ಈ ಒಂದು ಕೆಲ್ಸ ಮಾಡಿದ್ರೆ ಸಾಕು ಎಷ್ಟೇ ಅಪಾಯಕಾರಿ ಹಾವುಗಳು ಕೂಡ ನಿಮ್ಮ ಮನೆ ಹತ್ತಿರ ಸುಳಿಯಲ್ಲ! Snakes

Snake Bite
Published on

Snakes : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ( Snakes ) ಕೂಡ ಒಂದು. ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜಗತ್ತಿನಲ್ಲಿ ವಾಸಿಸುತ್ತಿರುವ ಜೀವಿಯಾಗಿದೆ. ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಎಲ್ಲ ಹಾವುಗಳು ವಿಷಕಾರಿಯಲ್ಲ. ಕೆಲವೊಂದು ಸೌಮ್ಯ ಸ್ವಭಾವಾದ ಹಾವುಗಳಿವೆ. ಕೆಲವು ಹಾವುಗಳು ಜೀವಕ್ಕೆ ಮಾರಕವಾಗುವ ವಿಷವನ್ನು ಹೊಂದಿರುತ್ತವೆ.

ದೇಶದಲ್ಲಿ ಚಳಿಗಾಲ ಮುಗಿಯುತ್ತಾ ಬರುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬೇಸಿಗೆಯ ಕಾವು ಹೆಚ್ಚಾಗಲಿದೆ. ಬೇಸಿಗೆಯ ಬಿಸಿ ಏರುತ್ತಿದ್ದಂತೆ ಹಾವುಗಳು ತಮ್ಮ ಬಿಲಗಳನ್ನು ಬಿಟ್ಟು ತಂಪಾದ ಸ್ಥಳಗಳನ್ನು ಅರಸುತ್ತಾ ಓಡಾಡಲಿವೆ. ಬಿಸಿಲು ಹೆಚ್ಚಾದಾಗ ಹಾವುಗಳು ತೇವಾಂಶವುಳ್ಳ ಸ್ಥಳಗಳನ್ನು ಹುಡುಕುವುದು ಸಾಮಾನ್ಯ. 28 ಡಿಗ್ರಿ ಸೆಲ್ಸಿಯಸ್ ಸಾಮಾನ್ಯ ತಾಪಮಾನದಲ್ಲಿ ಹಾವುಗಳು ಆರಾಮವಾಗಿ ಬದುಕಬಲ್ಲವು. ಅದಕ್ಕಿಂತ ಹೆಚ್ಚಾದರೆ, ತಂಪಾದ ಸ್ಥಳಗಳನ್ನು ಹುಡುಕಿಕೊಂಡು ಹೋಗಲಿವೆ.

ಆಗಾಗ ಬೀಳುವ ಬೇಸಿಗೆ ಮಳೆ ಮತ್ತು ಹೆಚ್ಚಿನ ತಾಪಮಾನದಿಂದಾಗಿ, ಹಾವುಗಳು ತಮ್ಮ ಬಿಲಗಳನ್ನು ಬಿಡುತ್ತವೆ. ಸುರಕ್ಷಿತ ಸ್ಥಳಗಳನ್ನು ಹುಡುಕುವಾಗ, ಜನರು ಎದುರಾದರೆ, ಹಾವು ಕಡಿಯುವುದು ಸಾಮಾನ್ಯ. ಇನ್ನು ಬೇಸಿಗೆ ಆರಂಭವಾಗುತ್ತಿದ್ದಂತೆ ಹಾವುಗಳ ಮಿಲನದ ಅವಧಿ ಕೂಡ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಗಂಡು ಹಾವುಗಳು, ಹೆಣ್ಣು ಹಾವುಗಳನ್ನು ಹುಡುಕಿಕೊಂಡು ಹೋಗುವಾಗ ಯಾರೇ ಎದುರಾದರೂ ಅವರಿಗೆ ಅಪಾಯ ತಪ್ಪಿದ್ದಲ್ಲ. ಅಲ್ಲದೆ, ಮನೆಗಳು ಮತ್ತು ಇತರ ಸ್ಥಳಗಳಲ್ಲಿ ಹಾವುಗಳು ಬರುವುದಕ್ಕೆ ಅವುಗಳ ಆವಾಸಸ್ಥಾನಗಳ ನಾಶವೇ ಪ್ರಮುಖ ಕಾರಣವೆಂದು ತಜ್ಞರು ಹೇಳಿದ್ದಾರೆ.

ಹಾವುಗಳು ಸಾಮಾನ್ಯವಾಗಿ ನೀರಿನ ಟ್ಯಾಂಕ್‌ಗಳು, ಸ್ನಾನಗೃಹಗಳು ಮತ್ತು ಮೆಟ್ಟಿಲುಗಳಂತಹ ತಂಪಾದ ಅಡಗುತಾಣಗಳನ್ನು ಹುಡುಕಲು ಮನೆಗಳ ಬಳಿ ಪ್ರವೇಶಿಸುತ್ತವೆ. ಬೇಸಿಗೆಯಲ್ಲಿ ಇವುಗಳ ಬಗ್ಗೆ ನೀವು ಜಾಗರೂಕರಾಗಿರಿ. ಕಿಟಕಿಗಳನ್ನು ತೆರೆದಿಡುವುದನ್ನು ಆದಷ್ಟು ತಪ್ಪಿಸಿ. ವಿಶೇಷವಾಗಿ ಉದ್ಯಾನಕ್ಕೆ ಎದುರಾಗಿರುವ ಕಿಟಕಿಗಳನ್ನು ತಪ್ಪದೇ ಮುಚ್ಚಿರಿ. ಏಕೆಂದರೆ, ಹಾವುಗಳು ಹತ್ತಿರದ ಮರಗಳ ಮೂಲಕ ಸುಲಭವಾಗಿ ಮನೆಯ ಒಳಗೆ ಪ್ರವೇಶಿಸಬಹುದು. ಮನೆಯ ಹತ್ತಿರ ಯಾವುದೇ ಕಾರಣಕ್ಕೂ ಉರುವಲುಗಳನ್ನು ಜೋಡಿಸಬೇಡಿ.

ಎಲೆಗಳು, ಹುಲ್ಲು ಮತ್ತು ಮರದ ತುಂಡುಗಳನ್ನು ಅಜಾಗರೂಕತೆಯಿಂದ ರಾಶಿ ಹಾಕುವುದನ್ನು ತಪ್ಪಿಸಿ. ಕಿಟಕಿಗಳ ಬಳಿ ವಾಹನಗಳನ್ನು ನಿಲ್ಲಿಸಬೇಡಿ. ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಯಾವಾಗಲೂ ಸ್ವಚ್ಛವಾಗಿಡಿ. ಕಾಡುಗಳಿಂದ ಆವೃತವಾದ ಹೊಲಗಳಲ್ಲಿ ಯಾವಾಗಲೂ ಹಾವುಗಳ ಉಪಸ್ಥಿತಿ ಇದ್ದೇ ಇರುತ್ತದೆ. ಮನೆಯ ನೆಲದ ಬಳಿ ಗಿಡಗಳ ಕುಂಡಗಳನ್ನು ಇಡಬೇಡಿ. ನೀವು ಸಸ್ಯಗಳಿಗೆ ನೀರುಣಿಸುವುದರಿಂದ, ತಣ್ಣನೆಯ ಅನುಭವ ಪಡೆಯಲು ಹಾವುಗಳು ಅವುಗಳಲ್ಲಿ ಅಡಗಿಕೊಳ್ಳುವ ಸಾಧ್ಯತೆ ಇದೆ.

ಮನೆಯ ಹೊರಗೆ ಇಟ್ಟಿರುವ ಚಪ್ಪಲಿ ಮತ್ತು ಶೂಗಳನ್ನು ಧರಿಸುವ ಮೊದಲು ಒಮ್ಮೆ ಪರಿಶೀಲಿಸುವುದನ್ನು ಮರೆಯಬೇಡಿ. ಏಕೆಂದರೆ, ಹಾವುಗಳು ಒಳಗೆ ಹೋಗುವ ಸಾಧ್ಯತೆ ಇರುತ್ತದೆ. ಮನೆಯ ಗೋಡೆಗಳ ಮೇಲೆ ಬೆಳೆಯುತ್ತಿರುವ ಸಸ್ಯಗಳು ಮತ್ತು ಮನೆಯ ಹತ್ತಿರವಿರುವ ಮರದ ಕೊಂಬೆಗಳನ್ನು ಕತ್ತರಿಸಬೇಕು. ಈ ಕೆಲಸಗಳನ್ನು ಮಾಡಿದರೆ, ಎಷ್ಟೇ ಅಪಾಯಕಾರಿ ಹಾವುಗಳು ಕೂಡ ನಿಮ್ಮ ಮನೆಯ ಬಳಿ ಸುಳಿಯುವುದಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net