ ಪಡೆಯಬೇಕಾದಲ್ಲಿ ಇತರೆ ಸ್ಯಾಟಲೈಟ್​ ಸರ್ವೀಸ್​ ಪೂರೈಕೆದಾರರೊಂದಿಗೆ, ಎಲ್ಲ ಬಳಕೆದಾರರ ಡೇಟಾವನ್ನು ಭಾರತದೊಳಗೆ ಸ್ಟಾರ್​ಲಿಂಕ್​ ಕಂಪನಿ ಸಂಗ್ರಹಿಸಬೇಕು. ಅಗತ್ಯವಿದ್ದಾಗ ಗುಪ್ತಚರ ಸಂಸ್ಥೆಗಳು ಆ ಡೇಟಾವನ್ನು ಪಡೆಯಬಹುದು ಮತ್ತು ಪ್ರತಿಬಂಧಿಸಬಹುದು. ಈ ಷರತ್ತುಗಳು ಭಾರತದಲ್ಲಿ ಕಾರ್ಯನಿರ್ವಹಿಸಲು ಬಯಸುವ ಎಲ್ಲ ವಿದೇಶಿ ಉಪಗ್ರಹ ಇಂಟರ್ನೆಟ್ ಕಂಪನಿಗಳಿಗೆ ಅನ್ವಯಿಸುತ್ತದೆ ಮತ್ತು ಈ ವಿಚಾರದಲ್ಲಿ ಯಾವುದೇ ಸಡಿಲಿಕೆ ನೀಡಲಾಗುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

ಸ್ಟಾರ್‌ಲಿಂಕ್‌ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಪ್ರಸ್ತುತ ಭಾರತದ ಗೃಹ ಸಚಿವಾಲಯ ಮತ್ತು ವಿವಿಧ ಭದ್ರತಾ ಸಂಸ್ಥೆಗಳು ಪರಿಶೀಲಿಸುತ್ತಿವೆ. ಕಂಪನಿಯು ಇತ್ತೀಚೆಗೆ ಸಲ್ಲಿಸಿದ ಅರ್ಜಿಯ ನಂತರ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟೀಕರಣಗಳನ್ನು ಕಂಪನಿಯಿಂದ ಕೋರಿಲ್ಲ. ಆದಾಗ್ಯೂ, ಸ್ಯಾಟಲೈಟ್​ ಬ್ರಾಡ್‌ಬ್ಯಾಂಡ್ ಸೇವೆಗಳಿಗೆ ಒಂದು ನಿಯಮ ಚೌಕಟ್ಟನ್ನು ಅಂತಿಮಗೊಳಿಸಲು ದೂರಸಂಪರ್ಕ ಇಲಾಖೆ (DoT) ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI)ದ ಒಳಗೆ ಇನ್ನೂ ಕೆಲವು ಕೆಲಸಗಳು ನಡೆಯುತ್ತಲೇ ಇವೆ. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ, ಈ ವರ್ಷದ ಕೊನೆಯಲ್ಲಿ ಸ್ಯಾಟಲೈಟ್​ ಇಂಟರ್ನೆಟ್ ಸೇವೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ.

ಸದ್ಯಕ್ಕೆ ಸ್ಯಾಟಲೈಟ್​ ಇಂಟರ್ನೆಟ್ ಸೇವೆಗಳ ವೆಚ್ಚವು ಕಳವಳಕಾರಿ ವಿಷಯವಾಗಿದೆ. ಏಕೆಂದರೆ, ಇದು ದುಬಾರಿಯಾಗಿದೆ. ಸ್ಟಾರ್‌ಲಿಂಕ್‌ನ ಯೋಜನೆಗಳ ಬೆಲೆ ತಿಂಗಳಿಗೆ 10 ರಿಂದ 500 ಡಾಲರ್​ವರೆಗೆ ಇದ್ದು, ಹಾರ್ಡ್‌ವೇರ್‌ಗೆ ಹೆಚ್ಚುವರಿಯಾಗಿ 250 ರಿಂದ 380 ಡಾಲರ್​ ಇದೆ. ಈ ಬೆಲೆ ಭಾರತೀಯ ಟೆಲಿಕಾಂ ಕಂಪನಿಗಳು ನೀಡುವ ಸಾಂಪ್ರದಾಯಿಕ ಹೋಮ್ ಬ್ರಾಡ್‌ಬ್ಯಾಂಡ್ ಯೋಜನೆಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಪರಿಣಾಮವಾಗಿ ಸ್ಯಾಟಲೈಟ್​ ಇಂಟರ್ನೆಟ್ ಬೆಲೆಗಳನ್ನು ಕಡಿಮೆ ಮಾಡದ ಹೊರತು, ಭಾರತದ ಬೆಲೆ-ಸೂಕ್ಷ್ಮ ಮಾರುಕಟ್ಟೆಯಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net